ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ವಾರ್ಡ್‌ನಲ್ಲಿ ಸಮಸ್ಯೆಗಳು ದೊಡ್ಡವೇ

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ ಹೆಗ್ಗಳಿಕೆ
Last Updated 9 ಆಗಸ್ಟ್ 2022, 4:54 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ನಗರಸಭೆ ವ್ಯಾಪ್ತಿಯ ಮೂರನೇ ವಾರ್ಡ್‌ ನಗರದ ಅತಿ ದೊಡ್ಡ ವಾರ್ಡ್‌ ಎನ್ನುವ ಹೆಗ್ಗಳಿಗೆ ಹೊಂದಿದೆ. ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ ಗರಿಮೆಯೂ ಇದಕ್ಕಿದೆ. ಆದರೆ, ವಾರ್ಡ್‌ ಎಷ್ಟು ದೊಡ್ಡದೊ ಸಮಸ್ಯೆಗಳು ಕೂಡ ಅಷ್ಟೇ ದೊಡ್ಡದಾಗಿ ಬೆಳೆದು ನಿಂತಿವೆ.

ಈ ವಾರ್ಡ್‌ನಲ್ಲಿ ಹಮಾಲರ ಕಾಲೊನಿ, ಗುಮಾಸ್ತರ ಕಾಲೊನಿ, ಶಿವಶಾಂತವೀರ ನಗರ, ಗಡಾದರ ಚಾಳ, ನಿರ್ಮಿತಿ ಕೇಂದ್ರ, ಕುವೆಂಪು ನಗರ, ಪಟೇಲ ನಗರ ಹಾಗೂ ಶ್ರೀಶೈಲ ನಗರ ಸೇರಿದಂತೆ 10 ಬಡಾವಣೆಗಳು ಬರುತ್ತವೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಮತದಾರರ ಸಂಖ್ಯೆ ಜನಸಂಖ್ಯೆಗಿಂತಲೂ ಅರ್ಧದಷ್ಟಿದೆ.

ವಾರ್ಡ್‌ ವ್ಯಾಪ್ತಿಯ ಎಂಟು ಅಂಗನವಾಡಿ ಕೇಂದ್ರಗಳು ಹಲವು ವರ್ಷಗಳ ಹಿಂದೆ ಬಹುತೇಕ ತಗಡಿನ ಶೆಡ್‌ಗಳಲ್ಲಿದ್ದವು. ಈಗ 7 ಕೇಂದ್ರಗಳಿಗೆ ಸ್ವಂತ ಕಟ್ಟಡ ಕಟ್ಟಲಾಗಿದೆ. ಇನ್ನೊಂದು ಕೇಂದ್ರಕ್ಕೆ ನಿವೇಶನ ಸಿಕ್ಕಿದೆ.

ವಾರ್ಡ್‌ನ ಬಡಾವಣೆಗಳ ವ್ಯಾಪ್ತಿಯಲ್ಲಿ ಎಲ್ಲಿಯೇ ಸುತ್ತಾಡಿದರೂ ಪ್ರಮುಖವಾಗಿ ಚರಂಡಿಗಳ ನಿರ್ವಹಣೆ ಕೊರತೆ ಮತ್ತು ಅಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತದೆ. ಕುವೆಂಪು ನಗರದಲ್ಲಿ ಎರಡು ದಿನಕ್ಕ್ಕೊಮ್ಮೆ ಕಸ ವಿಲೇವಾರಿ ಮಾಡಲಾಗುತ್ತದೆ.

ಕುಡಿಯುವ ನೀರು ಸರಬರಾಜು ಆಗುತ್ತದೆ. ವರ್ಷಗಳೇ ಉರುಳಿದರೂ ತುಂಬಿದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಬಹಳಷ್ಟು ಕಡೆ ಚರಂಡಿ ವ್ಯವಸ್ಥೆಯೇ ಇಲ್ಲ. ಹಾಗಾಗಿ ಖಾಲಿ ನಿವೇಶನಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತವೆ. ಸುತ್ತಮುತ್ತಲ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತದೆ. ಸಾರ್ವಜನಿಕ ಶೌಚಾಲಯದ ಕೊರತೆಯೂ ಕಾಡುತ್ತಿದೆ.

ಮೂರನೇ ವಾರ್ಡ್‌ನಲ್ಲಿ ಮೂರು ಕೊಳೆಗೇರಿ ಪ್ರದೇಶಗಳಿವೆ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸಲು ಎಷ್ಟೇ ಹಣ ಸಿಕ್ಕರೂ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಗುಮಾಸ್ತರ ಕಾಲೊನಿಯುಲ್ಲಿ ಚರಂಡಿ ನೀರು ಹೋಗಲು ಅವಕಾಶವೇ ಇಲ್ಲ.

ಕೆಲ ದಿನಗಳ ಹಿಂದೆಸುರಿದ ಜೋರು ಮಳೆಗೆ ಶೇಂಗಾ ಮಿಲ್‌ನ ಆವರಣ ಗೋಡೆ ಕುಸಿದ ಬಡಾವಣೆ ಕೂಡ ಇದೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುತ್ತದೆ. ಹಾಲವರ್ತಿಗೆ ಹೋಗುವ ರಸ್ತೆಯ ಭಾಗದ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆಯಿಲ್ಲದೇ ನೀರು ಮನೆಗಳಿಗೆ ನುಗ್ಗುತ್ತವೆ. ಇದಕ್ಕೆ ಸ್ಥಳೀಯರು ‘ಅಧಿಕಾರಿಗಳ ತಪ್ಪು ನಿರ್ಧಾರ ಇಷ್ಟೆಲ್ಲಾ ಆವಾಂತರಕ್ಕೆ ಕಾರಣ. ಈ ನೀರು ಹರಿಯಲು ಕಾಲುವೆಗೆ ಸಂಪರ್ಕ ಕಲ್ಪಿಸಿದರೆ ಸಮಸ್ಯೆಯಾಗುವುದಿಲ್ಲ’ ಎಂದು ಹೇಳುತ್ತಾರೆ.

‘ಚರಂಡಿ ಸ್ವಚ್ಛಗೊಳಿಸಲು ಆದ್ಯತೆ‘

ಕೊಪ್ಪಳ: ‘ನನ್ನ ವ್ಯಾಪ್ತಿಯ ವಾರ್ಡ್‌ನಲ್ಲಿ ಬಹಳಷ್ಟು ಕಡೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅನುದಾನ ಹಾಗೂ ನಗರಸಭೆ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದಾಗಿ ಚರಂಡಿ ಅವ್ಯವಸ್ಥೆಯಲ್ಲಿವೆ. ಇವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ‘ ಎಂದು ಮೂರನೇ ವಾರ್ಡ್‌ನ ನಗರಸಭೆ ಸದಸ್ಯ ಅಮ್ಜದ್‌ ಪಟೇಲ ಹೇಳಿದರು.

ಜನವಸತಿ ಪ್ರದೇಶದ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ಇವೇ ರೋಗ ಹರಡುವ ತಾಣಗಳಾಗಿವೆ. ಆದಷ್ಟು ಬೇಗನೆ ಸ್ವಚ್ಛಗೊಳಿಸಿ.
ಫಾರೂಕ್‌ ಕಂದಗಲ್‌
ಕುವೆಂಪು ನಗರ

ಚರಂಡಿ ಪಕ್ಕದಲ್ಲಿಯೇ ಮನೆಯಿದೆ. ಸರಿಯಾಗಿ ಶೌಚಾಲಯವಿಲ್ಲ. ಈ ಕೆಟ್ಟ ಚಿತ್ರಣ ನೋಡಿಯೇ ಸಾಕಾಗಿದೆ. ನನಗೆ ಒಂದು ಆಶ್ರಮ ಮನೆಯನ್ನಾದರೂ ಕೊಡಿ.
ಲಕ್ಷ್ಮವ್ವ
ಕುವೆಂಪು ನಗರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT