ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಉಚಿತ ಕಾರ್ಯಾಗಾರಕ್ಕೆ ಶಂಕರ ಬಿದರಿ ಚಾಲನೆ

Last Updated 18 ಅಕ್ಟೋಬರ್ 2022, 14:24 IST
ಅಕ್ಷರ ಗಾತ್ರ

ಕೊಪ್ಪಳ: ‘ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಾದರೂ ಸಮರ್ಥವಾಗಿ ಎದುರಿಸಲು ಹಾಗೂ ಯಶಸ್ಸು ಸಾಧಿಸಲು ಪ್ರಮುಖ ಮೂರು ಸೂತ್ರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಸಿವಿಸಿ ಫೌಂಡೇಷನ್ ಹಾಗೂ ಭೂಮಿ ಎಜುಕೇಶನ್ ಸೊಸೈಟಿ ಸಹಯೋಗದಲ್ಲಿ ನಡೆದ 300 ಪ್ರತಿಭಾವಂತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಮೂರು ತಿಂಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಆತ್ಮವಿಶ್ವಾಸ, ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿ ಶ್ರದ್ಧೆಯಿಂದ ಅಧ್ಯಯನ ಮತ್ತು ನಿಗದಿತ ಕಾಲಾವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ ಗಳಿಸಿಕೊಳ್ಳುವುದು ಯಶಸ್ಸಿಗೆ ಪ್ರಮುಖವಾಗಿ ಬೇಕಾದ ಮೂರು ಸೂತ್ರಗಳು’ ಎಂದು ಅಭಿಪ್ರಾಯಪಟ್ಟರು.

‘ಯಶಸ್ಸು ಬಯಸುವ ಪ್ರತಿ ಅಭ್ಯರ್ಥಿ ಸತತ ಅಧ್ಯಯನ, ಸಿದ್ಧತೆ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ದೇಶದಲ್ಲಿ ಯುಪಿಎಸ್‌ಸಿ ನಡೆಸುವ ಪರೀಕ್ಷೆಗಳಿಗೆ ಕೇಂದ್ರ ಪ್ರತಿವರ್ಷ ಒಂದು ಸಾವಿರ ಜನರ ನೇಮಕ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ಹುದ್ದೆಗಳಿದ್ದು, ಈ ಪೈಕಿ 2.5 ಲಕ್ಷ ಮಾತ್ರ ನೌಕರರು ಇದ್ದಾರೆ. ಆಕಾಂಕ್ಷಿಗಳು ರಾಜ್ಯಕ್ಕಿಂತ ಕೇಂದ್ರ ಸರ್ಕಾರದ ನೌಕರಿ ಆಯ್ಕೆಗೆ ಆದ್ಯತೆ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿವೆ. ಕಳೆದ 20 ವರ್ಷಗಳಿಂದಲೂ ನಡೆಯುತ್ತಲೇ ಇವೆ. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳೇ ಇದಕ್ಕೆ ಕಾರಣ. ನಮ್ಮಂಥ ಹಿರಿಯರು ಮಾಡಿದ ತಪ್ಪಿನ ಫಲವನ್ನು ಇಂದಿನ ಯುವ ಪೀಳಿಗೆ ಅನುಭವಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಸೇವಕ ಸಿ.ವಿ.ಚಂದ್ರಶೇಖರ್ ಮಾತನಾಡಿ ‘ನಾನು ಗ್ರಾಮೀಣ ಪ್ರದೇಶದಿಂದ ಬಂದಿದ್ದು, ಅಲ್ಲಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಷ್ಟ ಮತ್ತು ಅಸಹಾಯಕತೆ ಏನೆಂಬುದನ್ನು ನೋಡಿದ್ದೇನೆ. ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸ್ಥಳೀಯರು ಇದರ ಅನುಕೂಲ ಪಡೆದುಕೊಳ್ಳಬೇಕು. ಉಚಿತ ಎನ್ನುವ ಕಾರಣಕ್ಕೆ ಹಗುರವಾಗಿ ಪರಿಗಣಿಸಬೇಡಿ’ ಎಂದರು.

ಸಿವಿಸಿ ಫೌಂಡೇಷನ್‌ ನೇತೃತ್ವ ವಹಿಸಿರುವ ಬಸವರಾಜ್‌ ಚಂದ್ರಶೇಖರ್‌, ಸಮಿತಿ ಸದಸ್ಯ ವಿ.ಎಂ. ಭೂಸನೂರಮಠ್, ಪ್ರೊ. ಪರೀಕ್ಷಿತ್‍ರಾಜ್, ಸಾಹಿತಿಗಳಾದ ಈಶ್ವರ್ ಹತ್ತಿ, ವಕೀಲರಾದ ರಾಘವೇಂದ್ರ ಪಾನಘಂಟಿ, ಮುಖಂಡರಾದ ಶಾಂತಣ್ಣ ಮುದಗಲ್, ಬಸವರಾಜ್ ಬೊಳ್ಳೊಳ್ಳಿ, ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಕನೂರಿನ ಅನ್ನದಾನೇಶ್ವರ ಮಠದ ಮಹಾದೇವರು ಹಾಗೂ ಆತ್ಮಾನಂದ ಮಹಾಸ್ವಾಮೀಜಿ, ದದೇಗಲ್ ಪಾಲ್ಗೊಂಡಿದ್ದರು.

ಫೌಂಡೇಶನ್ ಸಂಚಾಲಕ ಮೌನೇಶ್ ಕಿನ್ನಾಳ, ಶಿಕಾರಿಪುರದ ಸಾಧನಾ ಅಕಾಡೆಮಿಯ ಗೌರವ ಮಾರ್ಗದರ್ಶಕ ಮಂಜುನಾಥ ಬಿ, ಮಂಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಭೀಮಪ್ಪ ಎಚ್. ಗೊಲ್ಲರ, ಧಾರವಾಡದ ಸ್ಪರ್ಧಾ ಜಿನೀಯಸ್‍ನ ಸಂಸ್ಥಾಪಕ ಅಧ್ಯಕ್ಷ ಸಿದ್ದಣ್ಣ ದಳವಾಯಿ ಹಾಗೂ ಆನಲೈನ್ ಅನ್‍ಅಕಾಡೆಮಿಯ ಮಹೇಶ್ ಕೆ ಪಟ್ಟೇದ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಶ್ರೀಮಂತರು ತಮ್ಮ ಮಕ್ಕಳಿಗೆ ಲಕ್ಷಾಂತರ ಹಣ ವಂತಿಕೆ ಕೊಟ್ಟು ದೊಡ್ಡ ಸಂಸ್ಥೆಗಳಲ್ಲಿ ತರಬೇತಿ ಕೊಡಿಸಬಹುದು. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳು ನಾಟಿಕೋಳಿ ಇದ್ದಂತೆ. ಫಾರಂ ಕೋಳಿಗಳಿಗೆ ನಾಟಿಕೋಳಿ ಜೊತೆ ಪೈಪೋಟಿ ನಡೆಸಲು ಆಗುವುದಿಲ್ಲ.
ಶಂಕರ್ ಬಿದರಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT