ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಸೇತುವೆ ಕಾಮಗಾರಿ ಅಪೂರ್ಣ- ರಸ್ತೆ ಬಂದ್!

ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಸಂಚಾರ ಸ್ಥಗಿತ, ಜನರ ಪರದಾಟ
Last Updated 17 ಜನವರಿ 2023, 6:59 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಶಾಖಾಪುರ ನೆರೆಬೆಂಚಿ ಬಳಿಯ ಜಿಲ್ಲಾ ರಸ್ತೆಯನ್ನು ಮೇಲ್ಸೇತುವೆಯಾಗಿ ಪರಿವರ್ತಿಸುವ ಕಾಮಗಾರಿ ಕೈಗೊಂಡಿರುವ ನೈಋತ್ಯ ರೈಲ್ವೆ ವಲಯ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇವಾ ರಸ್ತೆಯನ್ನೂ ಬಂದ್‌ ಮಾಡಿರುವುದರಿಂದ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಗದಗ–ವಾಡಿ ನೂತನ ರೈಲು ಮಾರ್ಗ ಶಾಖಾಪುರ ಮತ್ತು ನೆರೆಬೆಂಚಿ ಗ್ರಾಮಗಳ ಸೀಮಾಂತರದಲ್ಲಿ ಹಾದು ಹೋಗಲಿದೆ. ಆದ್ದರಿಂದ ಇಲ್ಲಿಯ ಜಿಲ್ಲಾ ರಸ್ತೆಯನ್ನು ಮೇಲ್ಸೇತುವೆಯಾಗಿ ಪರಿವರ್ತಿಸಲಾಗುತ್ತಿದೆ. ಈ ಕಾಮಗಾರಿಯು ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ.

ಹಾಗಾಗಿ ಒಂದೂವರೆ ವರ್ಷದ ಹಿಂದೆ ಪಕ್ಕದ ಜಮೀನನ್ನು ರೈತರಿಂದ ಒಪ್ಪಂದದ ಆಧಾರದ ಮೇಲೆ ಗುತ್ತಿಗೆ ಪಡೆದಿದ್ದ ರೈಲ್ವೆ ಇಲಾಖೆ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಿತ್ತು. ಅವಧಿ ಪೂರ್ಣಗೊಂಡ ನಂತರ ಜಮೀನನ್ನು ಬಿತ್ತನೆಗೆ ಅನುಕೂಲವಾಗುವಂತೆ ಯಥಾಸ್ಥಿತಿಗೆ ತರಬೇಕಿತ್ತು. ಆದರೆ ಒಪ್ಪಂದದ ಅವಧಿ ಡಿ.12ಕ್ಕೆ ಮುಗಿದಿದೆ. ತಾತ್ಕಾಲಿಕ ರಸ್ತೆಯನ್ನು ಗುತ್ತಿಗೆದಾರರು ತೆರವುಗೊಳಿಸಿ ವಾಹನಗಳು ಜಮೀನಿನ ಒಳಗೆ ಬಾರದಂತೆ ಎರಡೂ ಬದಿಯಲ್ಲಿ ಒಡ್ಡು ನಿರ್ಮಿಸಿ ಮುಳ್ಳುಕಂಟಿ ಇಟ್ಟಿದ್ದಾರೆ.

ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುವವರೆಗೂ ತಾತ್ಕಾಲಿಕ ರಸ್ತೆಯನ್ನು ಉಳಿಸಿಕೊಳ್ಳಬೇಕಿದ್ದ ರೈಲ್ವೆ ಇಲಾಖೆ ಕೆಲಸ ಮುಗಿಸದೆ ತಾತ್ಕಾಲಿಕ ರಸ್ತೆಯನ್ನೂ ತೆರವುಗೊಳಿಸಿದೆ ಎಂದು ಈ ಮಾರ್ಗದಲ್ಲಿ ಸಂಚರಿಸುವ ಜನರು ದೂರಿದರು.

ಇನ್ನೊಂದೆಡೆ ಮೇಲ್ಸೇತುವೆ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಸಂಚಾರಕ್ಕೆ ಮುಕ್ತವಾಗಿಲ್ಲ. ಇನ್ನೊಂದೆಡೆ ಸರ್ವಿಸ್‌ ರಸ್ತೆಯೂ ಇಲ್ಲದ ಕಾರಣ ಕಳೆದ ಐದಾರು ದಿನಗಳಿಂದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಮಾರ್ಗವಾಗಿ ಸಂಚರಿಸುವುದಕ್ಕೆ ಜನರು ಪರದಾಡುತ್ತಿದ್ದಾರೆ.

ಐದಾರು ದಿನಗಳಿಂದ ರಸ್ತೆ ಇಲ್ಲದೆ ಸಂಪರ್ಕ ಬಂದ್‌ ಆಗಿದೆ. ತಾತ್ಕಾಲಿಕ ರಸ್ತೆಯೂ ಇಲ್ಲ. ಮೇಲ್ಸೇತುವೆ ಕೂಡ ಇಲ್ಲ. ಸ್ಥಳದಲ್ಲಿ ರೈಲ್ವೆ ಇಲಾಖೆ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಒಬ್ಬರೂ ಇಲ್ಲದೆ ನಿರ್ಲಕ್ಷ್ಯವಹಿಸಿದ್ದಾರೆ. ಜನರಿಗೆ ತೊಂದರೆಯಾಗುತ್ತದೆ ಎಂಬುದು ತಿಳಿದರೂ ನಿರ್ಲಕ್ಷ್ಯವಹಿಸಿದ್ದಾರೆ. ಈ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಶಾಖಾಪುರ ಗ್ರಾಮಸ್ಥ ಗ್ಯಾನಪ್ಪ ಯರಗೇರಿ, ನೆರೆಬೆಂಚಿಯ ಹನುಮಗೌಡ ಪಾಟೀಲ ಇತರರು ಗೋಳು ತೋಡಿಕೊಂಡರು.

ಈ ಬಗ್ಗೆ ಜಿಲ್ಲಾಧಿಕಾರಿ ತಕ್ಷಣ ಗಮನಹರಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT