ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನ, ಸಭೆಗಳೇ ಹೋರಾಟಕ್ಕೆ ಪ್ರೇರಣೆ: ಸ್ವಾತಂತ್ರ್ಯ ಹೋರಾಟಗಾರ ನಾರಾಯಣಚಾರ್

Last Updated 14 ಆಗಸ್ಟ್ 2022, 3:01 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾತಂತ್ರ್ಯಕ್ಕಾಗಿದೇಶದ ಎಲ್ಲ ಕಡೆ ದೊಡ್ಡ ಮಟ್ಟದಲ್ಲಿ ಹೋರಾಟಗಳು, ಸತ್ಯಾಗ್ರಹಗಳು ನಡೆಯುತ್ತಿದ್ದವು. ಅಲ್ಲಿನ ಹೋರಾಟಗಾರರ ಉತ್ಸಾಹ ಹಾಗೂ ದೇಶಭಕ್ತಿಯ ಮಾತುಗಳು ಸ್ಥಳೀಯವಾಗಿ ನಮಗೂ ಪ್ರೇರಣೆ ತುಂಬುತ್ತಿದ್ದವು...‘

ಸ್ವಾತಂತ್ರ್ಯ ಹೋರಾಟಗಾರ ನಾರಾಯಣಚಾರ್ ಮಾದಿನೂರು ಅವರ ಮಾತುಗಳು ಇವು. ‘ಪ್ರಜಾವಾಣಿ‘ ಪ್ರತಿನಿಧಿ ಜೊತೆಗೆ ಆಪ್ತವಾಗಿ ಮಾತನಾಡುತ್ತ ಹೋರಾಟದ ದಿನಗಳ ಹಲವು ನೆನಪುಗಳನ್ನು ಮುಕ್ತವಾಗಿ ಹಂಚಿಕೊಂಡರು.

97 ವರ್ಷ ವಯಸ್ಸಿನ ನಾರಾಯಣಚಾರ್‌ ಇಲ್ಲಿಗೆ ಸಮೀಪದ ಮಾದಿನೂರು ಗ್ರಾಮದವರು. ಈಗ ಕೊಪ್ಪಳದಲ್ಲಿ ವಾಸವಾಗಿದ್ದಾರೆ.

‘ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ಸ್ವಾತಂತ್ರ್ಯ ಗಳಿಸಬೇಕು ಎನ್ನುವುದು ಎಲ್ಲಾ ಭಾರತೀಯರ ಮುಖ್ಯ ಗುರಿಯಾಗಿತ್ತು. ಈ ಹೆಬ್ಬಯಕೆ ಈಡೇರಿಸಿಕೊಳ್ಳಲು ಗ್ರಾಮ ಮಟ್ಟದಿಂದಲೇ ಹೋರಾಟಗಳು ನಡೆಯುತ್ತಿದ್ದವು. ಭಾನಾಪುರ, ಕೊಳೂರು, ಅಳವಂಡಿ, ಕರ್ಕಿಹಳ್ಳಿ, ಮುನಿರಾಬಾದ್‌, ಕವಲೂರು ಹೀಗೆ ಹಲವಾರು ಊರುಗಳಿಗೆ ನಡೆದುಕೊಂಡು ಹೋಗಿಯೇ ಸಭೆ, ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು’ ಎಂದು ಚೆದುರಿದ ನೆನಪುಗಳನ್ನು ಒಂದುಗೂಡಿಸಿದರು.

‘ಶಂಕರಗೌಡ, ಜನಾರ್ದನ ರಾವ್‌ ದೇಸಾಯಿ, ರಾಘವೇಂದ್ರರಾವ್‌ ಇಟಗಿ ಹೀಗೆ ಹಲವಾರು ಜನ ಹೋರಾಟಗಾರರು ಆಗಿನ ಮುಂಚೂಣಿ ನಾಯಕರಾಗಿದ್ದರು. ನಾಲ್ಕೈದು ಜನರ ತಂಡಗಳನ್ನು ಮಾಡಿಕೊಂಡು ಹಳ್ಳಿಗಳನ್ನು ಸುತ್ತುತ್ತಿದ್ದೆವು. ಜನರನ್ನು ಒಗ್ಗೂಡಿಸಿ ಸಭೆ, ಚರ್ಚೆ ನಡೆಸುತ್ತಿದ್ದೆವು. ಅಲ್ಲಿ ಚರ್ಚೆಯಾದ ವಿಷಯಗಳನ್ನು ಇನ್ನೊಂದು ಊರಿನ ಜನರೊಂದಿಗೆ ಹಂಚಿಕೊಂಡು ಸ್ಥಳೀಯವಾಗಿ ಹೋರಾಟದ ಯೋಜನೆಗಳನ್ನು ರೂಪಿಸಲಾಗುತ್ತಿತ್ತು’ ಎಂದು ಸ್ಮರಿಸಿದರು.

‘ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿದ್ದ ಕಾರ್ಯಕ್ರಮಗಳು, ಹೋರಾಟಗಳು ನಮ್ಮ ಮೇಲೆಯೂ ಪರಿಣಾಮ ಬೀರುತ್ತಿದ್ದವು. ಸ್ವತಂತ್ರ್ಯ ಹೋರಾಟದ ಭಾಗವಾಗಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಭೆ, ಚಿಂತನ, ಮಂಥನ, ಚರ್ಚೆಗಳು ಮುಂದೆ ದೊಡ್ಡ ಹೋರಾಟಗಳಾಗಿ ರೂಪಗೊಂಡಿವೆ. ದೇಶದ ಸ್ವಾತಂತ್ರ್ಯಕ್ಕೂ ನಾಂದಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡಕವಿಲ್ಲದೆ ನಿತ್ಯ ಓದು
ಕೊಪ್ಪಳ:
ಇಳಿ ವಯಸ್ಸಿನಲ್ಲಿರುವ ನಾರಾಯಣಚಾರ್ ಅವರು ಶಿಸ್ತಿನ ಜೀವನ ರೂಢಿಸಿಕೊಂಡಿದ್ದಾರೆ. ಬೆಳಿಗ್ಗೆ 6.30ರಿಂದ ದಿನಚರಿ ಆರಂಭಿಸುತ್ತಾರೆ.

ಮನೆಯಲ್ಲಿ ಸ್ವತಂತ್ರ್ಯವಾಗಿ ಓಡಾಡುತ್ತಾರೆ. ಪತ್ರಿಕೆ, ನಿಯತಕಾಲಿಕೆಗಳನ್ನು ನಿತ್ಯ ಓದುವುದನ್ನು ರೂಢಿಸಿಕೊಂಡಿದ್ದಾರೆ. ವಿಶೇಷವೆಂದರೆ ಓದಲು ಈಗಲೂ ಕನ್ನಡಕ ಬಳಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT