ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು’

ಕುಷ್ಟಗಿ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹೇಳಿಕೆ
Last Updated 3 ಜನವರಿ 2022, 3:01 IST
ಅಕ್ಷರ ಗಾತ್ರ

ಕುಷ್ಟಗಿ: ‘ಪಟ್ಟಣದ ಜೆಸ್ಕಾಂ ಕಚೇರಿ ಬಳಿ ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಿಯೇ ತೀರುತ್ತೇವೆ. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ’ ಎಂದು ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಸ್ಪಷ್ಟಪಡಿಸಿದರು.

ಮಳಿಗೆಗಳಲ್ಲಿರುವ ಅನಧಿಕೃತ ಬಾಡಿಗೆದಾರರನ್ನು ತೆರವುಗೊಳಿಸುವುದು, ನ್ಯಾಯಾಲಯದ ತೀರ್ಪು ಮತ್ತು ಈ ವಿಷಯದಲ್ಲಿ ಪುರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರಿಗೆ ಇರುವ ಶಂಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿರುವುದಾಗಿ ಅವರು ತಿಳಿಸಿದರು.

ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಪಾರದರ್ಶಕವಾಗಿಯೇ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ನ್ಯಾಯಾಲಯ ನೀಡಿದ ಮಾರ್ಗದರ್ಶನವನ್ನು ಗೌರವಯುತವಾಗಿ ಪಾಲಿಸುತ್ತೇವೆ. ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಲ್ಲ. ಆದರೆ ದಿಢೀರನೇ ಯಾವುದೇ ಕ್ರಮ ಜರುಗಿಸುವುದಕ್ಕೆ ಕೆಲ ಮಿತಿಗಳು ಇರುತ್ತವೆ ಎಂಬುದನ್ನು ಸದಸ್ಯರು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಆದರೆ ಮಳಿಗೆಗಳಲ್ಲಿರುವವರನ್ನು ಖಾಲಿ ಮಾಡಿಸದೆ ಪುರಸಭೆಯ ಅಧಿಕಾರಿಗಳು ಮತ್ತು ಕೆಲ ಪುರಪಿತೃಗಳು ಅವ್ಯವಹಾರ ನಡೆಸಿದ್ದಾರೆ. ಲಕ್ಷಾಂತರ ಹಣ ಕೈಬದಲಾಗಿದೆ ಎಂದು ಆರೋಪಿಸಿರುವುದಕ್ಕೆ ಅಸಮಾಧಾನ ಹೊರಹಾಕಿದ ಅಧ್ಯಕ್ಷ, ದಶಕಗಳಿಂದಲೂ ಈ ವಿಷಯ ನ್ಯಾಯಾಲಯದಲ್ಲಿತ್ತು. ಹಿಂದೆ ಅಧಿಕಾರ ನಡೆಸಿದ ಅಧಿಕಾರಿಗಳು ಮತ್ತು ಅಧಿಕಾರದಲ್ಲಿದ್ದವರು ಮುತುವರ್ಜಿವಹಿಸಿರಲಿಲ್ಲ. ಆದರೆ ಈ ವಿಷಯದಲ್ಲಿ ತಾವು ವಿಶೇಷ ಆಸಕ್ತಿ ವಹಿಸಿದ್ದರಿಂದ ನ್ಯಾಯಾಲಯದಿಂದ ಪುರಸಭೆ ಪರವಾಗಿ ತೀರ್ಪು ಬಂದಿದೆ ಎಂಬುದನ್ನು ಮನಗಾಣಬೇಕಿದೆ. ಹೀಗಿದ್ದರೂ ಪುರಸಭೆ ವಿರುದ್ಧ ಅಪಪ್ರಚಾರ ನಡೆಸುವವರಲ್ಲಿ ಅರಿವಿನ ಕೊರತೆ ಇದೆ ಎಂದು ತಿರುಗೇಟು ನೀಡಿದರು.

ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಿ ಬಾಡಿಗೆ ನೀಡಲು ತಮ್ಮಿಂದ ಸಾಧ್ಯವಾಗದಿದ್ದರೆ ಅಧಿಕಾರದಲ್ಲಿ ಮುಂದುವರಿಯುವುದೇ ಇಲ್ಲ ಎಂದು ತಮ್ಮ ವಿರೋಧಿಗಳಿಗೆ ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT