ಸೋಮವಾರ, ಸೆಪ್ಟೆಂಬರ್ 26, 2022
20 °C
ನಿಲ್ದಾಣದಲ್ಲಿ ಗಾಂಧಿ ನೆನಪು..

ಭಾನಾಪುರ: 1934ರಲ್ಲಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ

ಮಂಜುನಾಥ್ ಎಸ್. ಅಂಗಡಿ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿರುವುದು, ಈಗಲೂ ಆ ಸ್ಥಳ ಐತಿಹಾಸಿಕವಾಗಿ ಮಹತ್ವ ಪಡೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಆಗ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರಗತಿಯಲ್ಲಿತ್ತು. ಪರಿಶಿಷ್ಟರಿಗಾಗಿ ನಿಧಿ ಸಂಗ್ರಹಣೆ ಮಾಡುವ ಸಲುವಾಗಿ 1934ರ ಮಾರ್ಚ್‌ 3ರಂದು ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಬಂದಿದ್ದರು.

ಹೋರಾಟ ತೀವ್ರ: ಗಾಂಧೀಜಿ ಸ್ವಾತಂತ್ರ್ಯ ತಂದುಕೊಡಲು ದೇಶಾದ್ಯಂತ ಅಹಿಂಸಾತ್ಮಕ ಹೋರಾಟ ನಡೆಸುತ್ತಿದ್ದರು. ನಿಧಿ ಸಂಗ್ರಹಕ್ಕಾಗಿ ರಾಜ್ಯ ಪ್ರವಾಸ ಹಮ್ಮಿಕೊಂಡು ಭಾನಾಪುರ ರೈಲ್ವೆ ನಿಲ್ದಾಣದಲ್ಲಿ  ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ನಂತರ ಪರಿಶಿಷ್ಟರ ಮನೆಯಲ್ಲಿ ಹಾಲು ಕುಡಿದು ತೆರಳಿದ್ದರು ಎನ್ನುವುದು ಇತಿಹಾಸದ ಪುಟಗಳಲ್ಲಿ
ದಾಖಲಾಗಿದೆ.

ಗಾಂಧೀಜಿ ಭೇಟಿಯ ನೆನಪು ಚಿರಸ್ಥಾಯಿಯಾಗಲಿ ಎನ್ನುವ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿ ಸ್ವಾಮಿ ಅಳವಂಡಿ ನೇತೃತ್ವದಲ್ಲಿ ಅಲ್ಲಿ ಸ್ಮಾರಕ ಫಲಕ ನಿರ್ಮಿಸಲಾಗಿದೆ.  ಈ ಕುರುಹು ಹಾಗೇ ಇರಲಿ ಎನ್ನುವ ಆಸೆಯಿಂದ ಕಲಾವಿದ ಕಾಳಪ್ಪ ಪತ್ತಾರ ಗಾಂಧೀಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದ ಚಿತ್ರ ಬಿಡಿಸಿದ್ದಾರೆ. ಈ ಚಿತ್ರವನ್ನು ಗಾಂಧೀಜಿ ಅವರಿಗೆ ಕಾಣಿಕೆಯಾಗಿ ಕೊಟ್ಟು ಕಳುಹಿಸಿದ್ದಾರೆ.  ಇವರ ಮಗ ಕೂಡ ಇದಕ್ಕೆ ಕೈಜೋಡಿಸಿ ತಾವು ಬಿಡಿಸಿದ ಚಿತ್ರವನ್ನು ರೈಲ್ವೆ ನಿಲ್ದಾಣದಲ್ಲಿ ತೂಗು ಹಾಕಿದ್ದಾರೆ.

ಈಡೇರದ ಬೇಡಿಕೆ: ಗಾಂಧೀಜಿ ಇಲ್ಲಿಗೆ ಭೇಟಿ ನೀಡಿದ ಅಪೂರ್ವ ಕ್ಷಣದ ನೆನಪಿಗಾಗಿ ಇಲ್ಲಿ ಸ್ಮಾರಕ ನಿರ್ಮಿಸಬೇಕು. ಇಲ್ಲಿ ಗಾಂಧಿ ಜಯಂತಿ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ. ಅದು ಇನ್ನೂ ಈಡೇರಿಲ್ಲ.

ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ: ಗ್ರಾಮಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಬಂದಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅಲ್ಲದೇ ಅವರ ಸಾರ್ವಜನಿಕರ ಭಾಷಣಕ್ಕೆ ಅಂದಿನ ದಿನದಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಬಂದಿದರಂತೆ. ಇಂಥ ಐತಿಹಾಸಿಕ ಸ್ಥಳದಲ್ಲಿ ಸ್ಮಾರಕ ನಿರ್ಮಾಣದ ಅಗತ್ಯವಿದೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಮತ್ತು ಕೊಪ್ಪಳ ಜಿಲ್ಲೆ ರಚನೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಈಗಲಾದರೂ ಜಿಲ್ಲಾಡಳಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಭಾನಾಪುರ ಗ್ರಾಮದ ಯುವಕ ಬಸವರಾಜ ಮೇಟಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು