ಭಾನುವಾರ, ಆಗಸ್ಟ್ 18, 2019
23 °C
ಜಲಾವೃತಗೊಂಡ ವಿರೂಪಾಪುರ, ನವವೃಂದಾವನ ಗಡ್ಡೆ

ಆಪತ್ತಿನಲ್ಲಿ ಸಿಲುಕಿದ್ದ ರಕ್ಷಣಾ ಸಿಬ್ಬಂದಿ; 12 ಕಿ.ಮೀ ಈಜಿ ದಡ ಸೇರಿದ ಯೋಧ

Published:
Updated:
Prajavani

ಕೊಪ್ಪಳ: ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದವರ ರಕ್ಷಣೆಗೆ ತೆರಳಿದ್ದ ರಕ್ಷಣಾ ತಂಡದ ಏಳು ಸದಸ್ಯರು, ಬೋಟ್‌ ಮಗುಚಿದ್ದರಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಬಂಡೆ, ಮರಗಳನ್ನು ಹಿಡಿದುಕೊಂಡು ಆಶ್ರಯ ಪಡೆದಿದ್ದರು. ಒಬ್ಬರು 12 ಕಿ.ಮೀ. ಈಜಿ ದಡ ಸೇರಿದರೆ, ಉಳಿದವರನ್ನು ಸೇನಾ ಪಡೆಯ ಹೆಲಿಕಾಪ್ಟರ್‌ನಿಂದ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.

ಬೋಟ್‌ನಲ್ಲಿ ತೆರಳಿದ್ದ ಎನ್‌ಡಿಆರ್‌ಎಫ್ ಅಧಿಕಾರಿ ಪ್ರೀತಂ ಸಿಂಗ್, ಸಿವಿಲ್ ಡಿಫೆನ್ಸ್ ಅಧಿಕಾರಿ ಚೇತನ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಎಚ್.ಜಿ.ಗೌತಮ್, ಪಿ.ಗಣೇಶ್, ಸೂಗನಗೌಡ, ಚೇತನ್, ನಾಗರಾಜ್ ಅವರನ್ನು ರಕ್ಷಿಸಲಾಯಿತು.

ಡ್ರೋಣ್ ಕ್ಯಾಮೆರಾದಿಂದ ಇವರನ್ನು ಪತ್ತೆ ಹಚ್ಚಲಾಯಿತು. ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರೂಪಾಪುರ ಗಡ್ಡೆಯಲ್ಲಿ ವಾಸ್ತವ್ಯವಿದ್ದ 19 ಮಂದಿ ವಿದೇಶಿ ಪ್ರವಾಸಿಗರೂ ಸೇರಿ ಸ್ಥಳೀಯ 400ಕ್ಕೂ ಹೆಚ್ಚು ಜನರನ್ನು ಎರಡು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಬಳ್ಳಾರಿ ಜಿಲ್ಲೆಯ ಜಿಂದಾಲ್‌ಗೆ ಸುರಕ್ಷಿತವಾಗಿ ಕರೆದೊಯ್ಯಲಾಯಿತು.

ತುಂಗಭದ್ರಾ ಜಲಾಶಯದಿಂದ 2 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಪ್ರವಾಹ ಬಂದಿತ್ತು. ಸಣಾಪುರ ಮಾರ್ಗವಾಗಿ ಗಡ್ಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು. ಗಡ್ಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರು. ಅವರನ್ನು ಬೋಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಪರಿಶೀಲಿಸಲು ಹೊರಟಿದ್ದ ರಕ್ಷಣಾ ಸಿಬ್ಬಂದಿ ಇದ್ದ ಬೋಟ್ ಮುಗುಚಿ ಬಿತ್ತು. ಇದರಿಂದ ಬೋಟ್ ಸಂಪರ್ಕ ಕೂಡಾ ಕಡಿತಗೊಂಡಿತು.

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಬೋಟ್‌ ಇಲ್ಲದೆ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿದ್ದರು. ಸೇನಾ ಪಡೆಯವರು ಎಲ್ಲರನ್ನೂ ಹೆಲಿಕಾಪ್ಟರ್‌ ಮೂಲಕ ಸ್ಥಳಾಂತರಿಸಿದರು.

ತುಂಗಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನವವೃಂದಾವನ ಗಡ್ಡೆ, 12 ಕಾಲಿನ ಮಂಟಪ, ಆನೆಗೊಂದಿಯ ಐತಿಹಾಸಿಕ ಸ್ಮಾರಕಗಳು ಸಂಪೂರ್ಣ ಮುಳುಗಿವೆ.


ಜನರ ಮಧ್ಯೆ ನಿಂತಿರುವ  ಸಿವಿಲ್ ಡಿಫೆನ್ಸ್ ಅಧಿಕಾರಿ ಡಾ.ಪಿ.ಆರ್.ಎಸ್.ಚೇತನ್

12 ಕಿ.ಮೀ ಈಜಿ ದಡ ಸೇರಿದ ಯೋಧ

ತುಂಗಭದ್ರಾ ನದಿಯಷ್ಟು ಸುಳಿ, ಅಪಾಯಕಾರಿ ನದಿ ದೇಶದಲ್ಲಿಯೇ ಇಲ್ಲ ಎಂಬ ಮಾತಿದೆ. ನುರಿತ ಈಜುಪಟುಗಳು ಕೂಡ ಸುಳಿಗೆ ಸಿಲುಕುತ್ತಾರೆ. ಆದರೆ, ಈ ನದಿಯಲ್ಲಿ ರಕ್ಷಣಾ ಪಡೆ ಸಿಬ್ಬಂದಿಯೊಬ್ಬರು 12 ಕಿ.ಮೀ ಈಜಿ ದಡ ಸೇರಿದರು. ಜನರ ರಕ್ಷಣೆಗೆ ಬಂದಿದ್ದ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಡಾ.ಬಿ.ಆರ್.ಎಸ್ ಚೇತನ್‌ ಅವರು ಬೋಟ್ ಮುಗುಚಿ ನದಿಗೆ ಬಿದ್ದರು. ಸುರಕ್ಷಾ ಜಾಕೆಟ್‌ ಧರಿಸಿದ್ದರೂ ನೀರಿನ ಸೆಳೆತಕ್ಕೆ ಬಹುದೂರ ತೇಲಿ ಹೋಗಿದ್ದರು. ಪ್ರವಾಹದ ವಿರುದ್ಧ ಈಜಿ ದಡ ಸೇರಿದ ಅವರನ್ನು ಅಭಿನಂದಿಸಲು ಜನ ಮುಗಿಬಿದ್ದರು.

‘ರಾಜ್ಯದ ಗದಗ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರನ್ನು ರಕ್ಷಿಸಿದ್ದೇನೆ. ನಾನು ಇಲ್ಲಿ ಪ್ರವಾಹಕ್ಕೆ ಬಿದ್ದರೂ 12 ಕಿ.ಮೀ ಈಜಿ ದಡ ಸೇರಲು ಸಂತ್ರಸ್ತರ ಹಾರೈಕೆಯೇ ಕಾರಣ. ಜನರ ರಕ್ಷಣೆಯೇ ನನ್ನ ಆದ್ಯತೆ. ಮತ್ತೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ಹೇಳಿದ ಚೇತನ್‌, ಬಳಿಕ ಜೈಹಿಂದ್ ಘೋಷಣೆ ಕೂಗಿ ಹೆಮ್ಮೆಪಟ್ಟರು.

Post Comments (+)