ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿದೂತನ ಸ್ಮರಣೆ

ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ಬೇಕರಿಗಳಲ್ಲಿ ಕೇಕ್‌ ವಹಿವಾಟು ಜೋರು
Last Updated 26 ಡಿಸೆಂಬರ್ 2021, 2:51 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಶಾಂತಿದೂತ ಏಸು ಕ್ರಿಸ್ತನ ಜನ್ಮ ದಿನದ ಸಂಕೇತವಾದ ಕ್ರಿಸ್‌ಮಸ್‌ ಹಬ್ಬವನ್ನು ಶನಿವಾರ ಸಡಗರದಿಂದ ಆಚರಿಸಿದರು.

ಕುಟುಂಬ ಸದಸ್ಯರೊಂದಿಗೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ಯೇಸು ಕ್ರಿಸ್ತನ ಶಿಲುಬೆ ಹಾಗೂ ಸಂತ ಮೇರಿಯಮ್ಮನ ಮೂರ್ತಿ ಮುಂದೆ ನಿಂತು ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯ
ಪ್ರಾರ್ಥನೆ ನಡೆಯಿತು. ಕೆಲ ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿಯೇ ಪ್ರಾರ್ಥನೆ ಸಲ್ಲಿಸಲಾಯಿತು.

ಮನೆ ಮತ್ತು ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ ಹಬ್ಬ ಆಚರಿಸಿದರು. ಅಲ್ಲದೇ, ಯೇಸು ಕ್ರಿಸ್ತರ ಜನನ ವೃತ್ತಾಂತ ಸಂಕೇತಿಸುವ ಗೋದಲಿ ನಿರ್ಮಿಸಿದ್ದರು. ಮನೆಗಳನ್ನು ನಕ್ಷತ್ರಾಕೃತಿಯ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು.

ಜಿಲ್ಲಾ ಕೇಂದ್ರದ ಪ್ರಮುಖ ಚರ್ಚ್‌ ಗಳಾದಸೇಂಟ್ ಪ್ರಾನ್ಸಿಸ್‌ ಡೀಸೇಲ್ಸ್‌ ಚರ್ಚ್‌ ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಅಲಂಕಾರಿಕ ಕ್ರಿಸ್‌ಮಸ್‌ ಟ್ರೀಗಳು ಚರ್ಚ್‌ನ ಸೌಂದರ್ಯ ಇಮ್ಮಡಿಗೊಳಿಸಿ ದವು. ಚರ್ಚ್‌ ಆವರಣದಲ್ಲಿ ರೂಪಿಸಿದ್ದ ಗೋದಲಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಫಾದರ್ ಸೆಲ್ವದೋರ್‌ ಫರ್ನಾಂಡಿಸ್ ಧರ್ಮ ಸಂದೇಶ ನೀಡಿದರು.

ಇವ್ಯಾಂಜಿಕಲ್‌ ಚರ್ಚ್‌ ನಲ್ಲಿಪ್ರಾರ್ಥನೆ ನಡೆ ಯಿತು. ಪ್ರೊಟೆಸ್ಟ್‌ಂಟ್ ಮತ್ತು ಮ್ಯಾಥೋಡಿ ಯಸ್ಟ್‌ ಪಂಗಡಗಳ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಬಹುತೇಕ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರಾರ್ಥನೆ ನಡೆಯಿತು. ಬೈಬಲ್‌ ಪಠಿಸಲಾಯಿತು. ಸಾಂಟಾ ಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಕೇಕ್‌ ಮತ್ತು ಚಾಕೋಲೆಟ್‌ ಉಡುಗೊರೆಯಾಗಿ ನೀಡಿದರು. ಅನ್ಯ ಧರ್ಮೀಯರು ಚರ್ಚ್‌ಗಳಿಗೆ ಆಗಮಿಸಿ ಹಬ್ಬದ ಸಂಭ್ರಮ ಕಣ್ತುಂಬಿಕೊಂಡರು.

ಹಬ್ಬದೂಟದ ಘಮಲು: ಬೇಕರಿಗಳಲ್ಲಿ ಹಬ್ಬಕ್ಕಾಗಿಯೇ ವಿವಿಧ ಕೇಕ್‌ ಸಿದ್ಧಪಡಿಸಲಾಗಿತ್ತು. ಬೇಕರಿಗಳಲ್ಲಿ ಕೇಕ್‌ ವಹಿವಾಟು ಜೋರಾಗಿತ್ತು. ಮಹಿಳೆಯರು ಮನೆಗಳಲ್ಲಿ ವಿಶೇಷ ಭಕ್ಷ್ಯ ಸಿದ್ಧಪಡಿಸಿದ್ದರು.

ಮನೆಗಳಲ್ಲಿ ಬಿರಿಯಾನಿ, ಕಬಾಬ್‌ ಘಮಲು ಹರಡಿತ್ತು. ಮನೆ ಮಂದಿಯೆಲ್ಲಾ ಹಬ್ಬದೂಟ ಸವಿದು ಸಂಭ್ರಮಿಸಿದರು. ಜತೆಗೆ ಸ್ನೇಹಿತರು, ಸಂಬಂಧಿಕರು ಹಾಗೂ ನೆರೆ ಹೊರೆಯವರಿಗೆ ಹಬ್ಬದ ಆತಿಥ್ಯ ನೀಡಿದರು.

ಮುನಿರಾಬಾದ್, ಗಂಗಾವತಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತರು ಇದ್ದು, ಅಲ್ಲಿಯೂ ಹಬ್ಬಕ್ಕಾಗಿ ವಿಶೇಷ ತಯಾರಿ, ಪ್ರಾರ್ಥನೆ ನಡೆಯಿತು.

ಬಡವರಿಗೆ ವಸ್ತ್ರದಾನ, ಪ್ರಸಾದ ವಿತರಣೆ ಮಾಡಲಾಯಿತು.

‘ಯೇಸುವಿನ ಸಂದೇಶ ಎಂದೆಂದಿಗೂ ಪ್ರಸ್ತುತ’

ಕುಷ್ಟಗಿ: ಮನುಕುಲಕ್ಕೆ ಶಾಂತಿಯನ್ನು ಬೋಧಿಸಿದ ಯೇಸುವಿನ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಪಟ್ಟಣದ ಆತ್ಮಭರಿತ ಸಾರ್ವತ್ರಿಕ ಎಜಿ ಸಭೆಯಲ್ಲಿ ನಡೆದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಕೇಕ್‌ ಕತ್ತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ದ್ವೇಷ, ಅಸೂಯೆ ಮರೆತು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚನೆಗಳನ್ನು ಬದಲಾಯಿಸಿ, ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗೆ ಕಾರಣರಾಗಬೇಕು. ಯೇಸುವಿನ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶರಣರು, ಸಾಧು, ಸಂತರು, ದಾಸರು ಮನುಕುಲದ ಏಳಿಗೆಗಾಗಿ ತಮ್ಮ ಬದುಕನ್ನೇ ಸವೆಸಿದ್ದಾರೆ. ಅವರ ಸ್ಮರಣೆ ಮಾಡಬೇಕು ಎಂದರು.
ತಹಶೀಲ್ದಾರ್ ಎಂ.ಸಿದ್ದೇಶ್‌ ಮಾತನಾಡಿ, ಅನ್ಯರು ಅವರಿಗೆ ನೀಡಿದ್ದ ಕಷ್ಟಗಳನ್ನು ಸಹಿಸಿಕೊಂಡ ಯೇಸು, ಅವರನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದರು. ಅವರೊಬ್ಬ ಶಾಂತಿದೂತ ಎನ್ನುವದರಲ್ಲಿ ಎರಡು ಮಾತಿಲ್ಲ. ಜಾತಿ, ಮತ ವೈಷಮ್ಯ ಮರೆತು ಎಲ್ಲರೂ ಶಾಂತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಸಭೆಯ ಸಭಾ ಪಾಲಕ ಎಸ್‌.ಕೆ.ಜೋಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿ.ಬಾಬ್ಜಿ, ಕೇಶವರಾವ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅಗ್ನಿಶಾಮಕ ಠಾಣೆ ಅಧಿಕಾರಿ ರಾಜು ನರಸಪ್ಪ, ಹಾಲು ಒಕ್ಕೂಟದ ಬಸವರಾಜ ಯರದೊಡ್ಡಿ, ಹಂಪಯ್ಯ ಬಕ್ಸದ, ಸತ್ಯನಾರಾಯಣ ಗುನ್ನಾಳ, ಶರಣಪ್ಪ ಜಕ್ಕಲಿ, ಎರಿಸ್ವಾಮಿ, ಇಸ್ರಾಯೇಲ್‌ ಇದ್ದರು.
ತಾಲ್ಲೂಕಿನ ವಿವಿಧೆಡೆ ಕ್ರಿಸ್‌ಮಸ್‌ ಮಹೋತ್ಸವವನ್ನು ಶ್ರದ್ಧೆ, ಭಕ್ತಿಯಿಂದ ಸಂಭ್ರಮವಾಗಿ ಆಚರಿಸಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT