ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ‘ಚಂದ್ರ ಚುಂಬನ’ಕ್ಕೆ ಸಂಭ್ರಮದ ಪುಳಕ

Published 23 ಆಗಸ್ಟ್ 2023, 16:22 IST
Last Updated 23 ಆಗಸ್ಟ್ 2023, 16:22 IST
ಅಕ್ಷರ ಗಾತ್ರ

ಕೊಪ್ಪಳ: ಸಾಕಷ್ಟು ನಿರೀಕ್ಷೆ, ಕುತೂಹಲದಿಂದ ಜಿಲ್ಲೆಯ ಜನ ಚಂದ್ರನ ಅಂಗಳಕ್ಕೆ ‘ವಿಕ್ರಮ್‌’ (ಲ್ಯಾಂಡರ್‌) ಕಾಲಿಡುವ ಅಮೃತ ಗಳಿಗೆಯನ್ನು ಎದುರು ನೋಡುತ್ತಿದ್ದರು. ಬುಧವಾರ ಸಂಜೆ ಸರಿಯಾಗಿ 6.04 ನಿಮಿಷಕ್ಕೆ ಚಂದ್ರನ ಮೇಲೆ ಭಾರತದ ವಿಜ್ಞಾನಿಗಳು ‘ವಿಕ್ರಮ’ ಸಾಧಿಸುತ್ತಿದ್ದಂತೆಯೇ ಇಲ್ಲಿನ ಜನರಲ್ಲಿ ಸಂಭ್ರಮ ಮನೆ ಮಾಡಿತು.

ಈ ಸುದ್ದಿ ಕೋಲ್ಮಿಂಚಿನಿಂದ ಹರಿದಾಡಿದಾಗ ಕ್ಷಣಾರ್ಧದಲ್ಲಿಯೇ ಜಿಲ್ಲೆಯ ಸಾಕಷ್ಟು ಜನರ ವ್ಯಾಟ್ಸ್‌ ಆ್ಯಪ್‌ ಡಿ.ಪಿಗಳು ಬದಲಾದವು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದರು. ಅನೇಕರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡು ವಿಜ್ಞಾನ ಕ್ಷೇತ್ರದ ಗೆಲುವಿನ ಸಡಗರದಲ್ಲಿ ತೇಲಾಡಿದರು.

ನಿಜವಾಯಿತು ಹಾರೈಕೆ

ಚಂದ್ರನ ಮೇಲೆ ಕಾಲಿಡುವ ಗಳಿಗೆ ಮೊದಲೇ ನಿಗದಿಯಾಗಿದ್ದರಿಂದ ಇಲ್ಲಿನ ಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಯಶಸ್ವಿಗಾಗಿ ಹಾರೈಸಿದ್ದರು. 

ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ‘ಭಾರತದ ಹೆಮ್ಮೆಯ ಸಂಸ್ಥೆ ಇಸ್ರೊದ ಪ್ರತಿಭಾವಂತ ವಿಜ್ಞಾನಿಗಳು ಕೈಗೊಂಡ ಚಂದ್ರಯಾನ-3 ದೊಡ್ಡ ಮೈಲುಗಲ್ಲು’ ಎಂದರು. ವಿದ್ಯಾರ್ಥಿಗಳು ಚಂದ್ರಯಾನ-3 ಯಶಸ್ವಿಗೆ ಘೋಷಣೆ ಕೂಗಿ ದೇವರಲ್ಲಿ ಪ್ರಾರ್ಥಿಸಿದ್ದರು. ಅದಕ್ಕೆ ಕೆಲವು ಗಂಟೆಯಲ್ಲಿಯೇ ಫಲವೂ ಲಭಿಸಿತು.

ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಅಲ್ಲಿನ ಸಿಬ್ಬಂದಿ ಚಂದ್ರಯಾನದ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ವಿವಿಧ ಶಾಲೆಗಳು, ಸಂಘ ಸಂಸ್ಥೆಗಳು, ಅನೇಕ ಜನ ಕುತೂಹಲವನ್ನು ತಣಿಸಿಕೊಳ್ಳಲು ಟಿ.ವಿ. ಹಾಗೂ ಮೊಬೈಲ್‌ ಮುಂದೆಯೇ ಕುಳಿತ ’ಚಂದ್ರಚುಂಬನ’ದ ಸಂಭ್ರಮದ ಗಳಿಗೆಗೆ ಸಾಕ್ಷಿಯಾದರು.

ಕೊಪ್ಪಳದ ಸಿ.ಪಿ.ಎಸ್.ಶಾಲೆಯಲ್ಲಿ ಚಂದ್ರಯಾನ ಯಶಸ್ಸಿಗೆ ಪೂಜೆ ಸಲ್ಲಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ಗುಲಾಮ ಹುಸೇನ, ಬೀರಪ್ಪ ಅಂಡಗಿ, ಅಬೀದ್‌ ಹುಸೇನ್‌ ಅತ್ತಾರ, ಕಾಶಿನಾಥ ಸಿರಿಗೇರಿ, ಮಲ್ಲಿಕಾರ್ಜುನ ಹ್ಯಾಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಮತ್ತು ಇಲ್ಲಿನ ಅಶೋಕ ವೃತ್ತದಲ್ಲಿ ಜಯಘೋಷಣೆಗಳನ್ನು ಮೊಳಗಿಸಿದರು.

ಆಗದ ವ್ಯವಸ್ಥೆ

ಜಿಲ್ಲಾ ಕೇಂದ್ರದಲ್ಲಿ ವಿಜ್ಞಾನ ಭವನವನ್ನು ಇತ್ತೀಚೆಗೆ ನಿರ್ಮಾಣ ಮಾಡಲಾಗಿದ್ದು, ವಿಜ್ಞಾನ ಚಟುವಟಿಕೆಗೆ ಸಂಬಂಧಿಸಿದ ಪರಿಕರಗಳನ್ನೂ ತರಲಾಗಿದೆ. ಆದರೆ, ಅಲ್ಲಿ ವಿಕ್ರಮ್‌ ಚಂದ್ರನ ಅಂಗಳಕ್ಕೆ ಕಾಲಿಡುವ ಅಪೂರ್ವ ಕ್ಷಣವನ್ನು ವೀಕ್ಷಿಸುವ ವ್ಯವಸ್ಥೆ ಮಾಡಿರಲಿಲ್ಲ. ಅಲ್ಲಿಯೇ ವ್ಯವಸ್ಥೆ ಮಾಡಿ, ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದರೆ ಅವರಿಗೆ ಈ ಕ್ಷೇತ್ರದ ಕುರಿತು ಹೊಸ ಅನುಭವ ಲಭಿಸುತ್ತಿತ್ತು ಎಂದು ಸಾರ್ವಜನಿಕರು, ವಿಜ್ಞಾನ ಶಿಕ್ಷಕರು ಹೇಳಿದರು.

ಚಂದ್ರನೊಂದಿಗೆ ಮೊದಲಿನಂದಲೂ ನಂಟು

ಭಾರತೀಯ ಸಂಪ್ರದಾಯದಲ್ಲಿ ಅನೇಕ ಪುರಾಣ ಕಾವ್ಯ ಮಹಾಕಾವ್ಯಗಳಲ್ಲಿ ಚಂದ್ರನನ್ನು ಕುರಿತು ವರ್ಣಿಸಲಾಗಿದೆ. ಹಿಂದೂ ದೇವತೆಗಳ ಶಿರದ ಮೇಲೆ ಚಂದ್ರನ ಪ್ರತಿಷ್ಠಾಪನೆ ಇದೆ. ಮಕ್ಕಳು ಚಂದ್ರನನ್ನು ಚಂದಮಾಮ ಎಂತಲೂ ಸಹ ಕರೆಯುತ್ತಾರೆ. ಬಯಲಾಟ ದೊಡ್ಡಾಟ ಸಣ್ಣಾಟ ಯಕ್ಷಗಾನ ಮುಂತಾದ ಕಲಾಪ್ರಕಾರಗಳಲ್ಲಿ ಹಿಂದೂ ದೇವತೆಗಳ ಶಿರದ ಮೇಲೆ ಚಂದ್ರನನ್ನು ಪ್ರತಿಷ್ಠಾಪಿಸಿ ತಮ್ಮ ಕಲಾಪ್ರಕಾರ ಮೆರೆಯುತ್ತಿದ್ದಾರೆ. ಪ್ರಾಚೀನ ಕಾಲದಲ್ಲಿನ ಬಹುತೇಕ ಶಾಸನಗಳ ಮೇಲೆ ಚಂದ್ರನ ಬಿಂಬವನ್ನು ಕಾಣಬಹುದಾಗಿದೆ. ಹೀಗಾಗಿ ಪ್ರಾಚೀನ ಕಾಲದಿಂದಲೂ ಅಷ್ಟೇ ಅಲ್ಲ ಪುರಾಣ ಕಾಲದಿಂದಲೂ ಚಂದ್ರ ಮತ್ತು ಭಾರತೀಯರ ಸಂಬಂಧ ಬಹು ಪುರಾತನವಾಗಿದೆ. ಈಗ ಅಲ್ಲಿಯೇ ನಾವು ವಿಕ್ರಮ ಸಾಧಿಸಿದ್ದು ಹೆಮ್ಮೆಯ ವಿಷಯ. ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಕನ್ನಡ ಉಪನ್ಯಾಸಕರು ಗವಿಸಿದ್ಧೇಶ್ವರ ಕಾಲೇಜು ಕೊಪ್ಪಳ

ಹೊಸ ವಿಕ್ರಮ ಶಕೆ ಪ್ರಾರಂಭ

ಒಂದು ರಾಷ್ಟ್ರಕ್ಕೆ ಸಕಲ ಐಶ್ವರ್ಯಗಳಿದ್ದರೂ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಂದ ಅಭಿವೃದ್ಧಿಯಲ್ಲಿ ಮಂದಗತಿಯಲ್ಲಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಅಶಕ್ತಗಳನ್ನು ಕಡಿಮೆ ಮಾಡುತ್ತಾ ಶಕ್ತಗಳನ್ನು ಮೈಗೂಡಿಸಿಕೊಂಡು ನಿಧಾನವಾಗಿ ಜಗದಲ್ಲಿ ತೆರೆಯತ್ತಿರುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಒಂದು ಚಂದ್ರಯಾನ ಭಾರತದ ಭವಿಷ್ಯವನ್ನು ಬದಲಾಯಿಸಬಹುದಾ? ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಗಲಿಕ್ಕಿಲ್ಲ. ಮುಂಬರುವ ದಿನಗಳಲ್ಲಿ ಖಂಡಿತವಾಗಿ ಉತ್ತರ ಸಿಕ್ಕೇ ಸಿಗುತ್ತದೆ. ಯುರೋಪ್ ಖಂಡದ ಸಂಕ್ರಮಣದ ಸಂದರ್ಭದಲ್ಲಿ ಇಂತಹ ಸಣ್ಣ ಸಣ್ಣ ಸಾಧನೆಗಳು ಖಂಡದ ಬಹುತೇಕ ದೊಡ್ಡ ಸಾಧನೆಗಳಿಗೆ ಪ್ರೇರಣೆಯಾದವು. ಚಂದ್ರಯಾನ ಯಶಸ್ಸಿನ ನಂತರ ಚಂದ್ರಯಾನಕ್ಕೆ ಸಂಬಂಧಿಸಿದ ಮಾರುಕಟ್ಟೆಯ ಅವಕಾಶಗಳು ಭಾರತಕ್ಕೆ ಲಭಿಸುತ್ತವೆ. ಈ ಕಾರಣದಿಂದಲೇ ಈಗ ನಾವೆಲ್ಲರೂ ಭಾರತದ  ಸಾಧನೆ ದೊಡ್ಡದಾಗಿ ಸಂಭ್ರಮಿಸಬೇಕಾಗಿದೆ. ಶರಣಬಸಪ್ಪ ಚ ಬಿಳೆಯಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು ಗವಿಸಿದ್ಧೇಶ್ವರ ಕಾಲೇಜು ಕೊಪ್ಪಳ

ವಿಕ್ರಮ್ ಸಾರಾಭಾಯಿ ಅವರ ಕನಸು ನನಸಾಗಿದೆ

2022ರ ಡಿಸೆಂಬರ್‌ 19ರಂದು ಯು.ಆರ್.ರಾವ್ ಉಪಗ್ರಹ ಕೇಂದ್ರದ ಕನ್ನಡ ತಾಂತ್ರಿಕ ಕಮ್ಮಟಕ್ಕೆ ನಮ್ಮ ಶಾಲೆಯ ಮೂವರು ವಿದ್ಯಾರ್ಥಿಗಳು ಮತ್ತು ವಿಜ್ಞಾನ ಶಿಕ್ಷಕರಿಗೆ ಇಸ್ರೊ ಆಮಂತ್ರಣ ನೀಡಿತ್ತು. ಇಡೀ ದಿನ ಅಲ್ಲಿನ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳ ಪ್ರಸೆಂಟೇಶನ್ ಮತ್ತು ಸಂವಾದದಲ್ಲಿ ಭಾಗಿಯಾಗಿದ್ದೆವು. ಮರುದಿನ ಇಸ್ರೊದ ವಿಭಾಗಗಳ ಪರಿಚಯ ಮತ್ತು ಉಪಗ್ರಹ ತಯಾರಿಕೆ ಜೋಡಿಸುವಿಕೆ ಬಗ್ಗೆ ತೋರಿಸಿದ್ದರು. ಅದೇ ಸಂದರ್ಭದಲ್ಲಿ ಚಂದ್ರಯಾನ -3ರ ಅಂತಿಮ ತಯಾರಿಗಳು ಭರದಿಂದ ಸಾಗಿದ್ದವು. ವಿಜ್ಞಾನಿಗಳು ಕೈಗೊಂಡಿದ್ದ ಅತ್ಯಂತ ಸೂಕ್ಷ್ಮ ಪರೀಕ್ಷೆಗಳನ್ನು ಕಣ್ಣಾರೆ ನೋಡಿ ನಮ್ಮ ಮಕ್ಕಳು ಪುಳಕಿತರಾಗಿದ್ದರು. ಈಗ ಚಂದ್ರನ ಅಂಗಳದಲ್ಲಿ ಕಾಲೂರುವ ಮೂಲಕ ವಿಕ್ರಮ್ ಲ್ಯಾಂಡರ್ ಐತಿಹಾಸಿಕ ದಾಖಲೆ ಬರೆದಿದೆ. ನಿಜಕ್ಕೂ ಅಚ್ಚರಿಯಾಗಿದ್ದು ಭಾರತದ ಬಾಹ್ಯಾಕಾಶ ವಿಜ್ಞಾನಕ್ಕೆ ಮತ್ತೊಂದು ಜಯ ಲಭಿಸಿದೆ. ವಿಕ್ರಮ್ ಸಾರಾಭಾಯಿ ಅವರ ಕನಸು ನನಸಾಗಿದೆ. ದೇವೇಂದ್ರ ಜಿರ್ಲಿ ವಿಜ್ಞಾನ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ತಾಳಕೇರಿ

ಚಂದ್ರನ ಅಂಗಳಕ್ಕೆ ವಿಕ್ರಮ್ ಕಾಲಿಟ್ಟ ಬಳಿಕ ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಚಂದ್ರನ ಅಂಗಳಕ್ಕೆ ವಿಕ್ರಮ್ ಕಾಲಿಟ್ಟ ಬಳಿಕ ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಕನಕಗಿಯಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆನಂದ ಭತ್ತದ ಹೊಳಿಯಪ್ಪ ಮಲ್ಲಯ್ಯ ಸ್ವಾಮಿ ಬೆನಕನಾಳ ಸಂಗಮೇಶ ವಟಗಲ್ ಸಂಗಮೇಶ ಬಸಾಪಟ್ಟಣ ಶ್ರೀನಿವಾಸ ಬೋಂದಾಡೆ ಕಿರಣಕುಮಾರ ಹಳ್ಳಿಕೇರಿ ಗುರುಮೂರ್ತಿ ಬಡಿಗೇರ ವೀರೇಶ ಹಾದಿಮನಿ ಜನಾದ್ರಿ ವೀರಭದ್ರಪ್ಪ ಕೋರಿ ಗುರುರಾಜ ಹಿರೇಖೇಡ ಪ್ರದೀಪ ನಿಂಗಪ್ಪ ನಬೀಸಾಬ್ ಸೇರಿದಂತೆ ಇತರರು ಇದ್ದರು
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಕನಕಗಿಯಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆನಂದ ಭತ್ತದ ಹೊಳಿಯಪ್ಪ ಮಲ್ಲಯ್ಯ ಸ್ವಾಮಿ ಬೆನಕನಾಳ ಸಂಗಮೇಶ ವಟಗಲ್ ಸಂಗಮೇಶ ಬಸಾಪಟ್ಟಣ ಶ್ರೀನಿವಾಸ ಬೋಂದಾಡೆ ಕಿರಣಕುಮಾರ ಹಳ್ಳಿಕೇರಿ ಗುರುಮೂರ್ತಿ ಬಡಿಗೇರ ವೀರೇಶ ಹಾದಿಮನಿ ಜನಾದ್ರಿ ವೀರಭದ್ರಪ್ಪ ಕೋರಿ ಗುರುರಾಜ ಹಿರೇಖೇಡ ಪ್ರದೀಪ ನಿಂಗಪ್ಪ ನಬೀಸಾಬ್ ಸೇರಿದಂತೆ ಇತರರು ಇದ್ದರು
ಇಸ್ರೋದ ಚಂದ್ರಯಾನ–3 ಯಶಸ್ವಿಯಾದ ಹಿನ್ನೆಲೆ ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಯುವಕರು ಮಕ್ಕಳು ಹಾಗೂ ಗ್ರಾಮಸ್ಥರು ಬುಧವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು
ಇಸ್ರೋದ ಚಂದ್ರಯಾನ–3 ಯಶಸ್ವಿಯಾದ ಹಿನ್ನೆಲೆ ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಯುವಕರು ಮಕ್ಕಳು ಹಾಗೂ ಗ್ರಾಮಸ್ಥರು ಬುಧವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT