ಬುಧವಾರ, ಜನವರಿ 22, 2020
27 °C
ಜಿಲ್ಲಾ ಮಟ್ಟದ ಆರ್‌ಸೆಟ್‌ಇ ಸಲಹಾ ಸಮಿತಿ ಸಭೆ

ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೇರೇಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆರ್‌ಸೆಟ್‌-ಇ ವತಿಯಿಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಮಾರ್ಗದರ್ಶನ ನೀಡಿ, ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶನಿವಾರ ಎಸ್‌ಬಿಐನ ಗ್ರಾಮೀಣ ಸ್ವಯಂ ಉದ್ಯೋಗದ ತರಬೇತಿ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಆರ್‌ಸೆಟ್‌ಇ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರಬೇತಿ ಸಂಸ್ಥೆಯಿಂದ ವಿವಿಧ ಕೌಶಲಯುಕ್ತ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ ತರಬೇತಿ ನಂತರ ತರಬೇತಿ ಪಡೆದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಆರಂಭಿಸಿದ ಕುರಿತು ದೃಢೀಕರಿಸಿಕೊಳ್ಳಬೇಕು. ಒಂದು ವೇಳೆ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯದ ಅಗತ್ಯವಿದ್ದರೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಪಡೆಯುವ ಕ್ರಮಗಳ ಕುರಿತು ತಿಳಿಸಬೇಕು ಎಂದು ಹೇಳಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯವಿರುವ ಕೌಶಲಗಳು ಅಥವಾ ಉದ್ಯೋಗದ ವಿಧಗಳು ಮಾತ್ರವಲ್ಲದೆ, ಸಂಸ್ಥೆಯಿಂದ ದೇಶದಾದ್ಯಂತ ತರಬೇತಿ ನೀಡಲಾಗುವುದರಿಂದ ಇತರ ರಾಜ್ಯಗಳಲ್ಲಿನ ಸೃಜನಾತ್ಮಕ ಕೌಶಲಗಳ ಕುರಿತು ಅರಿತುಕೊಂಡು ಅವುಗಳನ್ನು ಇಲ್ಲಿನ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಪ್ರಯತ್ನಿಸಿ ಎಂದು ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ಸಂಸ್ಥೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಸ್ಥಳೀಯವಾಗಿ ನಡೆಯುವ ಸಭೆಗಳಲ್ಲಿ ಸಂಸ್ಥೆಯಿಂದ ನೀಡಲಾಗುವ ತರಬೇತಿಗಳ ಕುರಿತು ತಿಳಿವಳಿಕೆ ನೀಡಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ, ಅಂಗವಿಕಲರಿಗೆ ನೀಡಬಹುದಾದ ತರಬೇತಿಗಳ ಕುರಿತು ಪರಿಶೀಲಿಸಿ, ಆ ಕುರಿತು ಕ್ರಮವಹಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಆರ್‌ಸೆಟ್‌ಇ ಕೊಪ್ಪಳದ ನಿರ್ದೇಶಕರಾದ ವಿ.ಎಸ್.ಪಲ್ಲಾಪುರ 2019-2020ನೇ ಸಾಲಿನ ಆರ್ಥಿಕ ವರ್ಷದ ಸಾಧನೆಗಳ ಕುರಿತು ಅಂಕಿ-ಅಂಶಗಳ ಹಾಗೂ ಪ್ರಗತಿ ಮಾಹಿತಿ ನೀಡಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬುರಾವ್ ಬೋರಲೆ, ಕೆವಿಐಬಿಯ ವೀರೇಶ, ಜವಳಿ ಮತ್ತು ಕೈಮಗ್ಗ ಇಲಾಖೆಯ ವಸಂತ ಕೆ, ಪಾಲಿಟೆಕ್ನಿಕ್ ಕಾಲೇಜಿನ ವಾದಿರಾಜ, ಬಿಎಐಎಫ್ ಸಂಸ್ಥೆಯ ಎಂ.ಡಿ.ಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು