ಭಾನುವಾರ, ಡಿಸೆಂಬರ್ 8, 2019
25 °C
ಕುಷ್ಟಗಿ ಪುರಸಭೆ ಕಾಂಗ್ರೆಸ್‌ ಸದಸ್ಯ ಮೈನುದ್ದೀನ್ ಮುಲ್ಲಾ ಆರೋಪ

ಸ್ವಚ್ಛತಾ ಅಭಿಯಾನಕ್ಕೆ ಬಿಜೆಪಿ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕೆಲಸಕ್ಕೆ ಬಂದಿದ್ದ ಜನರನ್ನು ಪ್ರಚೋದಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಮತ್ತು ಕೆಲ ಮುಖಂಡರು ಗೊಂದಲ ಸೃಷ್ಟಿಸಿದರು’ ಎಂದು ಪುರಸಭೆ ಸದಸ್ಯ ಮೈನುದ್ದೀನ್ ಮುಲ್ಲಾ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಾಂದೋಲನದ ಮಾದರಿಯಲ್ಲಿ ಪಟ್ಟಣವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ವ್ಯವಸ್ಥೆಯ ಬಗ್ಗೆ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹೆಚ್ಚಿನ ಮುತುವರ್ಜಿ ವಹಿಸಿದ್ದರೆ ಹೊರತು ಇದರಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. ಆದರೆ, ಶಾಸಕರ ವರ್ಚಸ್ಸು ಹೆಚ್ಚುತ್ತದೆ ಎಂಬ ಅಳುಕಿನಿಂದ, ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಅಪಪ್ರಚಾರ ನಡೆ ಸುವ ಮೂಲಕ ಕಾರ್ಯಕ್ರಮ ಅಸ್ತವ್ಯಸ್ತ ಗೊಳಿಸುವ ಹುನ್ನಾರ ನಡೆಸಿದರು ಎಂದು ದೂರಿದರು.

‘ಪುರಸಭೆಯಿಂದ ಅಭಿಯಾನ ನಡೆ ದರೂ ಕೆಲ ಗ್ರಾಮಗಳ ಜನರನ್ನು ಕೆಲಸಕ್ಕೆ ಕರೆತರಲಾಗಿತ್ತು. ಅವರಿಗೆ ಸುಮಾರು ₹ 3 ಲಕ್ಷದಷ್ಟು ಕೂಲಿ ಹಣವನ್ನು ಶಾಸಕ ಬಯ್ಯಾಪುರ ಸ್ವತಃ ಪಾವತಿಸಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಡೆಯಿತು. ಇನ್ನೂ ಕೆಲವೆಡೆ ಕೆಲಸ ನಡೆಯು ವಷ್ಟರಲ್ಲಿ ಬಿಜೆಪಿಯವರು ಅಡೆತಡೆ ಉಂಟು ಮಾಡಿದರು’ ಎಂದು ಅವರು ಆರೋಪಿದರು.

‘ಕೆಲಸಕ್ಕೆ ಕರೆತಂದ ಜನರಿಗೆ ಚರಂಡಿಯಲ್ಲಿನ ಕೊಳಚೆಯನ್ನು ತೆಗೆಯುವಂತೆ ಅಧಿಕಾರಿಗಳು ಅಥವಾ ಪುರಸಭೆ ಸದಸ್ಯರಲ್ಲಿ ಯಾರೂ ಹೇಳಿಲ್ಲ. ರಸ್ತೆ ಅಕ್ಕಪಕ್ಕದಲ್ಲಿನ ಒಣ ಕಸ, ಗಿಡಗಂಟೆಗಳನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಲಾಗಿತ್ತು. ಕೈ ಗವಸು ಮತ್ತು ಮುಖಕ್ಕೆ ಮಾಸ್ಕ್‌ಗಳನ್ನು ನೀಡಲಾಗಿತ್ತು. ಆದರೂ ಪ್ರಚೋದನೆಗೆ ಒಳಗಾದ ಕೆಲ ಜನರು ಇತರರನ್ನೂ ಕೆಲಸ ಮಾಡದಂತೆ ಮಾಡಿದರು. ಕೆಲಸ ಮಾಡದಿದ್ದರೂ ಬಂದ ಎಲ್ಲ ಕೂಲಿಕಾರರಿಗೂ ಹಣ ಪಾವತಿಸಲಾಗಿದೆ. ಉಪಹಾರದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು’ ಎಂದರು.

ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ನಗರದಲ್ಲಿ ಸ್ವಚ್ಛತಾ ಅಭಿಯಾನ ಇಷ್ಟಕ್ಕೆ ನಿಲ್ಲುವುದಿಲ್ಲ. ಎಲ್ಲ ವಾರ್ಡ್‌ಗಳಲ್ಲಿ ಪುನಃ ಸ್ವಚ್ಛತಾ ಕೆಲಸವನ್ನು ಆರಂಭಿಸಲು ಶಾಸಕ ಅಮರೇಗೌಡ ಬಯ್ಯಾಪುರ ಛಲ ಹೊಂದಿದ್ದಾರೆ.  ಅದಕ್ಕೆ ತಗಲುವ ಅಂದಾಜು ₹ 10 ಲಕ್ಷ ಖರ್ಚನ್ನು ಅವರೇ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಅಂಬಣ್ಣ ಭಜಂತ್ರಿ, ಮೆಹಬೂಬಸಾಬ್ ಕಮ್ಮಾರ, ರಾಮಣ್ಣ ಬಿನ್ನಾಳ, ಪ್ರಮುಖರಾದ ಮಹೇಶ ಕೋಳೂರು, ಶರಣಪ್ಪ ತುರಕಾಣಿ, ಶೌಕತ ಕಾಯಿಗಡ್ಡಿ, ಬಾವುದ್ದೀನ ಬಾವಾಖಾನ ಇದ್ದರು.

ಪ್ರತಿಕ್ರಿಯಿಸಿ (+)