ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಷಡ್ಯಂತ್ರ ತಿರುಗುಬಾಣವಾಗಲಿದೆ: ಖೂಬಾ

Last Updated 31 ಮಾರ್ಚ್ 2023, 6:17 IST
ಅಕ್ಷರ ಗಾತ್ರ

ಕೊಪ್ಪಳ: ಒಳ ಮೀಸಲಾತಿ ವಿಷಯ ಮುಂದಿಟ್ಟುಕೊಂಡು ರಾಜಕೀಯ ಷಡ್ಯಂತ್ರ ಮಾಡುತ್ತಿರುವ ಕಾಂಗ್ರೆಸ್‌ಗೆ ತನ್ನ ತಂತ್ರಗಾರಿಕೆಯೇ ತಿರುಗುಬಾಣವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ್‌ ಖುಬಾ ಹೇಳಿದರು.

ಇಲ್ಲಿ ಶುಕ್ರವಾರ ಗವಿಸಿದ್ಧೇಶ್ವರ ಮಠದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಇದರ ಪ್ರತಿಫಲ ಚುನಾವಣೆಯಲ್ಲಿ ಸಿಗಲಿದೆ. ತುಳಿತಕ್ಕೆ ಒಳಗಾದ ಸಮಾಜಗಳ ಬೇಡಿಕೆಯನ್ನು ಈಡೇರಿಸಿದವರ ಪರವಾಗಿ ಆ ಸಮುದಾಯದವರು ನಿಲ್ಲುತ್ತಾರೆ. ಇದನ್ನು ಸಹಿಸಿಕೊಳ್ಳಲು ಆಗದೇ ಕಾಂಗ್ರೆಸ್‌ನವರು ತುಷ್ಠೀಕರಣದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮುಸ್ಲಿಮರಿಗಿದ್ದ ಶೇ 4 ಮೀಸಲಾತಿ ರದ್ದು ಮಾಡಿ ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ. ಈ ಸಮುದಾಯಕ್ಕೆ ಹಿಂದೆ ನೀಡಲಾಗಿದ್ದ ಮೀಸಲಾತಿ ಸಂಪೂರ್ಣ ಅಸಂವಿಧಾನಿಕ. ತುಷ್ಠೀಕರಣದ ರಾಜಕಾರಣಕ್ಕೆ ಹೀಗೆ ಮಾಡಲಾಗಿತ್ತು. ಒಳ ಮೀಸಲಾತಿಯಿಂದಾಗಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ. ಬಸವರಾಜ ಬೊಮ್ಮಾಯಿ ನ್ಯಾಯ ಕೊಟ್ಟಿದ್ದಾರೆ. ಜೇನುಗೂಡಿಗೆ ಕೈ ಹಾಕಿ ಬೊಮ್ಮಾಯಿ ಹಿಂದುಳಿದ ಜನರಿಗೆ ನ್ಯಾಯ ಒದಗಿಸಿದ್ದಾರೆ‘ ಎಂದರು.

‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಯಿತು. ಆದರೆ, ಇದಕ್ಕೆ ಪ್ರಚೋದನೆ ಕೊಟ್ಟಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ ನಾಯಕರ ಪ್ರಚೋದನೆಯಿಂದಾಗಿ ಆ ಪಕ್ಷದ ಕಾರ್ಯಕರ್ತರು ಕಲ್ಲು ತೂರಾಡಿದರು’ ಎಂದು ಆರೋಪಿಸಿದರು.

’ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದಾಕ್ಷಣ ನಾವು ಮಾಡಬೇಕು ಎಂದೇನಿಲ್ಲ. ನಮ್ಮಲ್ಲಿ ಒಂದಷ್ಟು ನಿಯಮಗಳು ಇದ್ದು, ಅದರ ಪ್ರಕಾರ ಚರ್ಚಿಸಿ ಸಂಸದೀಯ ಮಂಡಳಿ ಟಿಕೆಟ್‌ ನಿರ್ಧರಿಸಲಿದೆ. ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ’ ಎಂದರು.

‘ಯಾವ ಸಮೀಕ್ಷೆಗಳು ಏನು ಬೇಕಾದರೂ ಹೇಳಲಿ, ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT