ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳಕ್ಕೆ ಸ್ವತಂತ್ರ ವಿವಿ: ಪರಿಶೀಲನೆಗೆ ಸಮಿತಿ

ಜಿಲ್ಲೆಯಲ್ಲಿ 3500 ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು: ದಶಕದ ಬೇಡಿಕೆಗೆ ಜೀವ, ಶಿಕ್ಷಣ ಪ್ರೇಮಿಗಳ ಸಂತಸ
Last Updated 21 ಜುಲೈ 2021, 4:25 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಸ್ವತಂತ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಪರಿಶೀಲನೆಗೆ ನಾಲ್ವರು ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಆದ್ದರಿಂದ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹರ್ಷ ಮೂಡಿದೆ.

ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ದಶ
ಕಗಳಿಂದಹೋರಾಟ ನಡೆಸಲಾಗಿತ್ತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಲ್ಲಿಯವರೇ ಆದ ಬಸವರಾಜ ರಾಯರಡ್ಡಿ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳ್ಳಾರಿ ವಿವಿ ಸ್ನಾತಕೋತ್ತರ ವಿಭಾಗ ಇಲ್ಲಿನ ಹಳೆ ಆಸ್ಪತ್ರೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭವಾಗಿತ್ತು.

ಜಿಲ್ಲೆಯ ಜನ ಉನ್ನತ ಶಿಕ್ಷಣ ಪಡೆಯಲು ಈ ಮೊದಲು ಧಾರವಾಡ, ಕಲಬುರ್ಗಿಗೆ ಹೋಗುತ್ತಿದ್ದರು. ನಂತರ ಬಳ್ಳಾರಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಅದರ ವ್ಯಾಪ್ತಿಗೆ ಒಳಪಟ್ಟಿತು.ನಂತರ ವಿವಿ ಸ್ನಾತಕೋತ್ತರ ಕೇಂದ್ರ ಆರಂಭವಾಗುವ ಮೂಲಕ ಸ್ನಾತಕೋತ್ತರ ಪದವಿ ತರಗತಿ ಆರಂಭವಾಯಿತು.

3ಸಾವಿರ ವಿದ್ಯಾರ್ಥಿಗಳು ಪದವಿ,500ವಿದ್ಯಾರ್ಥಿಗಳು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಲಿಯುತ್ತಿದ್ದು, ಜಿಲ್ಲೆಯಲ್ಲಿ ಸ್ವತಂತ್ರ ವಿವಿ ಸ್ಥಾಪನೆಯಾದರೆ ದೂರದ ಊರುಗಳಿಗೆ ತೆರಳುವ ತೊಂದರೆ ತಪ್ಪುತ್ತದೆ. ಅಲ್ಲದೆ, ಆಡಳಿತಾತ್ಮಕ ಕಾರಣಕ್ಕೆ ಬಳ್ಳಾರಿಗೆ ಅಲೆಯುವುದು ತಪ್ಪಲಿದೆ.

ಸಮಿತಿ ರಚನೆ:ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಸ್ವತಂತ್ರ ವಿವಿ ಸ್ಥಾಪನೆಗೆ ವಿಜಯನಗರ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರ, ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ, ಧಾರವಾಡ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರನ್ನು ಸದಸ್ಯರನ್ನಾಗಿ, ಬೆಂಗಳೂರಿನ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸಂಚಾಲಕರನ್ನಾಗಿ ನೇಮಕ ಮಾಡಿ ಸಮಿತಿ ರಚನೆ ಮಾಡಲಾಗಿದೆ.

ಈ ಸಮಿತಿ ಜಿಲ್ಲೆಗೆ ಭೇಟಿ ನೀಡಿ ಉನ್ನತ ಶಿಕ್ಷಣಕ್ಕೆ ಇರುವ ಅವಕಾಶ, ಸೌಲಭ್ಯ, ಸ್ಥಳ ಪರಿಶೀಲನೆ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಸದ್ಯದ ಪರಿಸ್ಥಿತಿ: ಜಿಲ್ಲೆಯಲ್ಲಿ ಯಲಬುರ್ಗಾ ಮತ್ತು ಕೊಪ್ಪಳದಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ವಿವಿ ಪ್ರಾದೇಶಿಕ ಕೇಂದ್ರ ಆರಂಭಿಸಿದೆ. ಆದರೆ ಸ್ವತಂತ್ರ ಕಟ್ಟಡವಿಲ್ಲದೆ ಶಿಥಿಲಗೊಂಡ ಮತ್ತು ಹಳೆ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದು, ಮೂಲಸೌಕರ್ಯ ಕೊರತೆಯಿಂದ ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿದೆ.

ನಗರದ ಮಾರುಕಟ್ಟೆಯ ಗೋಜಲಿನ ಪರಿಸರದ ಹಳೆ ಆಸ್ಪತ್ರೆ ಕಟ್ಟಡ ಬಹುತೇಕ ಶಿಥಿಲಗೊಂಡಿದೆ. ಕಳೆದ ವರ್ಷ ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಆರಂಭವಾಗಿರುವ ಬೃಹತ್ ಪ್ರಮಾಣದ ನೂತನ ಗ್ರಾಮೀಣ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತರಗತಿಗಳಿಗೆ ಅವಕಾಶ ನೀಡಲಾಗಿತ್ತು. ಈಗ ನಾಲ್ಕನೇ ಸೆಮಿಸ್ಟರ್‌ ಆರಂಭವಾದರೂ200 ಆಸುಪಾಸಿನಲ್ಲಿ ವಿದ್ಯಾರ್ಥಿಗಳು ಇದ್ದಾರೆ. ನೂತನ ಸ್ನಾತಕೋತ್ತರ ಕೇಂದ್ರಕ್ಕೆ ನಗರದ ಸುಂದರವಾದ ಮಳೆಮಲ್ಲೇಶ್ವರ ದೇವಸ್ಥಾನದ ಪಕ್ಕದ ಜಾಗದಲ್ಲಿ ವಿವಿ ಸ್ಥಾಪನೆಗೆ ಅನುಮೋದನೆ ನೀಡಿದ್ದರೂ ತಾಂತ್ರಿಕ ಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT