ಬುಧವಾರ, ನವೆಂಬರ್ 13, 2019
23 °C

ಕ್ರೀಡಾಂಗಣಕ್ಕೆ ‘ಯುವಸೈನ್ಯ’ ಲಗ್ಗೆ: ಸೇನಾ ನೇಮಕಾತಿಯಲ್ಲಿ ಕಂಡ ಮನಕಲುಕಿದ ದೃಶ್ಯ

Published:
Updated:
Prajavani

ಕೊಪ್ಪಳ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಅಥಣಿ ತಾಲ್ಲೂಕಿನ ಸಾವಿರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ನಗರದಲ್ಲಿ ಎಲ್ಲಿ ನೋಡಿದರಲ್ಲಿ ಯುವಕರೇ ಕಂಡು ಬಂದರು. ಬಹುತೇಕ ಗ್ರಾಮೀಣ, ಬಡ ಅಭ್ಯರ್ಥಿಗಳೇ ಹೆಚ್ಚಾಗಿದ್ದರು. ನಗರದ ಹೋಟೆಲ್‌, ಚಿತ್ರಮಂದಿರ, ಗವಿಮಠ ಆವರಣ, ರಸ್ತೆಗಳು ಅಭ್ಯರ್ಥಿಗಳ ಕಲರವಕ್ಕೆ ಸಾಕ್ಷಿಯಾದವು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ ಈ ತಾಲ್ಲೂಕುಗಳ 6 ಸಾವಿರ ಅಭ್ಯರ್ಥಿಗಳಲ್ಲಿ 4 ಸಾವಿರ ಅಭ್ಯರ್ಥಿಗಳು ಕ್ರೀಡಾಂಗಣದಲ್ಲಿ ಹಾಜರಿದ್ದರು. ಎತ್ತರ ಜಿಗಿತದಲ್ಲಿ ಅನುತ್ತೀರ್ಣರಾದ 1 ಸಾವಿರ ಅಭ್ಯರ್ಥಿಗಳನ್ನು ಹೊರಗೆ ಕಳಿಸಲಾಯಿತು. 3 ಸಾವಿರ ಅಭ್ಯರ್ಥಿಗಳಿಗೆ ಒಳ ಹೋಗಲು ಅವಕಾಶ ನೀಡಲಾಯಿತು. ಓಟ, ಎದೆ ಅಳತೆ ಸೇರಿದಂತೆ ವಿವಿಧ ದೈಹಿಕ ಪರೀಕ್ಷೆಗಳು ನಡೆದವು.

ಉದ್ಯೋಗದ ಆಸೆ ಹೊತ್ತು ಸಾಲ, ಸೋಲ ಮಾಡಿ ಬಂದ ಕೆಲ ಅಭ್ಯರ್ಥಿಗಳು ಎತ್ತರ, ತೂಕದ ಕೊರತೆಯಿಂದ ಅರ್ಹತೆ ಪಡೆಯಲಾಗದೇ ಕಣ್ಣೀರು ಹಾಕಿದರು. ಒಬ್ಬ ಅಭ್ಯರ್ಥಿಯಂತೂ ಸೇನಾಧಿಕಾರಿಗಳ ಮುಂದೆ ನೆಲಕ್ಕೆ ಬಿದ್ದು ರೋದಿಸಿದ ದೃಶ್ಯ ಮನಕಲಕುವಂತೆ ಇತ್ತು. ಆತನನ್ನು ಸಮಾಧಾನಪಡಿಸಿ ಇನ್ನೊಂದು ಅವಕಾಶ ಬರುತ್ತದೆ ಎಂದು ಧೈರ್ಯ ತುಂಬಿ ಕಳುಹಿಸಿದರು.

ಇನ್ನೂ ಮೂರು ದಿನ ರ್‍ಯಾಲಿ ನಡೆಯಲಿದ್ದು, ಐದು ಕಡೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗೆ ಸ್ವಯಂ ಸೇವಕರನ್ನು ನೇಮಕ ಮಾಡಿದ್ದರೂ ನೂರಾರು ಅಭ್ಯರ್ಥಿಗಳು ಮಾಹಿತಿ ಇಲ್ಲದೇ ರೈಲು, ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳ ಮುಂದೆಯೂ ಮಲಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಭ್ಯರ್ಥಿಗಳ ದಾಖಲೆ ಪರೀಕ್ಷೆ ನಡೆಯಿತು. ಬಿಸಿಲಿನ ಝಳ ಹೆಚ್ಚಳವಾದಂತೆ ಓಟದಲ್ಲಿ ಕೆಲವರು ಮುಗ್ಗರಿಸಿ ಬಿದ್ದರು.

‘ಸೇನೆ ನೇಮಕಾತಿಗೆ ಬರುವ ಎಲ್ಲ ಅಭ್ಯರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಮ್ಮ ಮಾದರಿ ವ್ಯವಸ್ಥೆಯನ್ನು ಬೇರೆ ಕಡೆಯಿಂದ ಸೇನಾ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ. ಕೆಲವು ಮಾಹಿತಿ ಕೊರತೆಯಿಂದ ತೊಂದರೆಯಾಗಿರಬಹುದು’ ಎಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)