ಸೋಮವಾರ, ಸೆಪ್ಟೆಂಬರ್ 20, 2021
20 °C
ಗಾಳಿಪಟದ ಮೂಲಕ ಸಂದೇಶ ರವಾನೆ

ಗಂಗಾವತಿ: ಅಂಜನಾದ್ರಿಯಲ್ಲಿ ಮೊಳಗಿದ ರಾಮಜಪ

ಶಿವಕುಮಾರ ಕೆ. Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಅತ್ತ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದ್ದರೆ, ಇತ್ತ ತಾಲ್ಲೂಕಿನ ಅಂಜನಾದ್ರಿಯಲ್ಲಿ ರಾಮನ ಬಂಟ ಹನುಮನು ಜನಿಸಿ ಸ್ಥಳದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ರಾಮತಾರಕ ಹೋಮವನ್ನು ನಡೆಸಲಾಯಿತು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಹನುಮ ದೇವರಿಗೆ ವಿಶೇಷ ಪೂಜೆ ಅಲಂಕಾರ ನೆರೆವೇರಿಸಲಾಯಿತು. ಬೆಟ್ಟದಲ್ಲಿ ರಾಮ ಭಕ್ತರು ಮತ್ತು ಹಿಂದು ಪರ ಸಂಘಟನೆ ಮುಖಂಡರು ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನವನ್ನು ಕೇಸರಿ ಧ್ವಜ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ರಾಮಜಪ ಮಾಡುವ ಮೂಲಕ ರಾಮ ಮತ್ತು ಹನುಮನ ಆರಾಧನೆ ಮಾಡಲಾಯಿತು.

 ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು, ಅಂಜನಾದ್ರಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ರಾಮಜಪದಲ್ಲಿ ಪಾಲ್ಗೊಂಡು ರಾಮನ ಆರಾಧನೆ ಮಾಡಿದರು.

ರಾಮಮಂದಿರ ನಿರ್ಮಾಣದ ಒಳಿತಿಗಾಗಿ ದೇವಸ್ಥಾನದಲ್ಲಿ ನಡೆದ ರಾಮತಾರಕ ಹೋಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಮನಿಗಾಗಿ ಶಬರಿ ಕಾದಹಾಗೆ ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶವೇ ಕಾದು ಕುಳಿತಿತ್ತು. ಇಂದು ಆ ಸುದಿನ ರಾಮ ಮಂದಿರ ನಿರ್ಮಾಣಕ್ಕೆ ಒದಗಿ ಬಂದಿದೆ ಎಂದರು.

ಕೊರೊನಾ ನಡುವೆಯೂ ಇಡೀ ದೇಶವೆ ಈ ಸಂಭ್ರಮವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಅದರಲ್ಲೂ ಕರ್ನಾಟಕದ ಜನತೆಯಂತೂ ಹೆಚ್ಚು ಸಂಭ್ರಮದಲ್ಲಿದ್ದಾರೆ.  ರಾಮಾಯಣ ಅಂತ್ಯವಾಗುವುದೆ ಕರ್ನಾಟಕದ ಭೂಮಿಯಿಂದ, ಹಾಗಾಗಿ ಇಲ್ಲಿನ ಹನುಮನುದಿಸಿದ ಸ್ಥಳಕ್ಕೆ ಬಂದು ಶ್ರೀರಾಮ ರಾಜ್ಯದ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು ಎಂದರು.

ಗಾಳಿಪಟದ ಮೂಲಕ ಸಂದೇಶ ರವಾನೆ:  ಅಂಜನಾದ್ರಿ ಬೆಟ್ಟದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಗಾಳಿಪಟವನ್ನು ಹಾರಿಸುವ ಮೂಲಕ ಹನುಮನ ನಾಡಿನಿಂದ ರಾಮ ಸೇವೆಯ ಸಂದೇಶವನ್ನು ಕಳುಹಿಸಿಕೊಟ್ಟರು. ರಾಮರಾಜ್ಯದ ಕನಸು ನನಸಾಗಲಿಕ್ಕೆ ಈ ನಾಡಿನ ಜನತೆ ರಾಷ್ಟ್ರದ ಜೊತೆ ಸದಾ ನಿಲ್ಲುತ್ತಾರೆ ಎಂಬ ಸಂದೇಶವನ್ನು ಗಾಳಿಪಟದ ಮೂಲಕ ರವಾನೆ ಮಾಡಿದರು.

ಇದೇ ವೇಳೆ ಗಾಳಿಪಟವನ್ನು ಹಾರಿಸಲು ಆಗಮಿಸಿದ ಮಂಗಳೂರಿನ ತಂಡವು ಹನುಮ ದೇವರ ವಿವಿಧ ರೀತಿಯ ಚಿತ್ರಗಳ ಗಾಳಿಪಟಗಳನ್ನು ಹಾರಿಸುವ ಮೂಲಕ ನೆರೆದಿದ್ದ ಭಕ್ತರ ಪ್ರಶಂಸೆಗೆ ಪಾತ್ರರಾದರು.

ಭಕ್ತರಿಗೆ ಮುಕ್ತವಾದ ಅಂಜನಾದ್ರಿ ದರ್ಶನ:  ಕೋವಿಡ್‌ ಹಿನ್ನೆಲೆ ಕಳೆದ ಐದು ತಿಂಗಳಿಂದ ಭಕ್ತರಿಗೆ ಅಂಜನಾದ್ರಿಯಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಅ.5 ಬುಧವಾರದಿಂದ ಅಂಜನಾದ್ರಿಯ ದರ್ಶನವನ್ನು ಭಕ್ತರಿಗೆ ಮುಕ್ತಗೊಳಿಸಲಾಗಿದ್ದು, ಬುಧವಾರ ಸಾಕಷ್ಟು ಭಕ್ತರು ಆಗಮಿಸಿ ಹನುಮ ದೇವರ ದರ್ಶನ ಪಡೆದರು.

 ತಹಶೀಲ್ದಾರ್‌ ಕವಿತಾ, ಆನೆಗೊಂದಿ ರಾಜವಂಶಸ್ಥ ಶ್ರೀ ಕೃಷ್ಣದೇವರಾಯ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಸಿಪಿಐ ಸುರೇಶ್‌ ತಳವಾರ, ಪಿಎಸ್.ಐ ದೊಡ್ಡಪ್ಪ ಜೆ ಸೇರಿದಂತೆ ನೂರಾರು ಭಕ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.