ಭಾನುವಾರ, ಜನವರಿ 19, 2020
27 °C
ಬಣಜಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಮಾಜಿ ಯೋಧರಿಗೆ ಸನ್ಮಾನ

ಬಣಜಿಗರ ಕೊಡುಗೆ ಅವಿಸ್ಮರಣೀಯ: ಶಾಸಕ ಹಾಲಪ್ಪ ಆಚಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ‘ಸಮಾಜದ ಎಲ್ಲ ವರ್ಗದವರನ್ನು ಸಮನ್ವಯದಿಂದ ಕರೆದೊಯ್ಯುವ ಸಾಮರ್ಥ್ಯ ಬಣಜಿಗ ಸಮಾಜಕ್ಕೆ ಇದೆ’ ಎಂದು ಶಾಸಕ ಹಾಲಪ್ಪ ಆಚಾರ್ ಅಭಿಪ್ರಾಯಪಟ್ಟರು.

ತಾಲ್ಲೂಕು ಬಣಜಿಗ ಸಮಾಜ, ರಾಜೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬಣಜಿಗ ಸಮಾಜ ಮುಂಚೂಣಿಯಲ್ಲಿರುತ್ತದೆ. ಅದು ಸಮಾಜದ ಒಳಿತಿಗೆ ಹೆಚ್ಚು ಕೊಡುಗೆ ನೀಡಿದೆ. ಈ ಕ್ಷೇತ್ರ ಒಣ ಬೇಸಾಯದ ಕಾರಣದಿಂದ ಬಡತನದಲ್ಲಿದೆ. ನೀರಾವರಿ ಯೋಜನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಅಂದಾಗ ಮಾತ್ರ ರೈತರು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ,‘ಇತ್ತೀಚಿನ ದಿನಗಳಲ್ಲಿ ಜಾತೀಯತೆ ಹೆಚ್ಚಾಗುತ್ತಿದೆ. ರಾಜಕಾರಣಿಗಳು ಜಾತಿ ಗಾಳ ಹಾಕಿ ಸ್ವಾರ್ಥ ಮೆರೆಯುತ್ತಿದ್ದಾರೆ. ಮಾನವೀಯ ಧರ್ಮ ಕುಗ್ಗತೊಡಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ,‘ಬಣಜಿಗ ಸಮಾಜ ಎಸ್.ನಿಜಲಿಂಗಪ್ಪ, ಜೆ.ಎಚ್.ಪಟೇಲ್ ಸೇರಿದಂತೆ ಅನೇಕ ಮಹಾನ್ ನಾಯಕರನ್ನು ಜಗತ್ತಿಗೆ ಕೊಟ್ಟಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ನಾಯಕತ್ವದಲ್ಲಿ ನಮ್ಮತನ ಉಳಿಸಿಕೊಂಡು ಹೋಗುವ ಚಿಂತನೆ ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಜ ಮುನ್ನಡೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ನಮ್ಮ ಧರ್ಮ ಮತ್ತು ನಮ್ಮ ಹಿರಿಯರು ತೋರಿದ ಮಾರ್ಗವೇ ನಮಗೆ ಆದರ್ಶ ಆಗಬೇಕು ಎಂದರು.

ಬಣಜಿಗರನ್ನು ಬಿಟ್ಟು ಕರ್ನಾಟಕ ಇತಿಹಾಸವಾಗಲಿ ಪೂರ್ಣ ಆಗುವುದಿಲ್ಲ. ಅಷ್ಟೊಂದು ಕೊಡುಗೆಯನ್ನು ಒಟ್ಟು ಸಮುದಾಯಕ್ಕೆ ಬಣಜಿಗ ಸಮಾಜ ಕೊಟ್ಟಿದೆ. ಲಿಂಗಾಯತ ಸಮುದಾಯದ 8 ಮುಖ್ಯಮಂತ್ರಿಗಳು ಆಗಿ ಹೋಗಿದ್ದು, ಎಸ್.ಆರ್ ಬೊಮ್ಮಾಯಿ ಹೊರತುಪಡಿಸಿ 7 ಜನ ಬಣಜಿಗ ಸಮಾಜಕ್ಕೆ ಸೇರಿದವರು ಎಂಬುದು ಸಮಾಜ ಬಾಂಧವರು ಹೆಮ್ಮೆ ಪಡುವ ಸಂಗತಿ ಎಂದು ವಿವರಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಮುನವಳ್ಳಿಯ ವಿದ್ಯಾರ್ಥಿನಿ ವೀಣಾ ಪಟ್ಟಣಶೆಟ್ಟಿ ಯೋಗ ಪ್ರದರ್ಶಿಸಿದರು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮಾಜಿ ಸಿ.ಎಂ ಜೆ.ಎಚ್ ಪಾಟೀಲ್ ಅವರ ಸ್ಮರಣಾರ್ಥ ಒಂದು ಲಕ್ಷ ದತ್ತಿಯನ್ನು ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದರು.

ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಆಡ್ನೂರು-ರಾಜೂರಿನ ಪಂಚಾಕ್ಷರ ಶಿವಾಚಾರ್ಯರು, ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು ಸಾನ್ನಿಧ್ಯ ವಹಿಸಿದ್ದರು.

ಬಾದಾಮಿ ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ, ಶಾಸಕ ಪರಣ್ಣ ಮುನವಳ್ಳಿ, ಅಂದಪ್ಪ ಜವಳಿ, ಸಂಗಣ್ಣ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ಶೇಖರಪ್ಪ ವಾರದ, ಅಂದಾನಪ್ಪ ಅಂಗಡಿ ಹಾಗೂ ಬಸವರಾಜ ಜೋಳದ
ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು