ಸೋಮವಾರ, ಡಿಸೆಂಬರ್ 6, 2021
24 °C

dnp ಶಾಲೆಗಳಿಗೆ ಉಪನಿರ್ದೇಶಕರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ‘ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿವೆ. ಮೊದಲನೇ ದಿನವೇ ಉತ್ತಮ ಹಾಜರಾತಿ ಕಂಡು ಬಂದಿದೆ. ಸಂತಸ ತಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಹೇಳಿದರು.

ಇಲ್ಲಿನ ವಿವಿಧ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ.ಎಂ ಅವರೊಂದಿಗೆ ಭೇಟಿ ನೀಡಿ, ಬಿಸಿಯೂಟ, ಶಿಕ್ಷಕರ ಬೋಧನಾ ವಿಧಾನ, ವಿದ್ಯಾರ್ಥಿಗಳ ಹಾಜರಾತಿ ಪರಿಶೀಲಿಸಿದ ಬಳಿಕ ಮಾತನಾಡಿದರು.

ಬಾಲಕರ ಪ್ರೌಢ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಾಜವಿಜ್ಞಾನ ಶಿಕ್ಷಕ ಕಿಶನರಾವ್ ಕುಲಕರ್ಣಿ ಅವರು ತಯಾರಿಸಿದ ಸರಳ ಡಿಜಿಟಲ್ ಕಲಿಕಾ ತಂತ್ರಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ ಇವುಗಳನ್ನು ತಯಾರಿಸುವ ವಿಧಾನದ ಕುರಿತು ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತಂತ್ರಜ್ಞಾನ ಶಿಕ್ಷಕರ ಒಂದು ತಂಡ ಮಾಡುವ ಉದ್ದೇಶವಿದೆ. ಆ ಮೂಲಕ ಹೊಸ ಬೋಧನಾ ವಿಧಾನವನ್ನು ಜಿಲ್ಲೆಯ ಶಿಕ್ಷಕರಿಗೆ ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದರು.

ಬಾಲಕರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಪರಿಶೀಲಿಸಿದರು.

ಪಾಲಕರೊಂದಿಗೆ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳಿಸಿದ್ದು ಸಂತೋಷ ತಂದಿದೆ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಬೋಧನೆ ಹಾಗೂ ಕಲಿಕೆಯ ಮಟ್ಟ ಪರಿಶೀಲಿಸಿದರು.

ಕಲಿಕಾ ಪೂರಕ ಚಟುವಟಿಕೆಗಳೊಂದಿಗೆ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಲು ಕಾರಣವಾಗುತ್ತದೆ. ಸದ್ಯ ಬೋಧನಾ ವಿಧಾನ ಬದಲಾಗಿದ್ದು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಟುವಟಿಕೆ ನೀಡುವುದರ ಮೂಲಕ ಅವರು ಕಲಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಿಸಿಯೂಟ ಕೋಣೆಗೆ ಭೇಟಿ ನೀಡಿ, ಆಹಾರ ಹಾಗೂ ಧಾನ್ಯದ ಗುಣಮಟ್ಟ ಪರಿಶೀಲಿಸಿ ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಳಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ.ಎಂ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ.ಎಂ, ಮುಖ್ಯಶಿಕ್ಷಕ ಹುಸೇನಸಾಬ ಇಲಕಲ್ಲ, ನಂದೂಲಾಲ ದಲಭಂಜನ್, ಪ್ರಭಾರ ಮುಖ್ಯಶಿಕ್ಷಕ ಅಮರೇಶ ತಮ್ಮಣ್ಣವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.