ಕೊಪ್ಪಳ: ‘ತಾಲ್ಲೂಕಿನ ನಾರಾಯಣ ಪೇಟೆ ಗ್ರಾಮದ ತುಂಗಭದ್ರಾ ನದಿ ಅಂಚಿನಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಜಾಗದಲ್ಲಿ ಹಂಪಿ ಬೌಲ್ಡರ್ಸ್ ಎನ್ನುವ ರೆಸಾರ್ಟ್ ಅಕ್ರಮವಾಗಿ ನಿರ್ಮಾಣ ಮಾಡಿದ್ದರೂ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಸಿಬಿಐಗೆ ದೂರು ನೀಡಿದ್ದಾರೆ.
‘ಅಂದಾಜು 100 ಎಕರೆ ಜಾಗವನ್ನು ವಲ್ಲಭಚಂದ್ರ ಎಂಬುವರು ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅತುಲ್ ’ರೆಸಾರ್ಟ್ ತೆರವು ಮಾಡಬೇಕು’ ಎಂದು ಆದೇಶಿಸಿದ್ದರೂ ತೆರವಾಗಿಲ್ಲ. ಈಗ ಅವರೇ ರೆಸಾರ್ಟ್ ಮಾಲೀಕರ ಜೊತೆ ಶಾಮಿಲಾದ ಅನುಮಾನವಿದೆ. ಕಾಲಹರಣ ಮಾಡಲು ಮತ್ತೊಮ್ಮೆ ರೆಸಾರ್ಟ್ ಸರ್ವೆಗೆ ಆದೇಶಿಸಿದ್ದಾರೆ’ ಎಂದು ಕಲ್ಲಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಹಿಂದೆ ಅರಣ್ಯ ಭೂಮಿ ಸರ್ವೆ ಮಾಡಿರುವುದು ಸರಿಯಾಗಿಲ್ಲ. ಆದ್ದರಿಂದ ಮತ್ತೊಂದು ಬಾರಿ ಸರ್ವೆ ಮಾಡುವಂತೆ ರೆಸಾರ್ಟ್ ಮಾಲೀಕರು ತಕರಾರು ಅರ್ಜಿ ನೀಡಿದ್ದಾರೆ. ಹೀಗಾಗಿ ಮರುಸರ್ವೆಗೆ ಆದೇಶಿಸಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.