ಕಾರಟಗಿ: ‘ಮುಂಗಾರು ಹಂಗಾಮಿಗೆ ಭತ್ತದ ನಾಟಿಗೆ ಕೂಲಿಕಾರರ ಸಮಸ್ಯೆ ತಲೆದೋರಿದ್ದು, ಪರ್ಯಾಯ ಮಾರ್ಗದ ಅನಿವಾರ್ಯತೆ ಅವಶ್ಯಕವಾಗಿದೆ. ಕೃಷಿ ಚಟುವಟಿಕೆಗಳಲ್ಲಿ ಯಂತ್ರಗಳ ಮೊರೆ ಹೋಗಬೇಕಿರುವ ಅನಿವಾರ್ಯತೆ ಎದುರಾಗಿದ್ದು, ಯಾಂತ್ರೀಕರಣದ ಮೂಲಕ ಭತ್ತದ ಬಿತ್ತನೆಗೆ ರೈತರು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ನಲೀನ್ ಆತುಲ್ ಹೇಳಿದರು.
ತಾಲ್ಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ನಡೆದ ಜನ ಸ್ಪಂದನ ಕಾರ್ಯಕ್ರಮದ ಬಳಿಕ ಗ್ರಾಮದ ತಾಪಂ ಮಾಜಿ ಸದಸ್ಯ ನೀರಗಂಟಿ ಬಸವರಾಜರ ಜಮೀನಿನಲ್ಲಿ ಭತ್ತ ನಾಟಿ ಮಾಡುವ ಟ್ರ್ಯಾಕ್ಟರ್ ಚಲಾಯಿಸಿ ಚಾಲನೆ ನೀಡಿದರು.
ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೇಯ, ಡ್ರಮ್ ಸೀಡರ್ ಎಂಬ ಯಂತ್ರದ ಮೂಲಕ ಭತ್ತದ ಬಿತ್ತನೆಯ ಕಾರ್ಯಕ್ಕೆ ಚಾಲನೆ ನೀಡಿದರು. ‘ಡ್ರಮ್ ಸೀಡರ್‌ನಿಂದ ಭತ್ತ ಬಿತ್ತನೆಯ ವಿಧಾನವನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ಅಳವಡಿಸಿಕೊಳ್ಳಬಹುದಾಗಿದೆ. ಇದರಿಂದ ವೆಚ್ಚದ ಪ್ರಮಾಣ ತಗ್ಗುತ್ತದಲ್ಲದೇ, ಸಕಾಲಕ್ಕೆ ಭತ್ತದ ಬಿತ್ತನೆ ಮಾಡಬಹುದಾಗಿದೆ’ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ‘ಯಾಂತ್ರಿಕೃತ ನಾಟಿ ಪದ್ಧತಿಯಲ್ಲಿ ಚಾಪೆ ಮಡಿ ಪದ್ಧತಿಯಲ್ಲಿ ಬೆಳೆದ ಸಸಿಗಳನ್ನು ಈ ಯಂತ್ರದಿಂದ 8 ತಾಸಿನಲ್ಲಿ 8 ಎಕರೆ ಪ್ರದೇಶವನ್ನು ಏಕಕಾಲಕ್ಕೆ ನಾಟಿ ಮಾಡಬಹುದು. ಕೃಷಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಲಹೆ ಪಡೆದು ಹೆಚ್ಚಿನ ರೈತರು ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೂಲಿಕಾರರ ಸಮಸ್ಯೆ ನೀಗಿಸಿಕೊಳ್ಳಬಹುದು. ಮಣ್ಣಿನ ಗುಣಕ್ಕೆ ತಕ್ಕಂತೆ ಸಸಿಗಳ ನಡುವಿನ ಅಂತರ ಮತ್ತು ನಾಟಿ ಮಾಡುವ ಆಳವನ್ನು ಹೊಂದಾಣಿಕೆ ಮಾಡಲು ಅವಕಾಶವಿದೆ. 16ರಿಂದ 18 ದಿನದ ಸಸಿಗಳು ನಾಟಿಗೆ ಸೂಕ್ತ ಮತ್ತು ಶೇ 15ರಿಂದ 20ರಷ್ಟು ಇಳುವರಿ ಹೆಚ್ಚಾಗುವ ಸಾಧ್ಯತೆ ಇದೆ.
‘2024- 25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಿದ್ಧಾಪುರ ಹೋಬಳಿಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಿದೆ. ಯಾಂತ್ರಿಕೃತ ನಾಟಿ ಪದ್ಧತಿ ಉತ್ತೇಜಿಸಲು ಕೃಷಿ ಇಲಾಖೆ ವಿವಿಧ ರೈತರ ಗದ್ದೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದ್ದು, 5 ಸಾವಿರ ಎಕರೆ ಪ್ರದೇಶದಲ್ಲಿ ಯಾಂತ್ರಿಕೃತ ಭತ್ತದ ನಾಟಿ ಗುರಿ ಹೊಂದಲಾಗಿದೆ’ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಎಲಿಗಾರ, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಸಿಬ್ಬಂದಿ ನಿಂಗಪ್ಪ, ಮಾರುತಿ, ನಾಗರಾಜ, ಮೇಘಶ್ರೀ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.