ಕುಷ್ಟಗಿ: ವಾಂತಿ ಭೇದಿಯಿಂದ ರಾಜ್ಯದ ಗಮನ ಸೆಳೆದಿದ್ದ ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮತ್ತೆ ಹದಗೆಟ್ಟಿದ್ದು, ಯೋಗ್ಯವಲ್ಲದ ನೀರನ್ನೇ ಕುಡಿಯಲು ಪೂರೈಸುತ್ತಿರುವುದರಿಂದ ಗ್ರಾಮಸ್ಥರು ಪುನಃ ಅನಾರೋಗ್ಯಕ್ಕೆ ಈಡಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಗ್ರಾಮದಲ್ಲಿ ಕೆಲ ದಿನಗಳಿಂದ ಕೆಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡ ಕಾರಣ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ ಪೂಜಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಇತರರು ಸೋಮವಾರ ಭೇಟಿ ನೀಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಹಿತಿ ನೀಡಿದ ಎಇಇ ವಿಜಯಕುಮಾರ ಪೂಜಾರ, ಯೋಗ್ಯವಲ್ಲದ ನೀರು ಪೂರೈಸುವುದನ್ನು ನಿಲ್ಲಿಸಲಾಗಿದ್ದು, ಜೆಜೆಎಂ ನೀರು ಪೂರೈಕೆ ಸಂಬಂಧ ಕೊಳವೆ ಸಂರ್ಪಕ ಕಲ್ಪಿಸಲಾಗುತ್ತಿದೆ. ಒತ್ತಡ ಇಲ್ಲದ ಕಾರಣ ಎತ್ತರದಲ್ಲಿರುವ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಅಗತ್ಯವಿರುವ ಕಡೆ ನಿಯಂತ್ರಣ ವಾಲ್ವ್ ಅಳವಡಿಸಲಾಗುತ್ತಿದೆ. ಅಲ್ಲದೇ ಅಕ್ಟೋಬರ್ 2 ಒಳಗೆ ಗ್ರಾಮದ ಎಲ್ಲ ಮನೆಗಳಿಗೂ ಜೆಜೆಎಂ ನೀರು ಪೂರೈಸುವಂತೆ ಜೆಜೆಎಂ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಒಂದು ವೇಳೆ ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿರುವುದಾಗಿ ತಿಳಿಸಿದರು.
ಗ್ರಾಮದ ಅರ್ಧದಷ್ಟು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಬಹು ಗ್ರಾಮ ಕುಡಿಯುವ ನೀರು ಯೋಜನೆ ತೊಟ್ಟಿಗೆ ನೀರು ಬಂದರೂ ಅಸಮರ್ಪಕ ಕೆಲಸದಿಂದ ಮನೆಗಳಿಗೆ ಪೂರೈಕೆಯಾಗುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಸೇರಿದ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿದ್ದರೂ ಅದೇ ಬಾವಿಯ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಜನರು ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಲುಷಿತ ನೀರು ಪೂರೈಕೆಯಿಂದಾಗಿ ಕೆಲ ತಿಂಗಳ ಹಿಂದೆ ಗ್ರಾಮದಲ್ಲಿ ವಾಂತಿ ಭೇದಿಯಿಂದ ಬಾಲಕಿ ಮೃತಪಟ್ಟು, ಬಹಳಷ್ಟು ಜನರು ತೊಂದರೆ ಅನುಭವಿಸಿದ್ದರು. ಗ್ರಾಮ ಪಂಚಾಯಿತಿ ಅಶುದ್ಧ ನೀರು ಪೂರೈಸಿದ್ದರಿಂದ ಸಮಸ್ಯೆ ಉದ್ಘವಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ದೊಡ್ಡನಗೌಡ ಪಾಟೀಲ, ಪಂಚಾಯಿತಿರಾಜ್ ಇಲಾಖೆ ಆಯುಕ್ತರು ಸೇರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.