ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣಕ್ಕೆ ತೋರುವ ಆಸಕ್ತಿ, ನಿರ್ವಹಣೆಗೆ ಇಲ್ಲ!

ದುಃಸ್ಥಿತಿಯಲ್ಲಿ ನಗರದ ಸಮುದಾಯ ಭವನಗಳು
Last Updated 14 ಅಕ್ಟೋಬರ್ 2019, 10:29 IST
ಅಕ್ಷರ ಗಾತ್ರ

ಕೊಪ್ಪಳ: ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದ ಸಮಾಜಗಳಿಗೆ ಮದುವೆ ಮತ್ತಿತರ ಅನುಕೂಲಕ್ಕೆ ಸಮುದಾಯ ಭವನ ನಿರ್ಮಿಸುವ ಪರಿಕಲ್ಪನೆ ಇತ್ತೀಚಿಗೆ ಹೆಚ್ಚಾಗಿದೆ. ಆದರೆ, ನಿರ್ಮಾಣಕ್ಕೆ ತೋರುವ ಉತ್ಸಾಹ ನಿರ್ವಹಣೆಗೆ ಇಲ್ಲ. ಇದರ ಪರಿಣಾಮ ಅವು ನಿರ್ವಹಣೆಯಿಲ್ಲದೇ ಸೊರಗುತ್ತಿವೆ.

ಸಮುದಾಯ ಭವನ ನಿರ್ಮಾಣ ಇತ್ತೀಚೆಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ತಮ್ಮ ಹಿಂಬಾಲಕರ ಮತ್ತು ಜಾತಿಗಳ ಬೆಂಬಲಿಗರ ಓಲೈಕೆಗೆ ನಿರ್ಮಾಣ ವಾಗುತ್ತಿರುವುದೇ ಹೆಚ್ಚಳವಾಗಿದೆ ಎಂಬ ಆರೋಪವಿದೆ. ಬಡವರು ಮದುವೆ, ನಾಮಕರಣ, ಸಮಾಜದ ಕಾರ್ಯಕ್ರಮ ಸೇರಿ ಇತರ ಕಾರ್ಯಕ್ರಮಗಳನ್ನು ಖಾಸಗಿ ಸಭಾಭವನದಲ್ಲಿ ದುಬಾರಿ ಹಣ ತೆತ್ತಲು ಆಗುವುದಿಲ್ಲ. ಅವರಿಗೆಂದೇ ನಿರ್ಮಿಸಲಾದ ಸಮುದಾಯ ಭವನಗಳು ಈಗ ದುಸ್ಥಿತಿ ಎದುರಿಸುತ್ತಿವೆ.

ಶಾಸಕ, ಸಂಸದರ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚು ಪ್ರಾಶಸ್ತ್ಯ. ಈ ಭವನಗಳಿಗೆ ನಿರ್ಮಾಣಕ್ಕೆ ಕೊಟ್ಟರೆ ಆಯಿತು. ಸಮುದಾಯವೇ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ನಂಬಿಕೆ ಜನಪ್ರತಿನಿಧಿಗಳಲ್ಲಿ ಬಂದಿದೆ.

ಇಂತಹ ಸಮುದಾಯ ಭವನಗಳು ಆಯಾ ಸಮಾಜದಲ್ಲಿ ಕ್ರಿಯಾಶೀಲತೆ ತರಲು ನಿರಂತರ ಕಾರ್ಯಕ್ರಮ, ತರಬೇತಿ, ಕೌಶಲ, ಹಕ್ಕು, ಸೌಲಭ್ಯ ಪಡೆಯಲು ಬಳಕೆಯಾಗಬೇಕು.ಆದರೆ, ಭವನ ನಿರ್ಮಿಸಿದರೆ ಮದುವೆ ಮುಂತಾದ ಖಾಸಗಿ ಕಾರ್ಯಕ್ರಮಗಳು ಮಾತ್ರ ನಡೆಯಬೇಕು ಎಂಬ ಅಲಿಖಿತ ನಿಯಮ ಜಾರಿಗೆ ಬಂದಿದೆ. ಇತರೆ ಕಾರ್ಯಕ್ರಮಗಳಿಗಿಂತ ಮದುವೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ.

ನಗರದ ಕಿನ್ನಾಳ ರಸ್ತೆಯ ಅಗಡಿ ಬಡಾವಣೆಯಲ್ಲಿ ವಾಲ್ಮೀಕಿ ಭವನ, ಮೆಹಬೂಬ ನಗರದಲ್ಲಿ ಡಾ.ಜಗಜೀವನರಾಂ ಕಳೆದ ಆರು ವರ್ಷಗಳಿಂದ ನಿರ್ಮಾಣವಾಗುತ್ತಲೇ ಇದೆ. ಸಜ್ಜಿಹೊಲ ಪ್ರದೇಶದಲ್ಲಿ 20 ವರ್ಷದ ಹಿಂದೆ ನಿರ್ಮಿಸಿದ ಅಂಬೇಡ್ಕರ್ ಭವನ ಇಂದು ಪಡಿತರ ದಾಸ್ತಾನುಗಳನ್ನು ಸಂಗ್ರಹಿಸುವ ಉಗ್ರಾಣವಾಗಿದೆ. ಜೆಪಿ ಮಾರುಕಟ್ಟೆ ಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲಾಗಿದ್ದರೂ ನೆನೆಗುದಿಗೆ ಬಿದ್ದಿದೆ.

ಈ ಸಮುದಾಯ ಭವನಗಳ ನಿರ್ಮಾಣದ ಹಿಂದೆಯೂ ರಾಜಕೀಯ ಇರುವುದರಿಂದ ಬಹುತೇಕ ಸಮುದಾಯ ಭವನಗಳು ಅರ್ಧಕ್ಕೆ ನಿಂತಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಹಣ ಪೋಲು ಮಾಡಿ ಅರ್ಧಕ್ಕೆ ಬಿಟ್ಟಿರುವುದರಿಂದ ಅಲ್ಲಿನ ಸಾಮಗ್ರಿಗಳನ್ನು ಹೊತ್ತು ಹೋಗುತ್ತಿದ್ದಾರೆ. ಮತ್ತೆ ಹೊಸ ಪ್ರಸ್ತಾವಗಳನ್ನು ಸಲ್ಲಿಸಿ ಕಾಮಗಾರಿ ಆರಂಭಿಸಬೇಕು ಎಂದು ಹೇಳುತ್ತಾರೆ. ಇದ್ದ ಸಮುದಾಯ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗುತ್ತಿವೆ.

ವಾಲ್ಮೀಕಿ ಭವನಕ್ಕೆ ₹ 3.50 ಕೋಟಿ ಮಂಜೂರಾಗಿದೆ ಶಾಸಕರ ಅನುದಾನದಲ್ಲಿ 49 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇನ್ನೂ ₹ 2 ಕೋಟಿ ಅನುದಾನ ಬರಬೇಕಿದ್ದು, ಕಾಮಗಾರಿ ಕುಂಠಿತವಾಗಿದೆ. ಭವನ ನಿರ್ಮಾಣಕ್ಕೆ ಆಸಕ್ತಿ ತೋರಿ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆಯುವ ಇಲಾಖೆಗಳು ಏಜೆನ್ಸಿಗೆ ಕೊಟ್ಟು ಕೈತೊಳೆದುಕೊಳ್ಳುತ್ತವೆ.

ಉಸ್ತುವಾರಿ ವಹಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ತನ್ನದೇ ಆದ ವ್ಯವಹಾರದ ಮಧ್ಯೆ ಸಿಲುಕಿಕೊಂಡು ಜನಪಯೋಗಿಯಾಗುವ ಇಂತಹ ಭವನಗಳನ್ನು ಪೂರ್ತಿ ಮಾಡುವಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಪರಿಣಾಮವಾಗಿ ನಗರದ ಎಲ್ಲ ಸಮುದಾಯ ಭವನಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ ಎಂದು ಸಮುದಾಯದ ಮುಖಂಡರು ಹೇಳುತ್ತಾರೆ.

***

ನಗರದ ಸಿಂದೋಗಿ ರಸ್ತೆಯ ಮೆಹಬೂಬ ನಗರದಲ್ಲಿ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಸ್ಥಳ ನೀಡಲಾಗಿದೆ. ಬಹುತೇಕ ಕಾಮಗಾರಿ ಅರ್ಧ ಆಗಿದೆ. ದಲಿತ ಸಮುದಾಯಕ್ಕೆ ಆಸರೆಯಾಗಬೇಕಾದ ಈ ಭವನಗಳು ಪೂರ್ತಿಯಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಇರುವುದರಿಂದ ಯೋಜನೆಗಳು ವ್ಯರ್ಥ್ಯವಾಗುತ್ತಿವೆ

-ಮಲ್ಲಿಕಾರ್ಜುನ ಪೂಜಾರ, ಹೋರಾಟಗಾರ

***

ಹಿಂದುಳಿದ ಜನಾಂಗಗಳಿಗೆ ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂಬುವುದು ಒಳ್ಳೆಯ ಉದ್ದೇಶ. ಆದರೆ, ಹಿಂದುಳಿದ ಮತ್ತು ದಲಿತ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡುವಲ್ಲಿ ಅನಗತ್ಯ ವಿಳಂಬ ಸಲ್ಲದು. ಜಿಲ್ಲಾ ಮಟ್ಟದ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ.

-ನಾಗರಾಜ ಬೆಲ್ಲದ, ದಲಿತ ಯುವ ಮುಖಂಡ

***

ಕಿನ್ನಾಳ ರಸ್ತೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಆದಷ್ಟು ಶೀಘ್ರ ನಿರ್ಮಾಣಗೊಂಡು ಸಮುದಾಯದ ಕಾರ್ಯಕ್ಕೆ ಉಪಯೋಗವಾದರೆ ಅಷ್ಟೇ ಸಾಕು. ಹೆಚ್ಚಿನ ವಿಳಂಬದಿಂದ ವೆಚ್ಚವೂ ಹೆಚ್ಚಾಗುತ್ತದೆ. ಭವನ ಆಶಯಗಳು ಪೂರ್ಣವಾಗುವುದಿಲ್ಲ.

-ಟಿ.ರತ್ನಾಕರ, ವಾಲ್ಮೀಕಿ ಸಮಾಜದ ಮುಖಂಡ

***

ಸಮುದಾಯ ಭವನಗಳು ಆಯಾ ಸಮಾಜದ ಆಸರೆಯಾಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ಆದರೆ ಸಂಬಂಧಿಸಿದ ಇಲಾಖೆಗಳು ಅವುಗಳ ಉಸ್ತುವಾರಿಯನ್ನು ವಹಿಸುವುದಿಲ್ಲ. ಪರಿಣಾಮವಾಗಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ಕುಸಿಯುತ್ತವೆ ಇಲ್ಲವೇ ಶಿಥಿಲಗೊಳ್ಳುತ್ತವೆ. ಈ ರೀತಿ ಸಾರ್ವಜನಿಕರ ಹಣವನ್ನು ಪೋಲು ಮಾಡಬಾರದು.

-ಸಮೀರ್ ಮಾಲಿಪಾಟೀಲ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT