ಕೊಪ್ಪಳ ಜಿಲ್ಲೆಯಾದ್ಯಂತ ಮಿಶ್ರ ಬಂದ್‌ಗೆ ಪ್ರತಿಕ್ರಿಯೆ

7
ಅಂಗಡಿ-ಮುಗ್ಗಟ್ಟು ಮಧ್ಯಾಹ್ನದರೆಗೆ ಬಂದ್: ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

ಕೊಪ್ಪಳ ಜಿಲ್ಲೆಯಾದ್ಯಂತ ಮಿಶ್ರ ಬಂದ್‌ಗೆ ಪ್ರತಿಕ್ರಿಯೆ

Published:
Updated:
Deccan Herald

ಕೊಪ್ಪಳ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು, ಸಂಘ, ಸಂಸ್ಥೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಕರೆ ನೀಡಿದ್ದ ಭಾರತ ಬಂದ್‌ಗೆ ಜೆಡಿಎಸ್, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂ.ಎಲ್), ಎಸ್‌ಯುಸಿಐ (ಸಿ) ಮತ್ತು ಆರ್‌ಎಸ್‌ಪಿ, ಅಟೊ ಚಾಲಕರ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಬೆಂಬಲಿಸಿ, ಪಾಲ್ಗೊಂಡಿದ್ದರು.

ಬಂದ್‌ ಪ್ರಯುಕ್ತ ಶಾಲೆಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳು ಬಂದ್ ಆಗಿದ್ದರಿಂದ ವಿವಿಧೆಡೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು. ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ ಕಡೆಗೆ ತೆರಳುವ ರೈಲುಗಳು ಜನರಿಂದ ತುಂಬಿದ್ದವು.

ನಗರದ ಹೃದಯ ಭಾಗದ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಗದಗ-ಹೊಸಪೇಟೆ ಮುಖ್ಯರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಎಂದಿಗಿಂತ ಹೆಚ್ಚಿತು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಳ್ಳಿನ ಆಡಳಿತ ನಡೆಸುತ್ತಿದೆ. ಯುಪಿಎ ಸರ್ಕಾರ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕಚ್ಚಾ ತೈಲ ಬೆಲೆ ಜಾಸ್ತಿ ಇತ್ತು. ಪೆಟ್ರೋಲ್ ಬೆಲೆ ₹ 52.50 ಪೈಸೆ ಇತ್ತು. ಇಂದು ಶೇ 30 ರಷ್ಟು ಕಚ್ಚಾ ತೈಲ ಬೆಲೆ ಇಳಿಕೆ ಆಗಿದೆ. ಆದರೆ, ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ ₹ 82  ಆಗಿದೆ. ಸಿಲಿಂಡರ್ ಬೆಲೆ ₹ 412 ಇದ್ದದ್ದು ಇಂದು ₹ 850 ಏರಿಕೆ ಆಗಿದೆ ಇದರಿಂದ ಜನರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸೈಯದ್ ಜುಲ್ಲು ಖಾದ್ರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಮಹೇಂದ್ರ ಚೋಪ್ರಾ ಇದ್ದರು.

ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತೈಲ, ಅಡುಗೆ ಅನಿಲ ಬೆಲೆ ಇಳಿಸಬೇಕು, ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ನೀತಿಯನ್ನು ಕೈಬಿಡಬೇಕು ಎಂದು ಪ್ರಧಾನಿ ಅವರಿಗೆ ಪತ್ರ ಬರೆದು ರವಾನಿಸಲಾಯಿತು.

ಪಕ್ಷದ ಮುಖಂಡರಾದ ವಿರೇಶ ಮಹಾಂತಯ್ಯನಮಠ, ಕೆ.ಎಂ.ಸೈಯದ್, ಅಮರೇಗೌಡ ಪಾಟೀಲ, ಮೌನೇಶ ವಡ್ಡಟ್ಟಿ,  ಮಂಜುನಾಥ ಗಡ್ಡದ ಮುಂತಾದವರು ಇದ್ದರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಎಡಪಕ್ಷಗಳ ಶರಣು ಗಡ್ಡಿ, ಬಸವರಾಜ ಶೀಲವಂತರ, ಕಾಸೀಂ ಸರ್ದಾರ್, ಸುಂಕಪ್ಪ ಗದಗ, ಹುಸೇನ್ ಪಾಶಾ, ಅಟೊ ಚಾಲಕರ ಸಂಘದ ಅಧ್ಯಕ್ಷ ನಜೀರ್, ನಜೀರ್ ಅಬ್ದುಲ್, ಶರಣಪ್ಪ ಅಂಗಡಿ, ಬಸವರಾಜ ಮೇಟಿ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !