ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಗರ ಕೊಪ್ಪಳದಲ್ಲಿ ಹೆಚ್ಚಲಿದೆ ಚಳಿ: ಆರೋಗ್ಯದತ್ತ ಇರಲಿ ಕಾಳಜಿ

Last Updated 29 ನವೆಂಬರ್ 2021, 6:13 IST
ಅಕ್ಷರ ಗಾತ್ರ

ಕೊಪ್ಪಳ: ಕಲ್ಲುಬಂಡೆ, ಕೋಟೆ ಕೊತ್ತಲಗಳಿಂದ ಕೂಡಿದ ಕೋಟೆ ನಗರ ಕೊಪ್ಪಳಕ್ಕೆ ಬಿಸಿಲುನಗರಿ ಎಂಬ ವಿಶೇಷಣ ಉಂಟು. ಆದರೆ, ಒಂದು ವಾರದಿಂದಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಬಿಸಿಲುನಾಡಿನಲ್ಲಿ ಮೈಕೊರೆಯುವ ಚಳಿಗೆ ಗಡಗಡ ನಡುಗುವಂತೆ ಆಗಿದೆ.

ಚಳಿಯ ಜತೆಗೆ ಹೊಂಜಿನ ಕಾರುಬಾರು ಶುರುವಾಗಿದೆ. ಮಂಜಿನಿಂದ ಬೆಳಿಗ್ಗೆ 8ರವರೆಗೆ ಸೂರ್ಯನ ದರ್ಶನ ಆಗುತ್ತಿಲ್ಲ. ಸಂಜೆ ನಾಲ್ಕೂವರೆ, ಐದು ಆಗುತ್ತಿದ್ದಂತೆ ಸೂರ್ಯ ಮತ್ತೆ ಅಗೋಚರ ಆಗುತ್ತಿದ್ದಾನೆ. ಮಧ್ಯಾಹ್ನ ಮಾತ್ರ ಸೂರ್ಯ ಕೆಂಡ ಕಾರುತ್ತಿದ್ದಾನೆ. ಆದರೆ, ಸಂಜೆಯ ಮೇಲೆ ಇದಕ್ಕೆ ಪ್ರತಿಕೂಲ ವಾತಾವರಣ ಇರುತ್ತಿದೆ.

ಮಧ್ಯಾಹ್ನ 31ರಿಂದ 32 ಡಿಗ್ರಿ ಸೆಲ್ಸಿಯಸ್‌ ವಾತಾವರಣ ಇರುತ್ತಿದ್ದರೆ, ಸಂಜೆಯಾದ ನಂತರ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುತ್ತಿದೆ. ಚಳಿಯ ಜತೆಗೆ ತಂಪು ಗಾಳಿ ಕೂಡ ಜೋರಾಗಿ ಬೀಸುತ್ತಿರುವುದರಿಂದ ರಾತ್ರಿ ಎಂಟರ ನಂತರ ಜನ ಹೊರಗೆ ಓಡಾಡುವುದು ಕಡಿಮೆಯಾಗಿದೆ.

ಬೆಳಿಗ್ಗೆ ಕೂಡ ಇದೇ ಪರಿಸ್ಥಿತಿ. ಬೆಳಿಗ್ಗೆ 6ರ ನಂತರ ನಗರದತಾಲ್ಲೂಕು, ಜಿಲ್ಲಾ ಕ್ರೀಡಾಂಗಣ, ಮಳೆಮಲ್ಲೇಶ್ವರ ದೇವಸ್ಥಾನ, ಗವಿಮಠದ ಆವರಣ ಸೇರಿದಂತೆ ವಿವಿಧಮೈದಾನದಲ್ಲಿ ವಾಯುವಿಹಾರ, ವ್ಯಾಯಾಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಆದರೆ, ಈಗ ಬೆಳಿಗ್ಗೆ ಎಂಟರವರೆಗೆ ಯಾರೂ ಸುಳಿಯುತ್ತಿಲ್ಲ. ಸೂರ್ಯನಿಗಿಂತ ಮೊದಲೇ ಕ್ರೀಡಾಂಗಣ, ಉದ್ಯಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜನ ಸೂರ್ಯನ ಕಿರಣಗಳು ಭೂಮಿಗೆ ಸ್ಪರ್ಶಿಸಿದ ನಂತರ ಹೊರಗೆ ಬರುತ್ತಿದ್ದಾರೆ. ಇದೆಲ್ಲ ಚಳಿರಾಯನ ಮಾಯೆ.

ವಾತಾವರಣದಲ್ಲಿ ಏಕಾಏಕಿ ಬದಲಾವಣೆ ಆಗಿರುವುದರಿಂದ ಅನಾರೋಗ್ಯಕ್ಕೆ ಈಡಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಮ್ಮು, ನೆಗಡಿ, ವಿಷಮಶೀತ ಜ್ವರ ಪ್ರಕರಣ ಹೆಚ್ಚಾಗಿವೆ. ಖಾಸಗಿ ಆಸ್ಪತ್ರೆಗಳು ಮುಚ್ಚಿರುವ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಜನ ಅನಿವಾರ್ಯವಾಗಿ ಸರತಿ ಸಾಲಿನಲ್ಲಿ ನಿಂತುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂಪು ಗಾಳಿ, ದೂಳಿನಿಂದ ತಪ್ಪಿಸಿಕೊಳ್ಳಲು ಜನ ಕಿವಿ, ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಅನೇಕ ಜನ ದ್ವಿಚಕ್ರ ವಾಹನದ ಬದಲು ಕಾರು, ಬಸ್ಸಿನಲ್ಲಿ ದೈನಂದಿನ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ರಾತ್ರಿ ಎಂಟರಿಂದ ಬೆಳಿಗ್ಗೆ ಎಂಟರ ವರೆಗೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಜನರ ಓಡಾಟ ಕೂಡ ಕಡಿಮೆಯಾಗಿರುವುದರಿಂದ ರಾತ್ರಿ ಎಂಟರ ನಂತರ ವ್ಯಾಪಾರ ನಡೆಯುತ್ತಿಲ್ಲ. ಇದರಿಂದಾಗಿ ಅಂಗಡಿಗಳು ಬೇಗ ಮುಚ್ಚುತ್ತಿವೆ. ಮಂಜಿನಿಂದಾಗಿ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿವೆ.

ಎಡದಂಡೆ ಕಾಲುವೆ, ಕೆರೆ,ತುಂಗಭದ್ರಾ ಜಲಾಶಯದ ಪಾತ್ರ, ನೀರಾವರಿ ಪ್ರದೇಶಗಳಲ್ಲಿಚಳಿ ಸ್ವಲ್ಪ ಹೆಚ್ಚಾಗಿಯೇ ಇದೆ. ಸೆಪ್ಟೆಂಬರ್‌ನಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕೃಷಿ ಚಟುವಟಿಕೆ ಕೂಡ ಬಿರುಸಾಗಿ ನಡೆಯುತ್ತಿದೆ. ಒಂದೆಡೆ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ನದಿಯಲ್ಲಿ ಜುಳು ಜುಳು ನೀರು ಹರಿಯುತ್ತಿದೆ. ಹೀಗಾಗಿ ಇಡೀ ಪರಿಸರ ಸಂಪೂರ್ಣ ತಂಪಾಗಿದೆ. ಇಷ್ಟು ದಿನ ವಿಪರೀತ ಬಿಸಿಲು...ಬಿಸಿಲು ಎಂದು ಗೊಣಗುತ್ತಿದ್ದ ಜನ ಈಗಚಳಿ...ಚಳಿಎಂದು ಗೊಣಗು ತ್ತಿದ್ದಾರೆ. ಚಳಿಯ ಪ್ರಮಾಣ ಡಿಸೆಂಬರ್‌, ಜನವರಿಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೌಕರರು, ವಿದ್ಯಾರ್ಥಿಗಳು, ರೈತರು, ಗೃಹಿಣಿಯರು ನಸುಕಿನಲ್ಲೇ ಎದ್ದು ಕೆಲಸಕ್ಕೆ ಹಾಜರಾಗಲು ಪರದಾಡುತ್ತಿದ್ದಾರೆ. ಇಷ್ಟು ದಿನ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಸ್ವೇಟರ್, ಜರ್ಕಿನ್, ಮಫ್ಲರ್, ಉಲನ್‌ ಟೊಪ್ಪಿಗೆ, ಸ್ಕಾರ್ಪ್‌, ಕಿವಿ ಪಟ್ಟಿ, ಮಂಕಿಕ್ಯಾಪ್‌ಗಳೂ ಮೈ ಕೊಡವಿಕೊಂಡು ಎದ್ದಿವೆ.

ಈಗ ಕೆಲವೇ ತಿಂಗಳ ಹಿಂದೆ38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಈಗ ಬೆಳಿಗ್ಗೆ ಮತ್ತು ಸಂಜೆ 18ರಿಂದ 19ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶಕಂಡು ಬರುತ್ತದೆ. ಮಧ್ಯಾಹ್ನ 12ರಿಂದ 4 ಗಂಟೆವರೆಗೆ 24ರಿಂದ 28 ಇರುತ್ತದೆ.

ಬೆಳಿಗ್ಗೆ–ಸಂಜೆ ವಾಯುವಿಹಾರಕ್ಕೆ ಹೋಗುವವರಿಗೆ ಬೆಚ್ಚನೆಯ ಉಡುಪು ಅನಿವಾರ್ಯವಾಗಿದೆ. ಬೈಕ್‌, ಸೈಕಲ್‌, ಕಾರ್‌ಗಳಲ್ಲಿ ಓಡಾಡುವವರು ಬಾಯಿ–ಮೂಗು ಮುಚ್ಚಿಕೊಳ್ಳುವಂತ ಬಟ್ಟೆ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT