ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಧರ್ಮ ಗ್ರಂಥಗಳಿಗಿಂತಲೂ ಶ್ರೇಷ್ಠ: ಬಸವರಾಜ ಶೀಲವಂತರ

ಕೊಪ್ಪಳದ ವಿವಿಧೆಡೆ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮ
Last Updated 27 ನವೆಂಬರ್ 2022, 2:56 IST
ಅಕ್ಷರ ಗಾತ್ರ

ಕೊಪ್ಪಳ: ‘ಭಾರತದ ಸಂವಿಧಾನ ಎಲ್ಲ ಧರ್ಮ ಗ್ರಂಥಗಳಿಗಿಂತಲೂ ಶ್ರೇಷ್ಠವಾದದ್ದು. ಅದನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಕೂಡ ಆದರ್ಶ’ ಎಂದು ಪ್ರಗತಿಪರ ಹೋರಾಟಗಾರ ಬಸವರಾಜ ಶೀಲವಂತರ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ನಡೆದ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ ‘ಅಂಬೇಡ್ಕರ್ ಅವರು ತಳ ಸಮುದಾಯದಲ್ಲಿ ಹುಟ್ಟಿ ಪ್ರಪಂಚವೇ ತಿರುಗಿ ನೋಡುವಂತೆ ಬೆಳೆದ ಪರಿ ಅದ್ಭುತ. ಅಂಬೇಡ್ಕರ್ ಅವರ ಓದು, ಜ್ಞಾನ, ಬದುಕು, ವಿಚಾರಗಳನ್ನು ಪ್ರಪಂಚವೇ ಒಪ್ಪಿಕೊಂಡಿದೆ’ ಎಂದರು.

ಪತ್ರಕರ್ತ ಸಿರಾಜ್ ಬಿಸರಳ್ಳಿ ಮಾತನಾಡಿ ‘ಸಂವಿಧಾನ ಸಮರ್ಪಣಾ ದಿನ ವಿಶಿಷ್ಟವಾದದ್ದು. ದೇಶವನ್ನು ಮುನ್ನಡೆಸುತ್ತಿರುವ ಸಂವಿಧಾನದ ಈ ದಿನವನ್ನು ದೇಶವೇ ಸಂಭ್ರಮಿಸಬೇಕು. ಪ್ರಸ್ತುತ ದೇಶದಲ್ಲಿ ವಿವಿಧೆಡೆಗಳಲ್ಲಿ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಗಳು ಖಂಡನೀಯ’ ಎಂದರು.

ಹೋರಾಟಗಾರರಾದ ಡಿ.ಎಚ್.ಪೂಜಾರ, ಮಂಜುನಾಥ ದೊಡ್ಡಮನಿ, ಮಾರ್ಕಂಡೇಯ ಬೆಲ್ಲದ್, ಶರಣಪ್ಪ ಹಂಚಿನಮನಿ, ಚಂದ್ರಕಾಂತ್ ಇಟ್ಟಂಗಿ, ಮಹಾವೀರ ಜೈನ್ ಇದ್ದರು.

ಆಚರಣೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಸಂವಿಧಾನದ ಪೀಠಿಕೆ’ ಓದುವ ಮೂಲಕ ಸಂವಿಧಾನ ದಿನ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ ಸಂವಿಧಾನದ ಪೀಠಿಕೆ ಬೋಧಿಸಿದರು. ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಸೇರಿದಂತೆ ಅನೇಕರು ಇದ್ದರು.

ಸಂವಿಧಾನ ದಿನ: ಭಾಗ್ಯನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮಗ್ರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಉದ್ಯಮಿ ಶ್ರೀನಿವಾಸ್‌ ಗುಪ್ತಾ ಮಾತನಾಡಿ ‘ಯಾವುದೇ ತಾಂತ್ರಿಕ ಸವಲತ್ತುಗಳು ಇಲ್ಲದಿದ್ದ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ್ದು ದೊಡ್ಡ ಪವಾಡವೇ ಸರಿ’ ಎಂದು ಸ್ಮರಿಸಿದರು.

ಬರಹಗಾರ ಸಿರಾಜ್ ಬಿಸರಳ್ಳಿ, ಕೃಷ್ಣ ಇಟ್ಟಂಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಪರಶುರಾಮ, ಹೊನ್ನೂರಸಾಬ ಬೈರಾಪೂರ, ಕೊಟ್ರೇಶ್ ಶೆಡ್ಮಿ, ನಾಗರಾಜ್, ಸುರೇಶ ದರಗದಕಟ್ಟಿ, ಸಂಘದ ಅಧ್ಯಕ್ಷ ಚಂದ್ರು ಇಟ್ಟಂಗಿ, ಗೌರವಾಧ್ಯಕ್ಷ ಶರಣಪ್ಪ ಹಂಚಿನಮನಿ, ಉಪಾಧ್ಯಕ್ಷ ಪುತ್ರಪ್ಪ ಕಟ್ಟಿಮನಿ, ಸಂಜಯ್ ತೆಗ್ಗಿನಮನಿ ಪಾಲ್ಗೊಂಡಿದ್ದರು.

‘ಪ‍್ರತಿಭೆ ಯಾರ ಸ್ವತ್ತಲ್ಲ‘

ಕೊಪ್ಪಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ನೆಹರು ಯುವ ಕೇಂದ್ರ, ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ರಾಜ್ಯ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಶಿವರಡ್ಡಿ ಭೂಮಕ್ಕನವರ ಉದ್ಘಾಟಿಸಿದರು.

ಬಳಿಕ ಮಾತನಾಡಿ ‘ಪ್ರತಿಭೆ ಎನ್ನುವದು ಯಾರ ಸ್ವತ್ತಲ್ಲ, ಎಲ್ಲರಲ್ಲೂ ಒಂದೊಂದು ಗುಣಗಳು ಇರುತ್ತವೆ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳು ಮುಂದೆ ಬರಬೇಕು’ ಎಂದರು.

ಡಾ. ಪ್ರಭುರಾಜ ನಾಯಕ್ ಸಂವಿಧಾನ ಪೀಠಿಕೆ ಓದಿಸಿ, ಉಪನ್ಯಾಸ ನೀಡಿ ‘ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಲು ಬಾಬಾಸಾಹೇಬರು ಪಟ್ಟಶ್ರಮಕ್ಕೆ ಸರಿಸಾಟಿಯಿಲ್ಲ’ ಎಂದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ, ಮಂಜುನಾಥ ಜಿ. ಗೊಂಡಬಾಳ, ನೆಹರು ಯುವ ಕೇಂದ್ರದ ಶರಣು ವಿವೇಕಿ, ಉಪನ್ಯಾಸಕರಾದ ಡಾ. ಶುಭಾ, ಡಾ. ಗಾಯತ್ರಿ, ಡಾ. ವಾರುಣಿ, ಡಾ. ಸಂತೋಷಕುಮಾರಿ, ಡಾ. ರಶ್ಮಿ, ಡಾ. ಶಿವನಾಥ ಇ.ಜಿ., ಭೀಮೇಶ, ಅನಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT