ಗುರುವಾರ , ಜನವರಿ 27, 2022
21 °C

ದೂಳು ಮುಕ್ತ ಕೊಪ್ಪಳ ನನಸಾಗದ ಕನಸು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಗರದಲ್ಲಿ ಹಾದು ಹೋಗಿರುವ 7 ಕಿ.ಮೀ. ಉದ್ದದ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಸೇರಿ ನಗರದ ಪ್ರಮುಖ ರಸ್ತೆಗಳು ಸರಿಯಾದ ನಿರ್ವಹಣೆ ಇಲ್ಲದೇ ಸಂಪೂರ್ಣ ದೂಳುಮಯವಾಗಿ, ವಾತಾವರಣ ಕಲುಷಿತಗೊಳಿಸಿವೆ.

ಧೂಳು ಕುರಿತು ಈಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯ ವಿಷಯವಾಗಿತ್ತು. ಸುಂದರ ನಗರದ ಪರಿಕಲ್ಪನೆಗೆ ದೂಳೇ ಅಡ್ಡಿಯಾಗಿದ್ದು, ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ಸಿಬ್ಬಂದಿ ಮೇಲೆ ಅಪಸ್ವರ ವ್ಯಕ್ತವಾಯಿತು.

ನಗರದ ಪ್ರಮುಖ ರಸ್ತೆಗಳು ಈಚೆಗೆ ಮಳೆಯಿಂದ ರಾಡಿ ಸುರಿದು ಅವು ಒಣಗಿದ ಮೇಲೆ ದೂಳಿನ ಕಣಗಳಾಗಿ ಮಾರ್ಪಾಡಾಗಿವೆ. ರಸ್ತೆ ವಿಭಜಕಗಳಲ್ಲಿಯೇ ಹೊಲಸು, ಗಿಡ, ಗಂಟಿ ಬೆಳೆದು ಅದರ ಪಕ್ಕದಲ್ಲಿ ಮಣ್ಣಿನ ರಾಶಿಯೇ ಬಿದ್ದಿದೆ. ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ನಗರಸಭೆ ಹೋಗಿಲ್ಲ.

ಪಾದಚಾರಿ ರಸ್ತೆಗಳ ಅತಿಕ್ರಮಣ ಒಂದೆಡೆಯಾದರೆ ಅಂಗಡಿ ಮುಂದೆ ವಾಹನಗಳು ನಿಲ್ಲುವ ಸ್ಥಳಗಳು ದೂಳು ಸಂಗ್ರಹ ಕೇಂದ್ರಗಳಾಗಿವೆ. ರಸ್ತೆಗಳನ್ನು ಸ್ವಚ್ಛಗೊಳಿಸುವ ಯಾವುದೇ ಪರಿಪಾಠ ನಗರಸಭೆ ಅಧಿಕಾರಿ ವರ್ಗಕ್ಕೆ ಇಲ್ಲ. ನಗರಸಭೆ ನೈರ್ಮಲ್ಯ ಅಧಿಕಾರಿ ಈ ಕುರಿತು ಯಾವುದೇ ಪರಿಶೀಲನೆ ಕೂಡಾ ಮಾಡದೇ ಕಡತಗಳ ವಿಲೇವಾರಿಯಲ್ಲಿ ಮಾತ್ರ ನಿರತರಾಗಿದ್ದಾರೆ.

ಮೊದಲೇ ಕೊಪ್ಪಳ ನಗರ ಕ್ಷಯರೋಗದ ಅಪಾಯದಲ್ಲಿ ಇದ್ದು, ಇದಕ್ಕೆ ಮುಖ್ಯ ಕಾರಣವೇ ದೂಳು ಆಗಿದೆ. ಅನೇಕ ರೋಗಗಳ ಉತ್ಪತ್ತಿಗೆ ಕೂಡಾ ಕಾರಣವಾಗಿದೆ. 1 ಲಕ್ಷದ ಆಸುಪಾಸಿನಲ್ಲಿ ಇರುವ ಕೊಪ್ಪಳ-ಭಾಗ್ಯನಗರದ ಜನಸಂಖ್ಯೆಗೆ ಸ್ವಚ್ಛತೆ ಎಂಬುವುದು ಮರೀಚಿಕೆಯಾಗಿದೆ. 

ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಕ್ರಿಮಿನಾಶಕ ಸಿಂಪಡಣೆ, ದೂಳು ತೆಗೆಯುವ ಯಾವ ಕಾರ್ಯವನ್ನು ಮಾಡುತ್ತಿಲ್ಲ. ಕೊಪ್ಪಳ ನಗರಸಭೆಯ 31 ವಾರ್ಡ್‌ ಮತ್ತು ಭಾಗ್ಯನಗರದ 19 ವಾರ್ಡ್‌ಗಳು ಧೂಳುಮಯವಾಗಿವೆ. ಕಸವಿಲೇವಾರಿ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಬಿಟ್ಟರೆ, ಉಳಿದ ಸ್ವಚ್ಛತಾ ಕಾರ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಆಕ್ರೋಶ, ಅಸಮಾಧಾನ ಹೊರಹಾಕುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.

ದೂಳು ಮುಕ್ತ ಕೊಪ್ಪಳ ಕನಸು: ನಗರ ದೂಳು ಮುಕ್ತ ಮಾಡುವುದು ಪ್ರತಿ ಚುನಾವಣೆ ಭರವಸೆ ಕೂಡಾ ಆಗಿದೆ. ಆದರೆ ಗೆದ್ದ ನಂತರ ಅದನ್ನು ಸಾಕಾರಗೊಳಿಸಬೇಕಾದ ಇಚ್ಛಾಶಕ್ತಿ ಕೂಡಾ ಇಲ್ಲಿನ ಜನಪ್ರತಿನಿಧಿಗಳಿಗೆ ಇಲ್ಲದೇ ಇರುವುದು ವಿಪರ್ಯಾಸ. 

ಕೊಪ್ಪಳ ನಗರದ ಸುತ್ತಮುತ್ತ, ಬಗನಾಳ, ಗಿಣಗೇರಾ ಸೇರಿದಂತೆ ವಿವಿಧೆಡೆ 100ಕ್ಕೂ ಹೆಚ್ಚು ಬೃಹತ್ ಕಾರ್ಖಾನೆಗಳು, ಕೋಳಿ ಫೌಲ್ಟ್ರಿಗಳು, ಬೃಹತ್ ಕಟ್ಟಡ ಕಾಮಗಾರಿಯ ಸಾಮಗ್ರಿ ಎಲ್ಲೆಡೆ ಬಿದ್ದಿರುತ್ತವೆ. ಇವುಗಳಿಂದ ಉಂಟಾಗುವ ಧೂಳು, ಗಲೀಜುಗಳನ್ನು ನಿಯಂತ್ರಿಸುವ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಇದರಿಂದ ಜನ, ಜೀವನಕ್ಕೆ ಅಷ್ಟೇ ತೊಂದರೆಯಲ್ಲದೆ ಬೆಳೆದ ಬೆಳೆಗಳ ಮೇಲೆ ಹುಡಿ ತುಂಬಿ ತೊಂದರೆಯಾಗುತ್ತಿವೆ. ಇದರಿಂದ ಇಳುವರಿ ಕುಂಠಿತಗೊಂಡು, ಬೆಳೆಗಳು ಹಾಳಾಗುತ್ತಿವೆ.

ನಗರದ ಮಾರುಕಟ್ಟೆ ಪ್ರದೇಶ, ಗಂಜ್ ರಸ್ತೆ, ಕುಷ್ಟಗಿ, ಕಿನ್ನಾಳ ರಸ್ತೆ ಸಂಪೂರ್ಣಧೂಳು ಮಯವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿಯೂ ವ್ಯಾಪಕ ಧೂಳು ಏಳುತ್ತಿದೆ. ಇದರಿಂದ ನಗರದಲ್ಲಿ ಸ್ವಚ್ಛ ವಾತಾವರಣವಿಲ್ಲದೆ ಪರದಾಡುವ ಸ್ಥಿತಿ ನಾಗರಿಕರಿಗೆ ನಿರ್ಮಾಣವಾಗಿದೆ.

ಗವಿಸಿದ್ಧೇಶ್ವರ ಜಾತ್ರೆ ಸಧ್ಯದಲ್ಲಿಯೇ ಜರುಗುತ್ತಲಿದ್ದು, ಗವಿಮಠದ ಜಾತ್ರೆ ಪರಿಸರ ಸ್ನೇಹಿ ಜಾತ್ರೆ ಎಂದು ನಾಡಿನಾದ್ಯಂತ ಜನಪ್ರಿಯಗೊಂಡಿದೆ. ಶ್ರೀಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸ್ವಚ್ಛತೆ ಕೆಲಸಕ್ಕೆ ನಗರಸಭೆ ಮುಂದಾಗಬೇಕು ಎಂಬುವುದು ಸಾರ್ವಜನಿಕರ ಕಳಕಳಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.