5
ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಆವರಣದಲ್ಲಿ ಸ್ವಚ್ಛತಾ ಆಂದೋಲನ

ನಿವಾಸಿಗಳಿಗೆ ಸ್ವಚ್ಛತಾ ಪಾಠ ಮಾಡಿದ ಕಮಾಂಡೆಂಟ್‌

Published:
Updated:
ಮುನಿರಾಬಾದ್‍ನ ಇಂಡಿಯಾ ರಿಜರ್ವ ಬಟಾಲಿಯನ್ ವಸತಿ ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಆಂದೋಲನದಲ್ಲಿ ಕಮ್ಯಾಂಡೆಂಟ್ ನಿಶಾಜೇಮ್ಸ್ ಸ್ವಚ್ಛತೆ ಕಾಪಾಡುವಂತೆ ಸೂಚನೆನೀಡಿದರು. ಜಿಲ್ಲಾಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಇದ್ದರು

ಮುನಿರಾಬಾದ್: ಇಲ್ಲಿನ ಕೇಂದ್ರ ಸಶಸ್ತ್ರ ಮೀಸಲು ಪಡೆಯ ವಸತಿ ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನದ ಅಂಗವಾಗಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು.

ಮೀಸಲು ಪಡೆ ಪೊಲೀಸರು, ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಆಂದೋಲನದಲ್ಲಿ ಪಾಲ್ಗೊಂಡು ತ್ಯಾಜ್ಯ, ಕಸ, ಕಳೆಗಿಡಗಳನ್ನು ಸಂಗ್ರಹಿಸಿ ಟ್ರ್ಯಾಕ್ಟರ್‍ನಲ್ಲಿ ತುಂಬಿ ವಿಲೇವಾರಿ ಮಾಡಲಾಯಿತು. ಬಳಿಕ ಮಾತನಾಡಿದ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಕಮಾಂಡೆಂಟ್ ನಿಶಾ ಜೇಮ್ಸ್, ‘ನೀವು ಮನೆಯೊಳಗೆ ಹೋಗುವಾಗ ಚಪ್ಪಲಿಯನ್ನು ಹೇಗೆ ಹೊರಗೆ ಬಿಡುತ್ತೀರಿ ಹಾಗೆಯೇ ಮನೆ ಆವರಣವನ್ನು ಸ್ವಚ್ಛವಾಗಿ ಇಡಲು ಗಮನಕೊಡಿ. ನಮ್ಮ ಮನೆಗಳು ಮಾತ್ರ ಸ್ವಚ್ಛವಾಗಿದ್ದರೆ ಸಾಲದು ಸುತ್ತಲಿನ ಆವರಣ, ಪರಿಸರ ಸ್ವಚ್ಛವಾಗಿರಬೇಕು’ ಎಂದು ನಿವಾಸಿಗಳಿಗೆ ಕಿವಿಮಾತು ಹೇಳಿದರು.

‘ವಸುದೈವ ಕುಟುಂಬಕಂ‘ ಎನ್ನುವಂತೆ ಪ್ರತಿಯೊಬ್ಬರು ಇಡೀ ಜಗತ್ತೇ ನನ್ನ ಮನೆ ಎಂದು ಭಾವಿಸಬೇಕು. ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಹಾಕುವುದರಿಂದ ನೊಣ, ಸೊಳ್ಳೆ ಉತ್ಪತ್ತಿಯಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತದೆ ಇದರಿಂದ ಕಾಯಿಲೆ ಬರುತ್ತವೆ. ಚಾಕುಲೇಟ್, ಚಿಪ್ಸ್ ತಿಂದು ಕವರ್‍ ಅನ್ನು ಮನೆ ಹೊರಗೆ ಎಸೆಯುವುದು ಅನಾಗರಿಕ ವರ್ತನೆ. ತ್ಯಾಜ್ಯವನ್ನು ಕಸದ ಬುಟ್ಟಿಯಲ್ಲಿ ಹಾಕಿ. ಮನೆಯಲ್ಲಿ ಹಸಿಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಿಸಿ ಕೊಡಬೇಕು’ ಎಂದು ಸಲಹೆ ನೀಡಿದರು.

‘ಮೊದಲ ಬಾರಿಗೆ ಆಂದೋಲನದ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ಉದ್ದೇಶಕ್ಕಾಗಿ ‘ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ' ರಚಿಸಿ ನೋಂದಣಿ ಮಾಡಲಾಗಿದೆ. ಸಂಘದ ಸದಸ್ಯೆಯರು ಸ್ವಚ್ಛತಾ ವಿಷಯದಲ್ಲಿ ನಿಗಾ ವಹಿಸುವರು. ಕಂಡಕಂಡಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ತಪ್ಪು ಪುನರಾವರ್ತನೆಯಾದರೆ ವಸತಿಗೃಹ ಖಾಲಿ ಮಾಡಿಸಲಾಗುವುದು’ ಎಂದು ಖಡಕ್ಕಾಗಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಮಾತನಾಡಿ, ‘ವಸತಿಪ್ರದೇಶದ ಎಲ್ಲಾ ನಾಗರಿಕರು ಕಸವನ್ನು ವಿಂಗಡಿಸಿ ಕೊಡಿ. ಟ್ರ್ಯಾಕ್ಟರ್ ಮೂಲಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮುನಿರಾಬಾದ್, ಹುಲಿಗಿ, ಹೊಸಹಳ್ಳಿ, ಹಿಟ್ನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಮತ್ತು ಸಿಬ್ಬಂದಿ, ತಾಲ್ಲೂಕು ಪಂಚಾಯಿತಿಯ ಶರಣಯ್ಯ ಶಶಿಮಠ, ದುರ್ಗಾಪ್ರಸಾದ್, ರುದ್ರಯ್ಯಹಿರೇಮಠ, ಗವಿಸಿದ್ದಯ್ಯ, ಬಸವರಾಜ ಸೇರಿದಂತೆ ನಿವಾಸಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ತಪ್ಪು ಪುನರಾವರ್ತನೆಯಾದರೆ ನಿರ್ದಾಕ್ಷಿಣ್ಯವಾಗಿ ವಸತಿ ಗೃಹ ಖಾಲಿ ಮಾಡಿಸಲಾಗುವುದು
- ನಿಶಾ ಜೇಮ್ಸ್, ಕಮಾಂಡೆಂಟ್, ಕೇಂದ್ರ ಸಶಸ್ತ್ರ ಮೀಸಲು ಪಡೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !