ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ: ಅನುರಣಿಸಿದ ‘ಜೈ ಶ್ರೀರಾಮ್‌’ ಜೈಕಾರ

ಹನುಮಮಾಲಾ ವಿಸರ್ಜನೆ ಸಡಗರ: ಊಟಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ, ಭಕ್ತರಿಂದ ಮೆಚ್ಚುಗೆ
Last Updated 6 ಡಿಸೆಂಬರ್ 2022, 4:35 IST
ಅಕ್ಷರ ಗಾತ್ರ

ಗಂಗಾವತಿ: ಆಗಿನ್ನೂ ಚುಮು ಚುಮು ಎನ್ನುವಂಥ ಚಳಿಯಿತ್ತು. ಸೂರ್ಯವಿನ್ನೂ ಉದಯಿಸಿರಲಿಲ್ಲ. ಆಗಲೇ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹನುಮ ಮಾಲಾಧಾರಿಗಳು ‘ಜೈ ಶ್ರೀರಾಮ್‌’ ಎನ್ನುವ ಜೈಕಾರ ಹಾಕಿ ಸಂಭ್ರಮಿಸುತ್ತಿದ್ದರು.

ಕೊಪ್ಪಳ, ಗಂಗಾವತಿ, ವಿಜಯನಗರ ಹಾಗೂ ಬಳ್ಳಾರಿ ಹೀಗೆ ನಾಲ್ಕೂ ಕಡೆಯಿಂದ ಬಂದ ಸಾವಿರಾರು ಭಕ್ತರು ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಮಾಡಿದರು. ಆಂಜನೇಯನ ಮೂರ್ತಿಗೆ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಾಲಾಧಾರಿಗಳು ಬೆಟ್ಟದ ಕೆಳಭಾಗದಿಂದ 574 ಮೆಟ್ಟಿಲುಗಳನ್ನು ಏರಿ ರಾಮನಾಮ ಭಜನೆ ಮಾಡುತ್ತ, ಜೈಕಾರಗಳನ್ನು ಹಾಕುತ್ತ ಸಂಭ್ರಮಿಸಿದರು. ಬೆಟ್ಟದ ಮೇಲೆ ಕುಣಿದು ಸಂಭ್ರಮಿಸಿದರು.

ಮುಜರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಆಂಜನೇಯನ ಪಾದಗಟ್ಟೆಗೆ ಪೂಜೆ ಸಲ್ಲಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ: ಹನುಮಮಾಲಾ ವಿಸರ್ಜನೆಗೆ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ, ಎಲ್ಲಿಯೂ ಗಲಿಬಿಲಿಯಾಗದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿತ್ತು. ಜನಜಂಗುಳಿಯಾಗದಂತೆ ಸಾಕಷ್ಟು ಊಟದ ಕೌಂಟರ್‌ಗಳನ್ನು ತೆರೆದು ಭಕ್ತರಿಗೆ ಅನುಕೂಲ ಮಾಡಿಕೊಟ್ಟಿತು. ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ಎಚ್ಚರಿಕೆ ವಹಿಸಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೇರಿದಂತೆ ಅನೇಕ ಅಧಿಕಾರಿಗಳು ಭಕ್ತರಿಗೆ ಕಲ್ಪಿಸಲಾಗಿದ್ದು ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಭಕ್ತರಿಗೆ ಹುಗ್ಗಿ, ಅನ್ನ ಮತ್ತು ಸಾಂಬಾರ ವ್ಯವಸ್ಥೆ ಮಾಡಲಾಗಿತ್ತು.

ಭಾನುವಾರ ರಾತ್ರಿ ಅಂಜನಾದ್ರಿಗೆ ಬಂದಿದ್ದ 25 ಸಾವಿರ ಭಕ್ತರಿಗೆ ಊಟ, 1.20 ಲಕ್ಷ ಹಾಗೂ ತೀರ್ಥದ ಬಾಟಲ್‌ಗಳನ್ನು ನೀಡಲಾಯಿತು. ಹನುಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮಾಲಾಧಾರಿಗಳಿಗೆ ನೀರು ಹಾಗೂ ಬಾಳೆಹಣ್ಣು ನೀಡಿ ದಣಿದವರಿಗೆ ಆಸರೆಯಾದರು.

ಅಂಜನಾದ್ರಿ ಬೆಟ್ಟ ಪ್ರವೇಶಿಸುವ ಸ್ವಲ್ಪ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ದೇವಸ್ಥಾನದ ಮುಂಭಾಗದಲ್ಲಿ ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು. ಬೆಟ್ಟದ ಮೇಲ್ಭಾಗ, ದೇವಸ್ಥಾನದ ಕೆಳಭಾಗದಲ್ಲಿ ಜನ ಒಂದೇ ಕಡೆ ಹೆಚ್ಚು ಸೇರದಂತೆ ಪೊಲೀಸರ ಜೊತೆಗೆ ವಿಶ್ವ ಹಿಂದೂ ಪರಿಷತ್‌, ಗ್ರಾಮದ ಯುವಕರು ಸದಸ್ಯರು ಸ್ವಯಂ ಸೇವಕರಾಗಿ ಕೆಲಸ ಮಾಡಿದರು.

ಬೆಳಗಾವಿ, ಕಲಬುರಗಿ, ಧಾರವಾಡ, ಬಾಗಲಕೋಟೆ, ವಿಜಯಪುರ, ದಾವಣಗೆರೆ ಮತ್ತು ಗದಗ ಭಾಗದಿಂದ ಹೆಚ್ಚು ಭಕ್ತರು ಭಾಗವಹಿಸಿದ್ದರು. ತಮ್ಮೂರಿನ ತಂಡಗಳ ಜೊತೆ ಬೆಟ್ಟದ ಮೇಲೆ ಫೋಟೊ ತೆಗೆಯಿಸಿಕೊಂಡು ಖುಷಿಪಟ್ಟರು.

ಕ್ರೂಷರ್ ಪಲ್ಟಿ: ಮಾಲಾಧಾರಿಗಳು ಪಾರು

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಹನುಮ ಮಾಲಾಧಾರಿಗಳಿದ್ದ ಕ್ರೂಷರ್ ವಾಹನ ರಸ್ತೆಯಿಂದ ತಗ್ಗು ಪ್ರದೇಶಕ್ಕೆ ಇಳಿದ ಘಟನೆ ತಾಲ್ಲೂಕಿನ ಬಸಾಪುರ ಬಳಿಯ ಹೊಸಪೇಟೆ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಮಾಲಾಧಾರಿಗಳು ಯಾವುದೇ ಅಪಾಯವಾಗಿಲ್ಲ.

ಬೆಳಗಾವಿಯ ಕಿತ್ತೂರಿನಿಂದ ಅಂಜನಾದ್ರಿಗೆ ಮಾಲೆ ವಿಸರ್ಜನೆಗೆ ತೆರಳುವಾಗ ಘಟನೆ ನಡೆದಿದೆ. ವಾಹನದಲ್ಲಿ 20 ಹೆಚ್ಚು ಮಾಲಾಧಾರಿಗಳು ಇದ್ದರು. ಬೇರೆ ವಾಹನಗಳ ಮೂಲಕ ದೇವಸ್ಥಾನ ಭಕ್ತರು ದೇವಸ್ಥಾನ ತಲುಪಿದರು. ಬಳಿಕ ಕ್ರೇನ್ ಮೂಲಕ ಕ್ರೂಷರನ್ನು ಎತ್ತಿ ರಸ್ತೆ‌ ಮೇಲೆ ಇಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT