'ಸಾಂಕ್ರಾಮಿಕ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ'

7
ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ ಕಾರ್ಯಕ್ರಮದಲ್ಲಿ ಡಾ.ರಾಮಕೃಷ್ಣ ಎಚ್.ಅಭಿಮತ

'ಸಾಂಕ್ರಾಮಿಕ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ'

Published:
Updated:

ಕೊಪ್ಪಳ: ಕ್ಷಯರೋಗ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು ಕ್ಷಯರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕ ಸಹಕಾರ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ಹೆಚ್. ಅವರು ಹೇಳಿದರು.

ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸಂಘ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯ್ತಿ ಓಜನಹಳ್ಳಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಸಹಯೋಗದಲ್ಲಿ ಚಿಲವಾಡಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 'ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಜುಲೈ 2 ರಿಂದ 13ರವರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಚಿಕಿತ್ಸೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. 'ನಾಯಕರು ಬೇಕಾಗಿದ್ದಾರೆ.... ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ-ಕ್ಷಯರೋಗವನ್ನು ನಿರ್ಮೂಲನೆಗೊಳಿಸಿ ಇತಿಹಾಸ ನಿರ್ಮಿಸೋಣ' ಎಂಬ ಘೋಷ ವಾಕ್ಯದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸತತ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು, ಕತ್ತು ಮತ್ತು ಕಂಕಳುದಲ್ಲಿ ಗಡ್ಡೆ ಆಗುವುದು, ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಕಫ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಭಾರತ ಸರ್ಕಾರ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಸಲುವಾಗಿ ಪ್ರತಿ ತಿಂಗಳು ₹ 500 ಸಹಾಯಧನವನ್ನು ಅವರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೆ ತಂದಿದೆ. ಕ್ಷಯರೋಗದಿಂದ ಮುಕ್ತವಾಗಲು ಕಡ್ಡಾಯವಾಗಿ ಚಿಕಿತ್ಸೆ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಕ್ಷಯರೋಗ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಾಮಾಂಜನೇಯ ಮಾತನಾಡಿ, ಕ್ಷಯರೋಗವು (ಟಿ.ಬಿ.) 'ಮೈಕ್ರೋಬ್ಯಾಕ್ಟೇರಿಯಂ ಟ್ಯುಬರ್‍ಕ್ಯೂಲೋಸಿಸ್' ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಈ ರೋಗದಲ್ಲಿ ಎರಡು ಪ್ರಕಾರಗಳಿವೆ. ಶ್ವಾಸಕೋಶ ಮತ್ತು ಶ್ವಾಸಕೋಶೇತರ ಕ್ಷಯ ಎಂದು ಎರಡು ರೀತಿ ವಿಂಗಡಿಸಲಾಗಿದೆ. ಇದಕ್ಕೆ 9 ತಿಂಗಳವರೆಗೆ ಉಚಿತ ಚಿಕಿತ್ಸೆಯನ್ನು ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಅಂಜುಮ್ ಪರ್ವಿನ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಹಿರಿಯ ಆರೋಗ್ಯ ಸಹಾಯಕ ಎಸ್.ಬಿ. ಚಿಕ್ಕನರಗುಂದ, ಓಜನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಪ್ಪ ಅಗಸಿಮುಂದಿನ, ಮೈಲಾರಪ್ಪ ಹಳ್ಳಿಗಿಡ, ರತ್ನಮ್ಮ ಕಂಬಳಿ, ನಾಗಪ್ಪ ಹೊಸಕೇರಿ, ಮುಖ್ಯಶಿಕ್ಷಕ ಬಸವರಾಜ ಇಳಿಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ದ್ಯಾಮಣ್ಣ ಅಂಡಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !