ಬಂಡಿಪುರ ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ

7
ಪ್ರಸ್ತಾವ ಕೈಬಿಟ್ಟ ಅರಣ್ಯ ಇಲಾಖೆ: ಅರಣ್ಯ ಸಚಿವ ಆರ್.ಶಂಕರ ಹೇಳಿಕೆ

ಬಂಡಿಪುರ ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ

Published:
Updated:
Deccan Herald

ಕೊಪ್ಪಳ: ‘ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಪ್ರಸ್ತಾವವನ್ನು ಕೈಬಿಡಲಾಗಿದೆ’ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ ತಿಳಿಸಿದರು.

ಬುಧವಾರ ಸಮೀಪದ ಕಾಸನಕಂಡಿ ಅರಣ್ಯದಲ್ಲಿ  ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಿತ 'ಸಾಲುಮರದ ತಿಮ್ಮಕ್ಕ ಮರ ಉದ್ಯಾನ' ಉದ್ಘಾಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಡಿಪುರದಲ್ಲಿ ಅಪಾರ ವನ್ಯಜೀವಿ ಸಂಪತ್ತು ಇದ್ದು, ಅವುಗಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ರಾತ್ರಿ ಸಂಚಾರ ಆರಂಭಿಸಬೇಕು ಎಂಬ ಒತ್ತಡವಿದ್ದರೂ ಜೀವಸಂಕುಲ ರಕ್ಷಣೆಗೆ ಆ ಪ್ರಸ್ತಾವ ಕೈಬಿಡಲಾಗಿದೆ’ ಎಂದರು.

ಕೊಪ್ಪಳದಲ್ಲಿ 250ಕ್ಕೂ ಹೆಚ್ಚು ಬೃಹತ್ ಕೈಗಾರಿಕೆಗಳಿದ್ದು, ಪರಿಸರ ಕಾಯ್ದೆ ಉಲ್ಲಂಘಿಸುತ್ತಿರುವ ಕುರಿತು ಸಚಿವರ ಗಮನಕ್ಕೆ ತಂದಾಗ, ಪರಿಸರ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಶೀಘ್ರ ಪ್ರವಾಸ ಮಾಡಿ ಸಮಸ್ಯೆ ಕುರಿತು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಕೇಂದ್ರ ಸರ್ಕಾರ ಪರಿಸರ ಸಂಬಂಧಿ ಯೋಜನೆಗೆ ₹ 45 ಸಾವಿರ ಕೋಟಿ ಮೀಸಲಿಟ್ಟಿದ್ದು, ಹಸಿರು ಕರ್ನಾಟಕ ಯೋಜನೆಯಲ್ಲಿ ಸಾಲುಮರ, ತಾಲ್ಲೂಕಿಗೊಂದು ಮರ ಉದ್ಯಾನ, ಕಾಡು ಕೃಷಿ ಸೇರಿದಂತೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು. ಕಳೆದ ಬಾರಿಯ ಸರ್ಕಾರ 5.50 ಕೋಟಿ ಸಸಿಗಳನ್ನು ನೆಟ್ಟಿದ್ದು, ನಾವು 10 ಕೋಟಿ ಸಸಿ ನೆಡುವ ಯೋಜನೆ ರೂಪಿಸಿದ್ದೇವೆ ಎಂದರು.

ರುದ್ರಾಪುರ-ಕಾಸನಕಂಡಿಯ ನಿಸರ್ಗ ನಿರ್ಮಿತ ಮರ ಉದ್ಯಾನ ರೂಪಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, 'ಗ್ರಾಮ ಅರಣ್ಯ ಸಮಿತಿಗೆ ಉಸ್ತುವಾರಿ ನೀಡಿ, ಎಲ್ಲ ಸೌಕರ್ಯ ಕಲ್ಪಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯ್ತಿ ಸಿಇಒ ವೆಂಕಟರಾಜಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್.ಕೆ.ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಾಲಚಂದ್ರನ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !