ನಾಲ್ಕು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ: ಶೆಟ್ಟರ ಟೀಕೆ  

7
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ

ನಾಲ್ಕು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ: ಶೆಟ್ಟರ ಟೀಕೆ  

Published:
Updated:

ಕೊಪ್ಪಳ: ರಾಜ್ಯದಲ್ಲಿ ಬರ ಭೀಕರ ಬಂದಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸದೇ ಪ್ರಯೋಜನಕ್ಕೆ ಬಾರದ ಪ್ರಚಾರದಲ್ಲಿ ತೊಡಗಿದ್ದಾರೆ. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ ಟೀಕಿಸಿದರು.

ಅವರು ಬಿಜೆಪಿ ವತಿಯಿಂದ ಸೋಮವಾರ ಬರ ಅಧ್ಯಯನ ತಂಡ ನೇತೃತ್ವ ವಹಿಸಿ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಕ್ಕೆ ಭೇಟಿ ನೀಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಾಧ್ಯಮಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿ, ₹ 46 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ. 34 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ತಾವೇ ಅಂಕಿ-ಅಂಶ ನೀಡುತ್ತಾರೆ. ಆದರೆ ಸಾಲ ಮನ್ನಾ ಆದ ರೈತರ ಸಮರ್ಪಕ ಮಾಹಿತಿ ಇಲ್ಲ ಎಂದು ರಾಷ್ಟ್ರೀಕೃತ ಬ್ಯಾಂಕ್ ಮೇಲೆ ಗೂಬೆ ಕೂರಿಸುತ್ತಾ, ಜವಾಬ್ದಾರಿಯಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಳೆಯ ಮೈಸೂರಿನ ಕೇವಲ ಮೂರು-ನಾಲ್ಕು ಜಿಲ್ಲೆಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ದೇವೇಗೌಡ ಮತ್ತು ಅವರ ಮಕ್ಕಳು ಮೊದಲಿನಿಂದಲೂ ಉತ್ತರ ಕರ್ನಾಟಕ ವಿರೋಧಿ ಧೋರಣೆ ಬೆಳೆಸಿಕೊಂಡು ಬಂದಿದ್ದಾರೆ. ಇವರಿಗೆ ಸಮಗ್ರ ಕರ್ನಾಟಕದ ಪರಿಕಲ್ಪನೆಯೇ ಇಲ್ಲ ಎಂದು ಹರಿಹಾಯ್ದರು.

ಕೊಪ್ಪಳ ಜಿಲ್ಲೆಯ ರೈತರ ₹ 30ರಿಂದ ₹ 35 ಕೋಟಿ ಬೆಳೆ ವಿಮಾ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾನವೀಯತೆ ಹಿನ್ನೆಲೆಯಲ್ಲಿ ಕಳೆದ ಸಾಲಿನ ವಿಮಾ ಹಣವನ್ನು ಯಾವುದೇ ಷರತ್ತು ವಿಧಿಸದೇ ನೀಡಬೇಕು. ಮುಂಬರುವ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.

'ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಸಕ್ಕರೆ ಮಂತ್ರಿ ಯಾರು ಎಂಬುವುದು ಈಗ ಮಾತ್ರ ನಮಗೆ ಗೊತ್ತಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, 'ನೀವು ಯಾವ ಊರು', 'ನನಗೆ ಮತ ಹಾಕಿದ್ದೀರಾ', ಎಲ್ಲಿ ಮಲಗಿದ್ದೀ ಎಂದು ಹೊಣೆಗೇಡಿತನದಿಂದ ಮಾತನಾಡಿ ಮುಖ್ಯಮಂತ್ರಿ ಹುದ್ದೆಗೆ ಅವಮಾನ ತರುವಂತಾ ಕೆಲಸ ಮಾಡುತ್ತಿದ್ದಾರೆ' ಎಂದು ಕಿಡಿ ಕಾರಿದರು.

'ಕೇವಲ 38 ಶಾಸಕರನ್ನು ಇಟ್ಟುಕೊಂಡು ಹಿಂಬಾಗಿಲ ಮೂಲಕ ರಾಜ್ಯದ ಜನ ತಿರಸ್ಕರಿಸಿದ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿ ಅಧಿಕಾರ ನಡೆಸುತ್ತಿರುವುದು ಪ್ರಜಾತಂತ್ರಕ್ಕೆ ಅವಮಾನ. ರಾಜ್ಯದ ಖಜಾನೆ ಖಾಲಿಯಾಗಿದೆ. ಯಾವ ರೈತರಿಗೂ ಸಾಲ ಮನ್ನಾ ಯೋಜನೆ ತಲುಪಿಲ್ಲ. ಸಿದ್ದರಾಮಯ್ಯನವರ ಕೃಪೆಯಿಂದ ಸರ್ಕಾರ ನಡೆಯುತ್ತಿದೆ. ಲೂಟಿ ಮಾಡಲು ಅಧಿಕಾರ ಹಿಡಿದಿದ್ದಾರೆ' ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ರೈತ ಮೋರ್ಚಾ ಅಧ್ಯಕ್ಷ ಈಶ್ವರಚಂದ್ರ ವಿದ್ಯಾಸಾಗರ, ಶಂಕರಗೌಡ ಪಾಟೀಲ, ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !