ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನಿತ್ಯ ಹಾಡಿದರೂ ಬದುಕು ಈಗಲೂ ‘ಅಲೆಮಾರಿ’

82ರ ಇಳಿವಯಸ್ಸಿನಲ್ಲಿಯೂ ಆರ್ಥಿಕ ಭದ್ರತೆಗಾಗಿ ಹೋರಾಡುತ್ತಿರುವ ಮಾರೆಪ್ಪ ಚನ್ನದಾಸರ
Last Updated 27 ನವೆಂಬರ್ 2022, 4:11 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಜನಪದ ಹಾಗೂ ತತ್ವಪದ ಗಾಯಕ ಮಾರೆಪ್ಪ ಚನ್ನದಾಸರ ಅವರ ವೃತ್ತಿ ಊರಿಂದ ಊರಿಗೆ ಅಲೆದಾಡುವುದು. ಹಾಡುತ್ತಲೇ ಕಲಾ ಪ್ರದರ್ಶನ ನೀಡುವ ಕೆಲಸವನ್ನು ಬಾಲ್ಯದಿಂದ ಮಾಡುತ್ತ ಬಂದಿದ್ದಾರೆ. ಎಳೆ ವಯಸ್ಸಿನಿಂದ ಕಷ್ಟಜೀವಿಯಾದ ಅವರಿಗೆ ಈಗ ಕೇಂದ್ರ ಸರ್ಕಾರದಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ‘ಸಂಗೀತ ನಾಟಕ ಅಕಾಡೆಮಿ’ ಪ್ರಶಸ್ತಿಯ ಗರಿ ಲಭಿಸಿದೆ.

ಅವರಿಗೆ ಈಗ 82 ವರ್ಷ ವಯಸ್ಸು. ಹಿಂದೆಯೂ ಅನೇಕ ಪ್ರಶಸ್ತಿಗಳು ಬಂದಿವೆ. ರಾಜ್ಯಮಟ್ಟದ ದೊಡ್ಡ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯದ ಬಹುತೇಕ ಆಕಾಶವಾಣಿ ಕೇಂದ್ರಗಳ ಮೂಲಕ ಅವರ ಕಂಠದಿಂದ ಗಾಯನ ಸುಧೆ ಹರಿದಿದೆ. ಮಾರೆಪ್ಪ ಅವರ ಕಲಾಸಾಧನೆಯ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್‌.ಡಿ. ಮಹಾಪ್ರಬಂಧ ಸಲ್ಲಿಕೆಯಾಗಿದೆ.

ಇಷ್ಟೆಲ್ಲಾ ಆದರೂಮಾರೆಪ್ಪ ಅವರ ’ಅಲೆಮಾರಿ’ ಬದುಕು ಬದಲಾಗಿಲ್ಲ. ಕಲಾ ಕಾರ್ಯಕ್ರಮಗಳಿಗಾಗಿ ಅಲೆದಾಡುವುದು, ‘ನಿಯಮಿತವಾಗಿ ಹಾಡಲು ಅವಕಾಶ ಕೊಡಿ’ ಎಂದು ಸರ್ಕಾರವನ್ನು ಗೋಗೆರೆಯುವುದು ತಪ್ಪಿಲ್ಲ.

ಅಲೆಮಾರಿ ಕುಟುಂಬದ ಮಾರೆಪ್ಪ ಯಲಬುರ್ಗಾದಲ್ಲಿ ಜನತಾ ಮನೆಯಲ್ಲಿ ವಾಸವಾಗಿದ್ದಾರೆ. ಆರು ಜನ ಗಂಡು ಹಾಗೂ ಇಬ್ಬರು ಹೆಣ್ಣಮಕ್ಕಳು ಇರುವ ದೊಡ್ಡ ಕುಟುಂಬದ ಜವಾಬ್ದಾರಿ ನಿಭಾಯಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಹಾಡುವ ಹುಮ್ಮಸ್ಸು ಅವರದ್ದು. ಈಗಲೂ ಸರ್ಕಾರ ಅವಕಾಶ ಕೊಟ್ಟರೆ ‘ಗಂಟೆಗಟ್ಟಲೆ ಹಾಡಬಲ್ಲೆ’ ಎಂದು ಅದಮ್ಯ ವಿಶ್ವಾಸದಿಂದ ಹೇಳುತ್ತಾರೆ.

ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಕೋಲೆಬಸವ, ಪಾರಂಪರಿಕ ತತ್ವಪದಗಳ ಗಾಯನ, ತಂಬೂರಿ ವಾದನ ಅವರ ವೃತ್ತಿಯಾಗಿದೆ. ಲಿಂಗಸಗೂರು ತಾಲ್ಲೂಕಿನ ನೀರಲೂಟಿ ಗ್ರಾಮದ ಅಲೆಮಾರಿ ಸಮಾಜದ ಕಲಾವಿದ ಚೆನ್ನದಾಸರ ರಾಮಣ್ಣ ಮಾಸ್ತರ್‌ ಮತ್ತು ಸಮುದಾಯದ ಹಿರಿಯರಿಂದ ದಾಸರ ಪದಗಳು, ತತ್ವಪದಗಳನ್ನು ಹಾಡಲು ಕಲಿತರು. ತಂಬೂರಿ ಮತ್ತು ಪಿಟೀಲು ವಾದ್ಯ ರೂಢಿಸಿಕೊಂಡರು. ಗದಗ ಜಿಲ್ಲೆಯ ಮುಳಗುಂದ ಹುಟ್ಟೂರಾದರೂ ಕಾಯಕ ಹಾಗೂ ಬದುಕು ಕಟ್ಟಿಕೊಟ್ಟಿದ್ದು ಕೊಪ್ಪಳ ಜಿಲ್ಲೆ.

ಮಾರೆಪ್ಪ ಹಾಗೂ ದುರಗಮ್ಮ ದಂಪತಿಯ ಪುತ್ರ ಮಾರೆಪ್ಪ ಚನ್ನದಾಸರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬಲ್ಲರು. ಕಳೆದ ಮೂರೂವರೆ ದಶಕಗಳಿಂದ ಸರ್ಕಾರ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಧಾರವಾಡ, ಹೊಸಪೇಟೆ ಆಕಾಶವಾಣಿ ಕೇಂದ್ರಗಳು, ದೂರದರ್ಶನದಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಜಿಲ್ಲೆಯ ಪ್ರತಿಭಾನ್ವಿತ ಕಲಾವಿದ ಮಾರೆಪ್ಪ ಅವರು ತಮ್ಮ ಕಂಠದ ಮೂಲಕ ಸಾಕಷ್ಟು ಹೃದಯಗಳನ್ನು ತಟ್ಟಿದ್ದಾರೆ. ಸರ್ಕಾರ ಕೂಡ ಅವರ ಬೇಡಿಕೆಯನ್ನು ಈಡೇರಿಸಿ ಹೃದಯ ಮೆಚ್ಚಿಸುವ ಕೆಲಸ ಮಾಡಬೇಕಾಗಿದೆ.

‘ಜನಪದ ಶ್ರೀ ಪ್ರಶಸ್ತಿಗೆ ಎದುರು ನೋಡುತ್ತಿದ್ದೇನೆ’
ಕೊಪ್ಪಳ:
ಹಿಂದೆ ಅನೇಕ ಪ್ರಶಸ್ತಿಗಳು ಬಂದಿವೆ. ಈಗ ಕೇಂದ್ರದಿಂದ ಗೌರವ ಲಭಿಸಿದೆ. ಆದರೆ, ಒಂದು ದಶಕದಿಂದ ‘ಜನಪದ ಶ್ರೀ‘ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದಾರೆ. ಜನಪದ ಸಾಹಿತ್ಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅದೊಂದು ಪ್ರಶಸ್ತಿ ಬಂದರೆ ನನ್ನ ಇಷ್ಟು ವರ್ಷಗಳ ಕಾಲ ಪಟ್ಟ ಶ್ರಮ ಸಾರ್ಥಕ ಎನಿಸುತ್ತದೆ ಎಂದು ಮಾರೆಪ್ಪ ಚನ್ನದಾಸರ ‘ಪ್ರಜಾವಾಣಿ’ ಎದುರು ಮನದಾಸೆ ವ್ಯಕ್ತಪಡಿಸಿದರು.

‘ಸರ್ಕಾರದ ಜನತಾ ಮನೆಯಲ್ಲಿ ವಾಸವಾಗಿದ್ದೇನೆ. ಬದುಕಿಗಾಗಿ ಇಳಿವಯಸ್ಸಿನಲ್ಲಿಯೂ ಅಲೆದಾಡುವುದು ತಪ್ಪಿಲ್ಲ. ಸರ್ಕಾರ ಒಂದಷ್ಟು ಭೂಮಿ ಕೊಟ್ಟರೆ ಅದನ್ನು ನೆಚ್ಚಿಕೊಂಡು ಜೀವನ ಸಾಗಿಸಬಹುದು. ಈ ಎಲ್ಲಾ ಪ್ರಶಸ್ತಿಯಿಂದ ಹೊಟ್ಟೆ ತುಂಬುತ್ತದೆಯೇ’ ಎಂದು ಪ್ರಶ್ನಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಿಂದೆ ಕಾರ್ಯಕ್ರಮಗಳನ್ನು ನೀಡಲು ಅವಕಾಶ ಸಿಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಅವಕಾಶವೇ ಸಿಕ್ಕಿಲ್ಲ. ಇಲಾಖೆ, ಸಂಘ ಸಂಸ್ಥೆಗಳು ನೀಡುವ ಸಂಭಾವನೆಯಿಂದಲೇ ಹೊಟ್ಟೆ ಹೊರೆಯುತ್ತಿದ್ದೇನೆ’ ಎಂದು ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT