ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರದ ವಿರುದ್ಧ ಬೇಕು ಹೋರಾಟ: ಹೋರಾಟಗಾರ ಗಾರಾ ಸುರೇಶ್‌

ಪಾರಂಪರಿಕ ರಾಷ್ಟ್ರೀಯ ಹೋಳಿ ಉತ್ಸವ
Last Updated 6 ಮಾರ್ಚ್ 2023, 21:24 IST
ಅಕ್ಷರ ಗಾತ್ರ

ಕೊಪ್ಪಳ: ‘ನಮ್ಮ ಸಮಾಜದ ಜನರ ದೌರ್ಬಲ್ಯಗಳನ್ನೇ ದುರ್ಬಳಕೆ ಮಾಡಿಕೊಂಡು ಮತಾಂತರ ಮಾಡುವ ಪ್ರಯತ್ನ ನಡೆಯುತ್ತಲೇ ಇದ್ದು, ನಾವೆಲ್ಲ ಸಂಘಟಿತರಾಗಿ ಹೋರಾಡಿ ಇದನ್ನು ತಡೆಗಟ್ಟುವ ಕೆಲಸ ನಿರಂತರವಾಗಿ ಮಾಡಬೇಕಾಗಿದೆ’ ಎಂದು ಬಂಜಾರ ಸಮಾಜದ ಹೋರಾಟಗಾರ ಗಾರಾ ಸುರೇಶ್‌ ಹೇಳಿದರು.

ತಾಲ್ಲೂಕಿನ ಕೊಪಳಗಡ್‌ ಬಹದ್ದೂರ್‌ ಬಂಡಿಯಲ್ಲಿ ಸೋಮವಾರ ನಡೆದ ಬಂಜಾರರ ಪಾರಂಪರಿಕ ರಾಷ್ಟ್ರೀಯ ಹೋಳಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ‘ಬಂಜಾರ ಸಮಾಜ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಮೂಲಕ ಹೆಸರು ಮಾಡಿದೆ. ಇವು ಭವಿಷ್ಯದಲ್ಲಿಯೂ ಉಳಿಯಬೇಕಾದರೆ ಆಚರಣೆ ನಿರಂತರವಾಗಿ ನಡೆಯಬೇಕು. ನಮ್ಮ ಸಮಾಜದ ಕಲೆ ಪುಸ್ತಕದ ರೂಪದಲ್ಲಿ, ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಹಾಪ್ರಬಂಧಗಳ ಮೂಲಕ ದಾಖಲಾಗಬೇಕು’ ಎಂದರು.

‘ಶಿಕ್ಷಣ ನಂಬಿಕೊಂಡು ಮುನ್ನಡೆಯುವ ಸಮಾಜ ಸುಶಿಕ್ಷಿತವಾಗಿ ಉಳಿಯುತ್ತದೆ ಎನ್ನುವುದು ನನ್ನ ಗಟ್ಟಿ ನಂಬಿಕೆ. ರಾಷ್ಟ್ರೀಯತೆ ಹಾಗೂ ದೇಶಪ್ರೇಮ ಪ್ರಮುಖವಾಗಬೇಕು. ನಮ್ಮ ಕಲೆ ಉಳಿಯಲು ದೇಶದಾದ್ಯಂತ ಚದುರಿ ಹೋಗಿರುವ ಸಮಾಜದ ಜನರನ್ನು ಒಂದುಗೂಡಿಸಬೇಕು. ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ವರ್ಗದಲ್ಲಿ ಮೀಸಲಾತಿ ಸ್ಥಾನಮಾನ ನೀಡಬೇಕು. ಕಲೆ, ಸಂಸ್ಕೃತಿ ಸಮಾಜದ ಈಗಿನ ಯುವಜನತೆಗೆ ಹೇಳಿಕೊಡಲು ಗುರುಕುಲ ಸ್ಥಾಪಿಸಬೇಕು’ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ದೇಶವನ್ನು ಒಗ್ಗೂಡಿಸುವಲ್ಲಿ ಬಂಜಾರ ಸಮಾಜ ಪ್ರಮುಖಪಾತ್ರ ವಹಿಸಿದೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರ ಕೊಡುಗೆ ನೀಡಿದೆ. ಇರುವ ಮೀಸಲಾತಿಯನ್ನೇ ನಂಬಿಕೊಳ್ಳದೇ ನಿಮ್ಮ ಶ್ರಮದ ಮೂಲಕ ಜೀವನದಲ್ಲಿ ಎತ್ತರಕ್ಕೆ ಏರುತ್ತಿದ್ದೀರಿ’ ಎಂದು ಶ್ಲಾಘಿಸಿದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ‘ಬಂಜಾರರ ಹೋಳಿ ಉತ್ಸವ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲಿ. ನಾಯಕರನ್ನು ಸೃಷ್ಟಿಮಾಡುವ ಶಕ್ತಿ ನಿಮ್ಮ ಸಮಾಜಕ್ಕಿದ್ದು, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌, ಸಮಾಜದ ಸ್ವಾಮೀಜಿ ಸಿದ್ಧಲಿಂಗ ಮಹಾರಾಜ್‌, ಮುಖಂಡರಾದ ತುಳಸಿ ನಾಯ್ಕ, ಲಕ್ಷ್ಮಣ ಪವಾರ್‌, ತುಳಸಿ ನಾಯ್ಕ, ಪಂಪಣ್ಣ ನಾಯ್ಕ, ಶಂಕರ ನಾಯ್ಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹಾಸ್ಟೆಲ್‌ ನಿರ್ಮಾಣಕ್ಕೆ ಮನವಿ
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ್‌ ನಾಯ್ಕ ಮಾತನಾಡಿ ‘ನಮ್ಮ ಸಮಾಜದ ಜನ ವಲಸೆ ಹೋಗುವುದು ಹೆಚ್ಚಾಗುತ್ತಿದ್ದು, ಇದರಿಂದ ಮಕ್ಕಳ ಓದಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮೂರ್ನಾಲ್ಕು ತಾಂಡಾಗಳ ನಡುವೆ ಹಾಸ್ಟೆಲ್‌ ನಿರ್ಮಿಸಬೇಕು. ರಾಷ್ಟ್ರೀಯ ಮಟ್ಟದಲ್ಲಿ ಬಂಜಾರ ಮತ್ತು ಅಲೆಮಾರಿ ಸಮುದಾಯಕ್ಕೆ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT