ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ: ಭಿನ್ನಮತ ಇಲ್ಲ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಂಪುಟ ಸಹೋದ್ಯೋಗಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಿರಿಯಾಪಟ್ಟಣದಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು.

ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿರುವ ಸಚಿವ ಬಸವರಾಜ ರಾಯರಡ್ಡಿ, ‘ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಕುರಿತು ನಮ್ಮಲ್ಲಿ ಗೊಂದಲವಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಗುರುವಾರ ತಾತ್ವಿಕ ಚರ್ಚೆ ನಡೆದಿದೆ. ಆದರೆ, ಯಾರೂ ರಾಜೀನಾಮೆ ಕೊಡುವ ಹಂತಕ್ಕೆ ಹೋಗಲಿಲ್ಲ’ ಎಂದಿದ್ದಾರೆ.

‘ಪ್ರತ್ಯೇಕ ಧರ್ಮದ ವರದಿಯ ಪರ– ವಿರುದ್ಧದ ನಿಲುವಿನಿಂದಾಗಿ ಕೆಲವು ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವರದಿಯನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರೂ ನಿರಾಕರಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗುರುವಾರ ಸಚಿವ ಸಂಪುಟದ ಸಭೆ ನಡೆದಿತ್ತು. ಸಮಯದ ಅಭಾವದ ಕಾರಣ ಚರ್ಚೆ ಪೂರ್ಣಗೊಂಡಿಲ್ಲ. ಮತ್ತೆ ಚರ್ಚೆ ಮುಂದುವರಿಸಲಾಗುವುದು’ ಎಂದರು.

ವೀರಶೈವ– ಲಿಂಗಾಯತರ ಬೇಡಿಕೆ: ‘ಪ್ರತ್ಯೇಕ ಧರ್ಮ ಬೇಡಿಕೆ ವೀರಶೈವ– ಲಿಂಗಾಯತ ಸಮುದಾಯದಿಂದಲೇ ಬಂದಿದೆ. ಮುಖ್ಯಮಂತ್ರಿ ಈ ಪ್ರಸ್ತಾವನೆ ಇಟ್ಟಿಲ್ಲ. ಅವರು ಧರ್ಮ ಒಡೆಯುತ್ತಿಲ್ಲ’ ಎಂದು ರಾಯರೆಡ್ಡಿ ಹೇಳಿದ್ದಾರೆ.

‘ಬಹುದೇವೋಪಾಸನೆ, ಮೂರ್ತಿ ಪೂಜೆ ನಮ್ಮಲಿಲ್ಲ. ಹೀಗಾಗಿ ಪ‍್ರತ್ಯೇಕ ಧರ್ಮ ಮಾನ್ಯತೆ ಕೇಳುತ್ತಿದ್ದೇವೆ. ಋಗ್ವೇದದ ಪ್ರಕಾರ ವೀರಶೈವರು ಲಿಂಗಾ
ಯತರಲ್ಲ, ಹಿಂದೂಗಳು. ಇದರಿಂದಾಗಿಯೇ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಪಡೆಯಬೇಕಾದರೆ ಲಿಂಗಾಯತ ಧರ್ಮ ಎಂದೇ ಹೆಸರಿಸಬೇಕು. ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಪಂಚಾಚಾರ್ಯರು ವೀರಶೈವ ಪದದ ಮೇಲಿನ ವ್ಯಾಮೋಹ ಬಿಟ್ಟು ಸಮಾಜದ ಹಿತದೃಷ್ಟಿಯಿಂದ ಸಹಕಾರ ಕೊಟ್ಟರೆ ಅಲ್ಪಸಂಖ್ಯಾತ ಮಾನ್ಯತೆ ಸಿಗಲಿದೆ’ ಎಂದು ಅವರು ಮನವಿ ಮಾಡಿದ್ದಾರೆ.

ದಾರಿ ತಪ್ಪಿಸುತ್ತಿರುವ ಪಂಚಾಚಾರ್ಯರು: ಲಿಂಗಾಯತ ಸ್ವತಂತ್ರ ಧರ್ಮವಾದರೆ ತಮ್ಮ ಅಸ್ತಿತ್ವವೇ ಹೋಗಿಬಿಡುತ್ತದೆ ಎಂದು ಪಂಚಾಚಾರ್ಯರು ಮತ್ತು ಅವರೊಂದಿಗೆ ಗುರುತಿಸಿಕೊಂಡಿರುವ ಬಸವ ತತ್ವ ವಿರೋಧಿಸುವ ಕೆಲವು ವಿರಕ್ತ ಸ್ವಾಮಿಗಳು ಭಾವಿಸಿದ್ದಾರೆ. ಹೀಗಾಗಿ, ಅವರು ಲಿಂಗವಂತರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.

‘ತಜ್ಞರ ಸಮಿತಿಯ ವರದಿಯು ವಸ್ತುನಿಷ್ಠವಾಗಿದೆ. ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ಅಥವಾ ಸ್ವತಂತ್ರ ಧರ್ಮ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಪ್ರತ್ಯೇಕ ಧರ್ಮದ ಹೋರಾಟವನ್ನು ವಿರೋಧಿಸುತ್ತಾ ಬಂದಿರುವ ಪಟ್ಟಭದ್ರರ ಮಾತಿಗೆ ಬೆಲೆ ಕೊಡಬಾರದು’ ಎಂದು ಆಗ್ರಹಿಸಿದ್ದಾರೆ.

‘ದಿಟ್ಟ ನಿಲುವು ತಳೆಯಿರಿ’: ‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಖ್ಯಮಂತ್ರಿಯವರು ದಿಟ್ಟ ನಿಲುವು ತೆಗೆದುಕೊಳ್ಳಬೇಕು. ಕೆಲವು ಸಚಿ
ವರು ರಾಜೀನಾಮೆ ರಾಜಕೀಯ ಮಾಡದೇ, ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಮುರುಘಾಮಠದ ಶಿವಮೂರ್ತಿ ಶರಣರು ಒತ್ತಾಯಿಸಿದ್ದಾರೆ.

‘ವಿರೋಧ ಸಲ್ಲದು’: ‘ರಾಜ್ಯ ಸರ್ಕಾರ ಸ್ವತಂತ್ರ ಧರ್ಮ ಮಾನ್ಯತೆ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT