ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಹೆಸರಲ್ಲಿ ಬಿಜೆಪಿ ರಾಜಕಾರಣ: ಶಿವರಾಜ ತಂಗಡಗಿ

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಂಗಡಗಿ ಆರೋಪ
Last Updated 2 ಜುಲೈ 2022, 15:11 IST
ಅಕ್ಷರ ಗಾತ್ರ

ಕೊಪ್ಪಳ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇವರ ಹೆಸರನ್ನು ನಾವು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿನ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ನಡೆದ ’ಮೀಟ್‌ ಟು ದಿ ಪ್ರೆಸ್‌‘ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಕೆಯ ಉದ್ದೇಶದಿಂದ ಬಿಜೆಪಿ ಅಂಜನಾದ್ರಿ ವಿಷಯವನ್ನು ಮತ ಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ಅಭಿವೃದ್ಧಿ ವಿಷಯ ಜನರ ಮುಂದಿಟ್ಟು ಮತ ಕೇಳುತ್ತೇವೆ. ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ನಾನು ಆಂಜನೇಯನ ಭಕ್ತ, ಅದಕ್ಕಾಗಿ ಮಾಲೆ ಧರಿಸಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೂ ಮಾಲೆ ಧರಿಸಿ ಆಂಜನೇಯನ ದರ್ಶನ ಪಡೆಯುವುದಾಗಿ ಹೇಳಿದ್ದಾರೆ. ಎಲ್ಲ ಧರ್ಮದವರನ್ನು ಪ್ರೀತಿಸುವ ಹಾಗೂ ಗೌರವಿಸುವ ಹಿಂದು ನಾನು. ಆದರೂ, ಬಿಜೆಪಿ ಹಿಂದೂಗಳ ರಕ್ಷಣೆಯನ್ನು ಗುತ್ತಿಗೆ ಪಡೆದುಕೊಂಡಂತೆ ನಡೆದುಕೊಳ್ಳುತ್ತಿದೆ‘ ಎಂದು ಟೀಕಿಸಿದರು.

‘ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಕೊಪ್ಪಳದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ. ಮುಂದೆ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಕೆರೆ ತುಂಬಿಸಲು, ಜಲಾಶಯಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಬಿಜೆಪಿ ಮಾಡಿದ್ದೇನು? ಹೊರ ಜಿಲ್ಲೆಯವರು ಬಂದು ನಮ್ಮ ಜಿಲ್ಲೆಯಲ್ಲಿ ಜಾತ್ರೆ ಮಾಡಿ ಹೋಗಿದ್ದೇ ಸಾಧನೆ‘ ಎಂದು ಚಾಟಿ ಬೀಸಿದರು.

‘ಅಮಾನತು ಸಾಲದು; ಶಿಕ್ಷೆಯಾಗಲಿ’

ಕೊಪ್ಪಳ: ಕಾರಟಗಿಯಲ್ಲಿ ವಾಸವಿರುವ ಶಿಕ್ಷಕನೊಬ್ಬ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ ’ಶಿಕ್ಷಕನ ಅಮಾನತು ಮಾತ್ರ ಸಾಲದು. ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

’ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸಾಮಾಜಿಕ ಬದುಕಿನಲ್ಲಿ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಆ ಕ್ಷೇತ್ರದ ಶಾಸಕರು ಮೌನವಾಗಿದ್ದಾರೆ. ಅವರು ಇಂಥದ್ದನ್ನೆಲ್ಲ ಸಹಿಸಬಾರದು. ಶಾಸಕರ ವಿರುದ್ಧವೂ ಅನೇಕ ಆರೋಪಗಳು ಕೇಳಿಬಂದಿವೆ. ಕ್ಷೇತ್ರದ ರಾಜ ಹೇಗೆ ಇರುತ್ತಾನೊ; ಪ್ರಜೆಗಳು ಕೂಡ ಹಾಗೆಯೇ ಇರುತ್ತಾರೆ‘ ಎಂದು ಹೆಸರು ಹೇಳದೇ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸಗೂರು ಅವರಿಗೆ ಟಾಂಗ್‌ ನೀಡಿದರು.

****

ಹಿಂದಿನ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆಮಾಡಿ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಾರಿ ಹಿಂದಿನ ತಪ್ಪು ಮಾಡುವುದಿಲ್ಲ.

- ಶಿವರಾಜ ತಂಗಡಗಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT