ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ನೀಡಿ ಮಕ್ಕಳ ಸ್ವಾಗತಿಸಿದ ಶಾಸಕ: ಕೆ.ರಾಘವೇಂದ್ರ ಹಿಟ್ನಾಳ

ಅಂಗನವಾಡಿ: 1.59 ಲಕ್ಷ ಮಕ್ಕಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಜರು: ಮನೆ, ಮನೆಗೆ ತೆರಳಿದ ಕಾರ್ಯಕರ್ತೆಯರು
Last Updated 9 ನವೆಂಬರ್ 2021, 6:13 IST
ಅಕ್ಷರ ಗಾತ್ರ

ಕೊಪ್ಪಳ: ಕೋವಿಡ್ ಕಾರಣ ಸ್ಥಗಿತಗೊಂಡಿದ್ದ ಅಂಗನವಾಡಿಗಳು ಸೋಮವಾರ ಆರಂಭಗೊಂಡವು.

ನಗರದ ಶಾಸಕರ ಮಾದರಿಯ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಗುಲಾಬಿ ಹೂ, ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಜಿಲ್ಲೆಯಾದ್ಯಂತ 1850 ಅಂಗನವಾಡಿಗಳಿದ್ದು, 1,59 ಲಕ್ಷ ಮಕ್ಕಳಿದ್ದಾರೆ. ಸೋಮವಾರ ಕೇಂದ್ರಗಳಿಗೆ 30 ಸಾವಿರಕ್ಕೂ ಹೆಚ್ಚು ಮಕ್ಕಳು ಬಂದಿದ್ದರು. ಎರಡು ತಾಸು ಕೇಂದ್ರಗಳು ಆರಂಭಗೊಂಡವು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು.

ರಾಜ್ಯದಲ್ಲಿ ಕೊರೊನಾ ಸೋಂಕು ಬಹುಪಾಲು ಹತೋಟಿಗೆ ಬಂದಿದ್ದು, ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿವೆ. ಪೂರ್ಣ ಅವಧಿಗೆ ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಕೆಲವು ಕೇಂದ್ರಗಳನ್ನು ಅಂಗನವಾಡಿ ಕಾರ್ಯಕರ್ತೆಯ ರುತಳಿರು-ತೋರ ಣದಿಂದ ಸಿಂಗರಿಸಿದ್ದರು. ಮನೆ, ಮನೆಗೆ ತೆರಳಿ ಕೇಂದ್ರ ಆರಂಭ ಮಾಡುವ ಕುರಿತು ಪಾಲಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಕರೆ ತಂದರು. ಮೊದಲ ದಿನವಾದ್ದರಿಂದ ಮಕ್ಕಳೊಂದಿಗೆ ಪಾಲಕರನ್ನು ಆಹ್ವಾನಿಸಲಾಗಿತ್ತು.

ಕೆಲವೆಡೆ ಶೇ.100ರಷ್ಟು ಮಕ್ಕಳು ಬಂದಿದ್ದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ಗಂಟೆವರೆಗೆ ಸಮಯ ನಿಗದಿ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೊಪ್ಪಳ ನಗರದ ಕೋಟೆ ಏರಿಯಾ ಸೇರಿದಂತೆ ನಾಲ್ಕೈದು ಅಂಗನವಾಡಿಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಇನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಲ್ಲಿ 1550 ಮಕ್ಕಳು ಈ ವರ್ಷ ಎಲ್‌ಕೆಜಿ, ಯುಕೆಜಿಗೆ ಪ್ರವೇಶ ಪಡೆದಿದ್ದು, ತರಗತಿಗಳಿಗೆ ಹಾಜರಾದರು.

‘ಸರ್ಕಾರದ ನಿಯಮಾವಳಿ ಪ್ರಕಾರ ಅಂಗನವಾಡಿಗಳನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದು, ಎಲ್ಲ ಕೇಂದ್ರಗಳ ಮೇಲ್ವಿಚಾರಕರು ಹಾಜರಿದ್ದರು. ಮಕ್ಕಳಿಗೆ ಪೌಷ್ಟಿಕ ಆಹಾರ, ಪುಷ್ಟಿ ಪೊಟ್ಟಣ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಆರಂಭಿಸಲಾಗುವುದು’ ಎಂದು ಸಿಡಿಪಿಒ ರೋಹಿಣಿ ತಿಳಿಸಿದರು.

ಕೊರೊನಾ ಆತಂಕ ಬಹುತೇಕ ಕಡಿಮೆಯಾಗಿದ್ದು, ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆ ಮತ್ತು ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶೀಘ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದು, ಅಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನಗರಸಭೆಯ ಸದಸ್ಯ ಅರುಣ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮುಂತಾದವರು ಇದ್ದರು.

ಕಾರಟಗಿ: ಚಿಣ್ಣರ ಸಂಭ್ರಮ

ಕಾರಟಗಿ: ಕೊರೊನಾ ಕಾರಣ ಎರಡು ವರ್ಷಗಳಿಂದ ಬಂದ್‌ ಆಗಿದ್ದ ಅಂಗನವಾಡಿ ಕೇಂದ್ರಗಳು ಸೋಮವಾರ ಆರಂಭವಾದವು.

ಅಂಗನವಾಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಂಗೋಲಿ ಹಾಕಲಾಗಿತ್ತು.

ಜನಪ್ರತಿನಿಧಿಗಳು, ಮೇಲ್ವಿಚಾ ರಕಿಯರು, ಕಾರ್ಯಕರ್ತೆಯರು, ಸಹಾಯಕಿಯರು ಚಿಣ್ಣರನ್ನು ಪ್ರೀತಿಯಿಂದ ಸ್ವಾಗತಿಸಿದರು.

ಭುವನೇಶ್ವರಿ ಹಾಗೂ ಶಾರದೆಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಕಾರಟಗಿ ಪಟ್ಟಣದ 35 ಹಾಗೂ ಗ್ರಾಮೀಣ ಪ್ರದೇಶದ 111 ಕೇಂದ್ರಗಳಲ್ಲಿ ಮಕ್ಕಳನ್ನು ಬರ ಮಾಡಿಕೊಳ್ಳಲಾಯಿತು.

‘ಮಕ್ಕಳಿಗೆ ಕಲಿಕಾಸಕ್ತಿ ಬೆಳೆಸಿ’

ಕಲಕೇರಿ (ಕನಕಗಿರಿ): ‘ಅಂಗನವಾಡಿ ಕೇಂದ್ರದ ಮೂಲಕವೇ ಮಕ್ಕಳಿಗೆ ಕಲಿಕಾಸಕ್ತಿ ಬೆಳೆಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ. ಕಾವ್ಯಾರಾಣಿ ತಿಳಿಸಿದರು.

ಸಮೀಪದ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಕೇರಿ ಗ್ರಾಮದಲ್ಲಿ ಸೋಮವಾರ ನಡೆದ ಅಂಗನವಾಡಿ ಆರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಭವಿಷ್ಯ ರೂಪಿಸುವುದೇ ಶಿಕ್ಷಕರು. ಶ್ರಮ ವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಅಂಗನವಾಡಿ ಕೇಂದ್ರದಲ್ಲಿ ಕಲಿಕೆಗೆ ಪೂರಕವಾದ ವಾತಾವರಣವನ್ನು ಗ್ರಾಮ ಪಂಚಾಯಿತಿಯವರು ಮೂಡಿಸಿರು ವುದು ಶ್ಲಾಘನೀಯವಾಗಿದೆ. ಖಾಸಗಿ ಶಾಲೆಗಳಲ್ಲಿ ಇರುವಂತೆ ಬಣ್ಣ ಬಣ್ಣದ ಕುರ್ಚಿಗಳು, ಆಕರ್ಷಕ ಗೊಂಬೆ ಚಿತ್ರಗಳು, ಆಟಿಕೆ ಸಾಮಗ್ರಿಗಳು ಇರುವುದು ಕಲಿಕೆಯಲ್ಲಿ ಆಸಕ್ತಿ ಬೆಳಸಲು ಪೂರಕವಾಗಿದೆ. ಪ್ರತಿಯೊಬ್ಬರೂ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಾಸ್ಕ್, ಗುಲಾಬಿ ಹೂ, ಚಾಕೋಲೆಟ್‌, ಹಾಗೂ ಪೆನ್ಸಿಲ್ ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಿಕೊಳ್ಳಲಾಯಿತು.

ಕಳೆದ ಎರಡು ವರ್ಷದಿಂದ ಬಂದ್‌ ಆಗಿದ್ದ ಅಂಗನವಾಡಿ ಕೇಂದ್ರಗಳು ಪುನಃ ಆರಂಭಗೊಂಡಿದ್ದರಿಂದ ಪಾಲಕರು ಸಂತಸ ವ್ಯಕ್ತಪಡಿಸಿದರು.

ಪಿಡಿಒ ಶಂಷೀರ್ ಅಲಿ, ಸದಸ್ಯರಾದ ಲಕ್ಷ್ಮೀ ಬೆಟ್ಟಪ್ಪ, ಯಮನೂರಪ್ಪ, ಅಂಗನವಾಡಿ ಕಾರ್ಯಕರ್ತೆ ಸವಿತಾ ಹಾಗೂ ಗ್ರಾ.ಪಂ. ಸಿಬ್ಬಂದಿ ಇದ್ದರು.

ಖುಷಿಯಿಂದ ಅಂಗನವಾಡಿಗಳತ್ತ ಬಂದ ಮಕ್ಕಳು

ಯಲಬುರ್ಗಾ: ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ಬಂದ್‌ ಆಗಿದ್ದ ಅಂಗನವಾಡಿ ಕೇಂದ್ರಗಳ ಪ್ರಾರಂಭೋತ್ಸವ ಕಾರ್ಯಕ್ರಮ ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ವಜ್ರಗಂಡಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿ,‘ಎರಡು ವರ್ಷಗಳ ಕಾಲ ಮನೆಯಲ್ಲಿಯೇ ಉಳಿದಿದ್ದ ಮಕ್ಕಳು ಕೇಂದ್ರಕ್ಕೆ ಖುಷಿಯಿಂದಲೇ ಆಗಮಿಸಿದ್ದಾರೆ. ಕೇಂದ್ರ ತೆರೆಯುವುದನ್ನೆ ಎದುರು ನೋಡುತ್ತಿದ್ದ ಮಕ್ಕಳಿಗೆ ಅದ್ದೂರಿಯ ಸ್ವಾಗತ ಕೋರಿ ಅವರಿಗೆ ಹೂ ಕೊಟ್ಟು ಬರಮಾಡಿಕೊಳ್ಳಲಾಯಿತು. ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಹಬ್ಬದ ವಾತಾವರಣ ನಿರ್ಮಾಣಗೊಳ್ಳುವ ರೀತಿಯಲ್ಲಿ ನಡೆದುಕೊಳ್ಳುವಂತೆ ಸೂಚಿಸಿದ್ದರ ಕಾರಣ ಬಹುತೇಕ ಕೇಂದ್ರಗಳಲ್ಲಿ ಇದೇ ಮಾದರಿಯಲ್ಲಿ ಪ್ರಾರಂಭದ ಸಂಭ್ರಮ ಕಂಡು ಬಂದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ಕೊಡುವುದು, ಆರೈಕೆ ಉತ್ತಮವಾಗಿಡುವುದು ಹಾಗೂ ಅತ್ಯಂತ ಸುರಕ್ಷಿತವಾಗಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರದ ಕಾರ್ಯಕರ್ತೆಯರು ಹಾಗೂ ಸಹಾಯಕರ ಮೇಲಿದೆ. ಈ ಎಲ್ಲ ಉಸ್ತುವಾರಿಗಳನ್ನು ಪಂಚಾಯಿತಿ ಅಧಿಕಾರಿಗಳು ನೋಡಿಕೊಳ್ಳುತ್ತಿರುತ್ತಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರಗಳ ಪಾತ್ರ ದೊಡ್ಡದಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ಮಕ್ಕಳ ವಿಕಾಸಕ್ಕೆ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಗ್ರಾ.ಪಂ. ಅಧ್ಯಕ್ಷೆ ಸುಮಾ ಶಂಕರಗೌಡ ಮಾಲಿಪಾಟೀಲ, ಸದಸ್ಯರಾದ ಯಮನಪ್ಪ ಕುರ್ನಾಳ, ನಾಗರತ್ನ ಅರಳಿ, ನಾಗಪ್ಪ ಭಜಂತ್ರಿ, ಫಕ್ಕಿರಮ್ಮ ಈಳಗೇರ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ನಜೀಮಾಬೇಗಂ, ಮಂಜುನಾಥ ಈಳಗೇರ, ನಿಲಪ್ಪ ಜಗ್ಗರ, ದುರಗಪ್ಪ ಪೂಜಾರ, ಅಂಗನವಾಡಿ ಕಾರ್ಯಕರ್ತ ಶರಣಮ್ಮ ಹಿರೇಮಠ, ವಿಜಯಲಕ್ಷ್ಮಿ ತೋಟದ ಹಾಗೂ ಸುನಂದ ಮುಲ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT