ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾದ ತತ್ವಪದ ಗಾಯಕನಿಗೆ ಕೇಂದ್ರ ಪ್ರಶಸ್ತಿ

Last Updated 26 ನವೆಂಬರ್ 2022, 5:21 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನತುಮ್ಮರಗುದ್ದಿ ಗ್ರಾಮದ ಜಾನಪದ ಗಾಯಕ ಮತ್ತು ತತ್ವಪದಕಾರ ಮಾರೆಪ್ಪ ಚನ್ನದಾಸರ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಅಲೆಮಾರಿ ಜನಾಂಗದ 82 ವರ್ಷದ ಮಾರೆಪ್ಪ ಅವರು 5 ದಶಕಗಳಿಂದ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ದಸರಾ, ಸಾಹಿತ್ಯ ಸಮ್ಮೇಳನ ಸೇರಿ ಹಲವು ಕಡೆ ವೇದಿಕೆ ಕಾರ್ಯಕ್ರಮ ನೀಡಿದ್ದಾರೆ. ಎರಡು ದಶಕಗಳಿಂದ ಯಲಬುರ್ಗಾದಲ್ಲಿ ನೆಲೆಸಿದ್ದಾರೆ. ಕನಕದಾಸರು, ಪುರಂದರದಾಸರ ಆದಿಯಾಗಿ ಅನೇಕರ ತತ್ವಪದಗಳನ್ನು ಇವರ ಬಾಯಿಂದ ಕೇಳುವುದೇ ಚೆಂದ. ಇಳಿ ವಯಸ್ಸಿನಲ್ಲಿಯೂ ಅನೇಕ ಜನಪದ ಹಾಡುಗಳನ್ನು ಹಾಡುತ್ತಾರೆ.

ಅವರ ಕಲಾ ಸೇವೆಗೆ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ರಂಗ ಸಂಸ್ಥಾನ, ದಶಮಾನೋತ್ಸವ ಪ್ರಶಸ್ತಿ ಸೇರಿ ಹಲವು ಜಿಲ್ಲೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿವೆ. ಜಿಲ್ಲೆ ಹಾಗೂ ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದರೂ ಜೀವನಮಟ್ಟ ಮಾತ್ರ ಸುಧಾರಿಸಿಲ್ಲ.

ಪ್ರಶಸ್ತಿಯ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಮಾರೆಪ್ಪ ‘ಪ್ರಶಸ್ತಿ ಬರುತ್ತದೆ ಎಂದು ಹಲವು ವರ್ಷಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದೆ. ಪ್ರತಿವರ್ಷವೂ ಪ್ರಶಸ್ತಿ ಘೋಷಣೆಯಾದಾಗ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದ್ದು ನೋಡಿ ಬೇಸರಗೊಳ್ಳುತ್ತಿದ್ದೆ. ಈ ಸಲದ ಪಟ್ಟಿಯಲ್ಲಿ ನನ್ನ ಹೆಸರು ಇರುವುದು ತಿಳಿದು ಬಹಳಷ್ಟು ಸಂತೋಷವಾಗಿದೆ. ಇಷ್ಟು ವರ್ಷಗಳ ಅನುಭವಿಸಿದ ಬಡತನ, ನೋವಿಗೆ ಈಗ ಪ್ರಶಸ್ತಿಯ ರೂಪದಲ್ಲಿ ಬಹುಮಾನ ಲಭಿಸಿದೆ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT