ಅಬ್ಬರದ ಪ್ರಚಾರ: ಒಂದಾದ ಮುಖಂಡರು

ಶನಿವಾರ, ಏಪ್ರಿಲ್ 20, 2019
29 °C
ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಭರಾಟೆ

ಅಬ್ಬರದ ಪ್ರಚಾರ: ಒಂದಾದ ಮುಖಂಡರು

Published:
Updated:
Prajavani

ಕೊಪ್ಪಳ: ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗೆ ಪ್ರತಿದಿನ ಬೆವರು ಹರಿಸುತ್ತಿದ್ದಾರೆ. ಬೆಳಿಗ್ಗೆ ಮನೆ ಬಿಟ್ಟರೆ, ಮಧ್ಯರಾತ್ರಿ ಮನೆಗೆ ಬಂದರೂ, ಸೋಲು, ಗೆಲುವಿನ ಲೆಕ್ಕಾಚಾರದಲ್ಲಿಯೇ ತೊಡಗಿದ್ದು, ಚುನಾವಣೆ ಕಣ ಬಿಸಿ ಏರುವಂತೆ ಮಾಡಿದೆ.

ಕಾಂಗ್ರೆಸ್-ಬಿಜೆಪಿ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಎರಡು ಪಕ್ಷದ ಅಭ್ಯರ್ಥಿಗಳು ಅವರ ಬೆಂಬಲಿಗರು ಸರಣಿ ಸಭೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಮತದಾರರು ಮಾತ್ರ ತಮ್ಮ ಒಲುವು ಯಾರ ಪರ ಇದೆ ಎಂಬುವುದನ್ನು ಮೇ 23ರ ಫಲಿತಾಂಶದ ದಿನವೇ ಗೊತ್ತಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 4 ಬಿಜೆಪಿ ಶಾಸಕರು, ಒಬ್ಬ ಜೆಡಿಎಸ್ ಶಾಸಕ, 3 ಕಾಂಗ್ರೆಸ್ ಶಾಸಕರು ಇದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕೆ.ರಾಜಶೇಖರ ಹಿಟ್ನಾಳ ಕಣದಲ್ಲಿ ಇದ್ದಾರೆ. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಸಂಗಣ್ಣ ಕರಡಿ ಪುನರಾಯ್ಕೆ ಬಯಸಿ ಕಣದಲ್ಲಿ ಇದ್ದಾರೆ. ರಾಜಶೇಖರ ಹಿಟ್ನಾಳ ಅವರ ಜೊತೆಗೆ ತಂದೆ ಬಸವರಾಜ ಹಿಟ್ನಾಳ, ಸಹೋದರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಗೆಲುವಿಗೆ ಹೆಗಲು ಕೊಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ತಮ್ಮ ಪುತ್ರ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ, ಕ್ಷೇತ್ರದ ಶಾಸಕರು, ಕಾರ್ಯಕರ್ತರನ್ನು ನೆಚ್ಚಿಕೊಂಡಿದ್ದು, ಕ್ಷೇತ್ರದ ತುಂಬೆಲ್ಲಾ ಆತ್ಮವಿಶ್ವಾಸದಿಂದ ಪ್ರಚಾರ ನಡೆಸುತ್ತಿದ್ದಾರೆ. ಗಂಗಾವತಿಗೆ ಏ.12ರಂದು ಮೋದಿ ಪ್ರಚಾರಕ್ಕೆ ಬರಲಿದ್ದು, ಕ್ಷೇತ್ರದ ಚಿತ್ರಣವೇ ಬದಲಾಗಲಿದೆ ಎಂಬ ವಿಶ್ವಾಸದಲ್ಲಿ ಇದ್ದಾರೆ. 

ಒಂದಾದ ಮುಖಂಡರು: ಕಾಂಗ್ರೆಸ್‌ ಪಕ್ಷದಲ್ಲಿ ಮುಖಂಡರ ಪಡೆಯೇ ಪ್ರಚಾರಕ್ಕೆ ಸಿದ್ಧವಾಗಿದೆ. ಕಳೆದ ಚುನಾವಣೆಯಲ್ಲಿ ಒಳಗೊಳಗೆ ರಾಜಕೀಯ ಮಾಡಿ, ಅಭ್ಯರ್ಥಿ ಸೋಲಿಗೆ ಕಾರಣರಾದ ಮುಖಂಡರನ್ನು ಕರೆಸಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.

ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಿ.ಎಂ.ನಾಗರಾಜ ಶಿರಗುಪ್ಪ, ಚಂದ್ರಶೇಖರಯ್ಯ, ಶಾಸಕರಾದ ಅಮರೇಗೌಡ ಬಯ್ಯಾಪುರ, ಪ್ರತಾಪ್‌ಗೌಡ ಪಾಟೀಲ ಮಸ್ಕಿ, ಮಾಜಿ ಸಂಸದರಾದ ಶಿವರಾಮೇಗೌಡ, ಕೆ.ವಿರುಪಾಕ್ಷಪ್ಪ ಹಾಗೂ ಸಿಂಧನೂರ ಜೆಡಿಎಸ್ ಶಾಸಕ ಹಾಗೂ ಸಚಿವ ವೆಂಕಟರಾವ್ ನಾಡಗೌಡ, ಮುಖಂಡರಾದ ಎಚ್‌.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಭಿನ್ನಮತ ತೊರೆದು ಪ್ರಚಾರದ ಮಂಚೂಣಿಯಲ್ಲಿ ಇದ್ದಾರೆ.

ಸಿದ್ದರಾಮಯ್ಯನವರ ಪ್ರತಿಷ್ಠೆ, ಜಿಲ್ಲೆಯ ಮುಖಂಡರ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾದ ಅನಿವಾರ್ಯತೆ, ಒತ್ತಡ ಇದೆ.

ಬಿಜೆಪಿ ಸಭೆ: ಅಭ್ಯರ್ಥಿ ಗೆಲುವಿಗೆ ಒಂದಾಗಿ ಶ್ರಮಿಸುವಂತೆ ಈಚೆಗೆ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾವೇಶದಲ್ಲಿ ಸಂಗಣ್ಣ ಕರಡಿ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಟಿಕೆಟ್ ದೊರೆಯಲು ವಿಳಂಬವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಭಾಗವಹಿಸಿದ ಕೆಲವು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಿಟ್ನಾಳ ಪರಿವಾರಕ್ಕೆ ಪರ್ಯಾಯವಿಲ್ಲದೆ, ಸಮರ್ಥ ಅಭ್ಯರ್ಥಿ ಕೊರತೆಯಿಂದ ಉಳಿದ ಮುಖಂಡರು ಭಿನ್ನಮತ ತೋರ್ಪಡಿಸದೇ ಕರಡಿ ಗೆಲುವಿಗೆ ಶ್ರಮಿಸಬೇಕಾದ ಅಗತ್ಯವನ್ನು ಮನಗಾಣಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್, ಮಾಜಿ ಶಾಸಕ ಕೆ.ಶರಣಪ್ಪ, ಡಾ.ಕೆ.ಬಸವರಾಜ, ಪಕ್ಷದ ಮತ್ತು ಸಂಘ ಪರಿವಾರದ ಮುಖಂಡರು ಇದ್ದರು ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !