ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರಾಸುಗಳಿಗೆ ಚರ್ಮಗಂಟು ರೋಗ, ರೈತರ ಆತಂಕ

ಪಶು ಸಂಗೋಪನಾ ಇಲಾಖೆಗೆ ಸೂಕ್ತ ಔಷಧೋಪಚಾರಕ್ಕೆ ಮೊರೆ
Last Updated 18 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಹಾಗೂ ಲಿಂಪಿಸ್ಕಿನ್ ರೋಗ ಆವರಿಸಿಕೊಂಡಿದ್ದು ಕೃಷಿಕರು ಆತಂಕಗೊಂಡಿದ್ದಾರೆ.

ಸಾಕು ಪ್ರಾಣಿಗಳಾದ ಹಸು, ಎತ್ತು, ಕರುಗಳಿಗೆ ಅದರಲ್ಲೂ ವಿಶೇಷವಾಗಿ ಜವಾರಿ ಜಾನುವಾರುಗಳಿಗೆ ಈ ರೋಗ ಆವರಿಸಿದೆ. ಇದರಿಂದ ರಾಸುಗಳ ಮೈ ತುಂಬಾ ನೀರುಗುಳ್ಳೆಯಂತಹ ಚರ್ಮವ್ಯಾಧಿ ಗೋಚರಿಸಿದೆ.

ಈ ಮೂಖಪ್ರಾಣಿಗಳ ಗೋಳಾಟ ಕಂಡು ಜಾನುವಾರು ಮಾಲೀಕರು ಮಮ್ಮಲ ಮರಗುತ್ತಿದ್ದಾರೆ. ತಂಪಾದ, ಮೋಡ ಕವಿದ ಮತ್ತು ಜಿಟಿಜಿಟಿ ಮಳೆಯ ವಾತಾವರಣದಿಂದ ರಾಸುಗಳು ಮತ್ತಷ್ಟು ಸಂಕಷ್ಟ ಅನುಭವಿಸುತ್ತಿವೆ.

ಈ ರೋಗ ಹಿನ್ನೆಲೆಯಲ್ಲಿ ರಾಸುಗಳ ಬಾಯಲ್ಲಿ ನೀರಿನಂತಹ ದ್ರವ ದ್ರವಿಸುತ್ರಿದೆ. ಕಣ್ಣಿನಲ್ಲಿ ಸಹ ಧಾರಾಕಾರ ನೀರು ಸುರಿದು ರಾಸುಗಳು ನಿತ್ರಾಣ ಸ್ಥಿತಿ ತಲುಪಿವೆ. ಇದರಿಂದ ಸಾಕುಪ್ರಾಣಿ ಮಾಲೀಕರು ದಿಕ್ಕು ತೋಚದಂತಾಗಿದ್ದಾರೆ.

ಶಹಪುರ, ಗುಡದಳ್ಳಿ,‌ಲಿಂಗದಹಳ್ಳಿ, ಅಗಳಕೇರಿ, ಹಿಟ್ನಾಳ, ಕೆರೆಹಳ್ಳಿ, ಬೂದುಗುಂಪಾ, ಇಂದರಿಗಿ ಸೇರಿದಂತೆ ನಾನಾ ಹಳ್ಳಿಹಳ್ಳಿಗಳಲ್ಲಿ ಇದೇ ಸಮಸ್ಯೆ ತಲೆದೋರಿದೆ.

ಕಳೆದ ಹದಿನೈದು ಇಪ್ಪತ್ತು ದಿನಗಳಿಂದಲೂ ಈ ಚರ್ಮ ರೋಗ ಆತಂಕಕ್ಕೀಡು ಮಾಡುತ್ತಿದೆ.‌ ಆದಾಗ್ಯೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರಕ್ಕೆ ವ್ಯಾಪಕ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಈಚೆಗೆ ಹನಮಸಾಗರದಲ್ಲಿ ಸೊಳ್ಳೆ ಕಡಿತದಿಂದ ಜಾನುವಾರುಗಳು ಸತ್ತ ವರದಿಯಾಗಿದೆ. ರೈತರ ಜೀವನಾಡಿಯಾದ ರಾಸುಗಳ ರಕ್ಷಣೆಗೆ ಪಶು ಸಂಗೋಪನಾ ಇಲಾಖೆ ಮುಂದಾಗಬೇಕಿದೆ.

ರೋಗದ ಲಕ್ಷಣ ಮತ್ತು ನಿಯಂತ್ರಣ: ಜಾನುವಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಾಣೆ ಮಾಡುತ್ತಿದ್ದರೆ ಈ ರೋಗ ವ್ಯಾಪಕವಾಗಿ ಹರಡುತ್ತದೆ. ಸೊಳ್ಳೆ ಮತ್ತು ನೊಣಗಳು ಕಚ್ಚುವುದರಿಂದ ರಕ್ತ ಹೀನತೆ ಉಂಟಾಗುತ್ತದೆ. ಇದರಿಂದ ದನಗಳಲ್ಲಿ ಅಶಕ್ತಿ ಉಂಟಾಗಿ ಸಾವು ಸಂಭವಿಸಬಹುದು.

ಹೈನು ಮಾಡುತ್ತಿದ್ದ ದನಗಳಲ್ಲಿ ಹಾಲು ಇಂಗಿ ಹೋಗುತ್ತದೆ. ರೈತರು ಕಾಳಜಿಯಿಂದ ದನಗಳ ಪೋಷಣೆ ಮಾಡಬೇಕು. ಕೊಟ್ಟಿಗೆಗಳನ್ನು ಸ್ಬಚ್ಛತೆ ಇಟ್ಟುಕೊಂಡು ಸೊಳ್ಳೆಗಳ ಶಮನಕಾರಿ ಔಷಧ ಸಿಂಪಡಿಸಬೇಕು. ಮನೆ ಮದ್ದು ಉತ್ತಮ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT