ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಅಭಿವೃದ್ಧಿ: ಮುಖ್ಯಮಂತ್ರಿ ಬೊಮ್ಮಾಯಿ

Last Updated 1 ಆಗಸ್ಟ್ 2022, 9:02 IST
ಅಕ್ಷರ ಗಾತ್ರ

ಅಂಜನಾದ್ರಿ: ಆಂಜನೇಯ ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಎಂದು ಸಾವಿರ ಬಾರಿ ಹೇಳುವೆ. ಈ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತಕ್ಕೆ ಸೋಮವಾರ ಭೇಟಿ ನೀಡುವ ಮೊದಲು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಂಜನಾದ್ರಿ ಕ್ಷೇತ್ರವು ಐತಿಹಾಸಿಕವಾಗಿ ಕಿಷ್ಕಿಂಧದಲ್ಲಿ ಇರುವುದರಿಂದ ಹನುಮ ಜನ್ಮಸ್ಥಳ ಅಂಜನಾದ್ರಿಯೇ ಆಗಿದೆ. ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿವಾದ ಹಾಗೂ ಚರ್ಚೆಗೆ ಅವಕಾಶವೇ ಇಲ್ಲ. ನಮ್ಮ ನಂಬಿಕೆಯೇ ಘೋಷಣೆ. ಭಾರತದ ಜನ ಕೂಡ ಆಂಜನಾದ್ರಿ ಕ್ಷೇತ್ರವೇ ಆಂಜನೇಯನ ಜನ್ಮಸ್ಥಳ ಎಂದು ನಂಬಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಿತ್ಯ ಸಾವಿರಾರು ಜನ ಪರ್ವತಕ್ಕೆ ಬರುತ್ತಿದ್ದಾರೆ ಎಂದರು.

ನಮ್ಮೆಲ್ಲರ ಆರಾಧ್ಯ ದೈವ ಅಂಜನಾದ್ರಿ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ. ಬಜೆಟ್ ನಲ್ಲಿ ಘೋಷಿಸಿದಂತೆ ₹100 ಕೋಟಿ ನೀಡಿದ್ದೇನೆ. ಯಾತ್ರಾ ಸ್ಥಳ ಹಾಗೂ ಮೂಲಸೌಕರ್ಯ ಕಲ್ಪಿಸಲಾಗುವುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು. ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಆಸ್ಪತ್ರೆ, ಯಾತ್ರಾ ಸ್ಥಳ ಸೌಲಭ್ಯ ಕಲ್ಪಿಸಲಾಗುವುದು. ವೃದ್ಧರಿಗೆ ಸುಲಭವಾಗಿ ಬೆಟ್ಟ ಏರಲು ಅನುಕೂಲ ಮಾಡಿಕೊಡಲಾಗುವುದು‌. ರೋಪ್ ವೇ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು. ಅಂಜನಾದ್ರಿ ಸೇರಿ ಸುತ್ತಲಿನ ದೇವಸ್ಥಾನ ಹಾಗೂ ಪ್ರದೇಶಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಪುರಾತತ್ವ ಇಲಾಖೆ ವ್ಯಾಪ್ತಿಯ ಕ್ಷೇತ್ರಗಳನ್ನು ಬಿಟ್ಟು ಹಂಪಿ ಹಾಗೂ ಮೈಸೂರು ಭಾಗದ ಸುತ್ತಮುತ್ತಲಿನ ಪಾರಂಪರಿಕ ತಾಣಗಳನ್ನು ರಾಜ್ಯದ ಪ್ರವಾಸೋದ್ಯಮ ಸರ್ಕಿಟ್ ಮಾಡಲಾಗುವುದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ‌ಕೊಡುವ ರೈತರಿಗೆ ಪರಿಹಾರ ನೀಡಲು ₹24 ಕೋಟಿ ಮೀಸಲಿಡಲಾಗಿದೆ. ರೈತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಆಗದಂತೆ ಪರಿಹಾರ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT