ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣದಾಸೆಗೆ ನಗರಸಭೆ ಅಧ್ಯಕ್ಷ ರೆಡ್ಡಿ ಬಳಿಗೆ ಸೇರಿದ್ದ: ಎಸ್.ಬಿ ಖಾದ್ರಿ

Published : 5 ಸೆಪ್ಟೆಂಬರ್ 2024, 5:23 IST
Last Updated : 5 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments

ಗಂಗಾವತಿ: ‘ಕಾಂಗ್ರೆಸ್ ಪಕ್ಷದಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ಇದೀಗ ಬಿಜೆಪಿ ಪಕ್ಷದ ನಗರಸಭೆ ಸದಸ್ಯರ ಬೆಂಬಲದಿಂದ ಅಧ್ಯಕ್ಷರಾದ ಮೌಲಸಾಬ ಅವರು ಹಣದಾಸೆಗೆ ಜಿ.ಜನಾರ್ದನ ರೆಡ್ಡಿ ಬಳಿಗೆ ಸೇರಿದ್ದಾರೆಯೇ ಹೊರತು, ಬಿಜೆಪಿ ಮೇಲಿನ ಪಕ್ಷನಿಷ್ಠೆ, ಪ್ರೀತಿಯಿಂದಲ್ಲ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಎಸ್.ಬಿ ಖಾದ್ರಿ ಹೇಳಿದರು.

ನಗರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜನಾರ್ದನರೆಡ್ಡಿ ಬಳಿಯಿಂದ ಹಣ ಕಿತ್ತಲೆಂದು ಕಾಂಗ್ರೆಸ್ಸಿನ ಕೆಲ ಸದಸ್ಯರು ಪಕ್ಷ ಬಿಟ್ಟು ಕೆಆರ್‌ಪಿಪಿ ಸೇರಿದ್ದರು. ಅದರಲ್ಲಿ ಮೌಲಸಾಬ ಸಹ ಒಬ್ಬರು.

‘ಹಣದಾಸೆಗೆ ರೆಡ್ಡಿ ಬಳಿಗೆ ತೆರಳಿ, ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ ಹೀನರು. ಇದೀಗ ನಗರಸಭೆ ಅಧ್ಯಕ್ಷ ಸ್ಥಾನ ದೊರಕಿದೆ’ ಎಂದು ಅನ್ಸಾರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮೌಲಸಾಬ ಅವರೇ ನೀವು ಸ್ವಂತ ಶಕ್ತಿಯಿಂದ ಗೆದ್ದಿಲ್ಲ. ಬದಲಾಗಿ ಅನ್ಸಾರಿ ಅವರು ಟಿಕೆಟ್ ನೀಡಿ, ಹಣ ಸಹಾಯ ಮಾಡಿದ್ದರಿಂದಲೇ ಗೆದ್ದಿದ್ದೀರಿ’ ಎಂಬುದನ್ನು ಮರೆಯದಿರಿ’ ಎಂದು ಆಕ್ರೋಶ ಹೊರಹಾಕಿದರು.

ಮೌಲಸಾಬ ಎಲ್ಲ ಪಕ್ಷಗಳಿಂದ ಸ್ಪರ್ಧಿಸಿ ಸೋಲು ಕಂಡ ನಂತರ, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲುವಂತೆ ಅನ್ಸಾರಿ ಮಾಡಿದ್ದಾರೆ. ಆದರೆ ಮೌಲಸಾಬ ಅವರಿಗೆ ಕೃತಜ್ಞತೆ ಇಲ್ಲ. ಕೇವಲ ಹಣಕ್ಕಾಗಿ ರೆಡ್ಡಿ ಬಳಿಗೆ ಸೇರಿದ್ದಾನೆ. ಬಿಜೆಪಿಗರು ನಗರಸಭೆ ಆಡಳಿತದಲ್ಲಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷ ಸ್ಥಾನವಿಲ್ಲ’ ಎಂದು ಹತಾಶರಾಗಿ ಅನ್ಸಾರಿ ವಿರುದ್ದ ಮೌಲಸಾಬ ಅವರಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ನಿಜಕ್ಕೂ ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವುದು ಕಾನೂನು ಪ್ರಕಾರ ಕಾಂಗ್ರೆಸ್ ಸದಸ್ಯರೇ ಆಗಿರುತ್ತಾರೆ. ಬಿಜೆಪಿ ಸೇರ್ಪಡೆ ಆಗಿದ್ದಾರೆ ಎನ್ನುವ ಬಿಜೆಪಿ ನಾಯಕರೇ, ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ, ಅಧಿಕೃತವಾಗಿ ಬಿಜೆಪಿಗೆ ಸೇರಿದ ಕುರಿತ ದಾಖಲೆ ಹೊರಹಾಕಿ’ ಎಂದು ಸವಾಲು ಹಾಕಿದರು.

‘ಗಂಗಾವತಿ ನಗರದ ಅಭಿವೃದ್ಧಿ ಶೂನ್ಯವಾಗಿದೆ. ಎಲ್ಲೆಂದರಲ್ಲೆ ಕಸ, ಚರಂಡಿ ಸ್ವಚ್ಚತೆಯಿಲ್ಲ. ನೀರು ಪೂರೈಕೆಯಿಲ್ಲ. ರಸ್ತೆಗಳು ಹದಗೆಟ್ಟಿವೆ. ಇವ್ಯಾವ ಕೆಲಸಗಳೂ ನಡೆಯುತ್ತಿಲ್ಲ. ಬದಲಾಗಿ ಇಲ್ಲಸಲ್ಲದ ವಿಚಾರಗಳಿಗೆ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭೆ ಆಡಳಿತ ಗೊಂದಲಮಯಕಾರಿಯಾಗಿ ಇರಲಿದೆ’ ಎಂದು ದೂರಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಖಾಸಿಂಸಾಬ ಗದ್ವಾಲ್, ಖಾಸಿಂಸಾಬ ಮುದ್ದಾಬಳ್ಳಿ, ಯಮನಪ್ಪ ವಿಠಲಾಪೂರ, ಮನೋಹರಸ್ವಾಮಿ, ಎಫ್.ರಾಘವೇಂದ್ರ, ಜುಬೇರ್, ವಿರುಪಾಕ್ಷಗೌಡ ಪಾಟೀಲ, ಮಲ್ಲಿಕಾರ್ಜನ ತಟ್ಟಿ, ರಾಮು ಕಿರಿಕಿರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT