ಸೋಮವಾರ, ನವೆಂಬರ್ 29, 2021
20 °C
ಇದ್ದರೂ ಇಲ್ಲದಂತಿರುವ ಶೌಚಾಲಯ, ಸೌಕರ್ಯ ಮರೀಚಿಕೆ: ಪ್ರಯಾಣಿಕರ ಪರದಾಟ

ಸಮಸ್ಯೆ ತಾಣ ಅಳವಂಡಿ ಬಸ್‌ ನಿಲ್ದಾಣ

ಜುನಸಾಬ ವಡ್ಡಟ್ಟಿ Updated:

ಅಕ್ಷರ ಗಾತ್ರ : | |

Prajavani

ಅವವಂಡಿ: ಗ್ರಾಮದಲ್ಲಿ ಸಾರಿಗೆ ಸಂಸ್ಥೆ ನಿರ್ಮಿಸಿದ ಬಸ್ ನಿಲ್ದಾಣದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ. ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಿಲ್ದಾಣದ ಬಳಿ ಪ್ರತಿದಿನ ತ್ಯಾಜ್ಯ ಎಸೆಯಲಾಗುತ್ತದೆ. ಆದ್ದರಿಂದ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ತಾಣವಾಗಿದೆ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಕುಡಿಯುವ ನೀರಿನ ಸೌಲಭ್ಯ ಇಲ್ಲದ ಕಾರಣ ದುಡ್ಡು ಕೊಟ್ಟು ನೀರು ತೆಗೆದುಕೊಳ್ಳಬೇಕು. ಇಲ್ಲ ಹೋಟೆಲ್‌ಗಳ ಮೊರೆ ಹೋಗಬೇಕು.

ಮುಚ್ಚಿದ ಶೌಚಾಲಯ: ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದು ಮುಚ್ಚಿದ ಕಾರಣ ಉಪಯೋಗಕ್ಕೆ ಬಾರದಂತಾಗಿದೆ. ಕಳಪೆ ಕಾಮಗಾರಿ ನಡೆದಿದೆ ಎನ್ನುವ ದೂರುಗಳು ಸಹ ಕೇಳಿಬಂದಿವೆ. ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಈ ಆರೋಪಕ್ಕೆ ಕನ್ನಡಿ ಹಿಡಿಯುತ್ತದೆ.

ಶೌಚಾಲಯ ಮುಚ್ಚಿದ ಕಾರಣ ಅನಿವಾರ್ಯವಾಗಿ ಬಯಲಿನಲ್ಲಿ ಬಹಿರ್ದೆಸೆ ಮಾಡಬೇಕಾಗಿದೆ. ನಿಲ್ದಾಣದ ಸುತ್ತಮುತ್ತ ಜನ ಮೂತ್ರ ವಿಸರ್ಜನೆ ಮಾಡುವ ಕಾರಣ ದುರ್ನಾತ ಬೀರುತ್ತಿದೆ. ಆದ್ದರಿಂದ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

ಅಳವಂಡಿಯಿಂದ ಮುಂಡರಗಿ ಹಾಗೂ ಕೊಪ್ಪಳಕ್ಕೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಅಳವಂಡಿ ವ್ಯಾಪ್ತಿಯ ಹಳ್ಳಿಗಳಿಂದಲೂ ವಿವಿಧ ಕೆಲಸಗಳಿಗೆ ಸಾರ್ವಜನಿಕರು ಬರುತ್ತಾರೆ. ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಸ್‌ ನಿಲ್ದಾಣಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಶೌಚಾಲಯ ಸ್ವಚ್ಛಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು