ಗುರುವಾರ , ಜೂನ್ 17, 2021
23 °C
ಸಂಸದ ಸಂಗಣ್ಣ ಕರಡಿ ಮನವಿಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸ್ಪಂದನೆ

100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 100 ಹಾಸಿಗೆಯ ಆಮ್ಲಜನಕ ಹೊಂದಿದ ಕೋವಿಡ್ ಆಸ್ಪತ್ರೆಯ ಸ್ಥಾಪನೆ ಅಗತ್ಯ ಇದ್ದು, ಇದಕ್ಕೆ ತಕ್ಷಣ ಅನುಮೋದನೆ ನೀಡಬೇಕು’ ಎಂದು ಸಂಸದ ಸಂಗಣ್ಣ ಕರಡಿ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ಗೆ ಮನವಿ ಮಾಡಿದರು.

ಬಳ್ಳಾರಿಯ ಜಿಂದಾಲ್‌ಗೆ ಹೋಗುವ ಸಂದರ್ಭದಲ್ಲಿ ಶನಿವಾರ ನಗರದ ಸರ್ಕೀಟ್ ಹೌಸ್‌ನಲ್ಲಿ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ನೀಡಿ, ಜನರ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆ ಸ್ಥಾಪನೆ ಕುರಿತು ಚರ್ಚಿಸಿದರು.

ನಮ್ಮಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಬಲವಾಗಿ ಹರಡುತ್ತಿದೆ ಮತ್ತು ಸಾರ್ವಜನಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಆಮ್ಲಜನಕ ಪೂರೈಕೆಯೊಂದಿಗೆ 100 ಹಾಸಿಗೆ ಆಸ್ಪತ್ರೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಸಚಿವರ ಸೂಚನೆ: ಸಚಿವ ಶೆಟ್ಟರ್ ಮನವಿಗೆ ಸ್ಪಂದಿಸಿ ಕಲ್ಯಾಣಿ ಕೈಗಾರಿಕಾ ಪ್ರದೇಶದಲ್ಲಿ ಆಮ್ಲಜನಕ್ ಸಹಿತ 100 ಹಾಸಿಗೆಯ ಸಾಮರ್ಥ್ಯದ ಕೋವಿಡ್-19 ತಾತ್ಕಾಲಿಕ ಆಸ್ಪತ್ರೆಯನ್ನು ಜಿಂದಾಲ್ ಕಂಪನಿ ಮಾದರಿಯಲ್ಲಿ ಆರಂಭಿಸಲು ಸ್ಥಳದಲ್ಲಿದ್ದ ಕಂಪೆನಿಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಕಾರ್ಖಾನೆ ಸಿಇಒ ರತ್ನಪ್ರಸಾದ ಒಪ್ಪಿಗೆ ನೀಡಿದ್ದು, ಜಿಲ್ಲಾಡಳಿತದ ಸಹಕಾರದೊಂದಿಗೆ ಆಸ್ಪತ್ರೆ ಸ್ಥಾಪನೆ ಮಾಡಲಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿರುವರು.

ಸ್ವಯಂ ನಿರ್ಬಂಧಕ್ಕೆ ಸಚಿವ ಮನವಿ: ‘ಸರ್ಕಾರ ಮೇ 10 ರಿಂದ ಲಾಕ್‌ಡೌನ್‌ಗೆ ಸೂಚಿಸಲಾಗಿದೆ. ಹೊಸ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ನಾವು ಎಷ್ಟೇ ನಿಯಂತ್ರಣ ಮಾಡಿದರೂ ಜನರ ಸ್ವಯಂ ನಿಯಂತ್ರಣ ಅತ್ಯಂತ ಮಹತ್ವದ್ದು, ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಆಮ್ಲಜನಕ ಲಭ್ಯತೆ, ನಿರ್ವಹಣೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ನನಗೆ ಸರ್ಕಾರ ಜವಾಬ್ದಾರಿ ನೀಡಿದೆ. ಕಾರಣ ಜಿಲ್ಲೆಯ ಆಮ್ಲಜನಕ ಉತ್ಪಾದನೆ ಮಾಡುವ ಕಾರ್ಖಾನೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದು ಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಕೊರೊನಾಕ್ಕೆ ಮನೆಯೇ ಮದ್ದು, ಮಾಸ್ಕ್‌ ಹಾಕಿಕೊಳ್ಳಬೇಕು. ದೈಹಿಕ ಅಂತರ, ಸ್ಯಾನಿಟೈಜೇಷನ್‌ ಸೇರಿದಂತೆ ನಿಯಮಗಳನ್ನು ಅನುಸರಿಸಬೇಕು. ಪ್ರತಿಪಕ್ಷಗಳು ರಾಜಕೀಯ ಮಾಡುತ್ತ ಕಾಲಹರಣ ಮಾಡುತ್ತಾ ಕುಳಿತಿವೆ. ಏನಾದರೂ ಸಕಾರಾತ್ಮಕ ಸಲಹೆಗಳಿದ್ದರೆ ನೀಡಲಿ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಅದು ಬಿಟ್ಟು ಮೂರು ಹೊತ್ತು ಟೀಕೆ ಸರಿಯಲ್ಲ ಎಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರು ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.