ತುಂಡು ಗುತ್ತಿಗೆ ಅವ್ಯವಹಾರ: ಆರೋಪ

ಗಂಗಾವತಿ: ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಹನುಮಂತ ಮೂಳೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
2020-21ನೇ ಸಾಲಿನ ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನದಲ್ಲಿ ಅಂಗವಿಕಲರಿಗಾಗಿ ಶೇ 5 ರಷ್ಟು ಕಾಯ್ದಿರಿಸಲಾಗಿದೆ. ಈ ಅನುದಾನದಲ್ಲಿ ಅಂಗವಿಕಲರಿಗೆ ಸಿ.ಸಿ ರಸ್ತೆ, ತಾ.ಪಂ. ಮಂಥನ ಸಭಾಂಗಣದ ಎರಡು ದ್ವಾರಗಳಿಗೆ ರ‍್ಯಾಂಪ್ ನಿರ್ಮಾಣ ಹಾಗೂ ಸಾಮರ್ಥ್ಯ ಸೌಧಕ್ಕೆ ಮತ್ತು ಸಿ.ಸಿ ರಸ್ತೆ, ಶಾಸಕರ ಕಚೇರಿಯ ವಿದ್ಯುತ್ ಕಾಮಗಾರಿ ಹಾಗೂ ಶೌಚಾಲಯ ದುರಸ್ತಿ ಮತ್ತು ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದರು.
ವೆಚ್ಚ ಮಾಡಿದ ಕಾಮಗಾರಿಗಳಿಗೆ ಕಳಪೆ ಗುಣಮಟ್ಟದ ಸಿಮೆಂಟ್, ಕಲ್ಲು, ಕಬ್ಬಿಣ ಬಳಕೆ ಮಾಡಲಾಗಿದೆ. ತುಂಡು ಗುತ್ತಿಗೆ ಕಾಮಗಾರಿಗಳಲ್ಲಿ ಕೆಲವು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿಗೆ ಸಹಕರಿಸಿ ಹಣವನ್ನು ದೊಚಿದ್ದಾರೆ. ಈ ಕುರಿತು ತಾಲ್ಲೂಕು ಪಂಚಾಯಿತಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರು ಸಹ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ತುಂಡು ಗುತ್ತಿಗೆ ಕಾಮಗಾರಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಮನವಿ ಸಲ್ಲಿಸಿದರು. ಅಬ್ದುಲ್, ಪರಶುರಾಮ ಅಮರಾವತಿ, ಶಿವಪ್ಪ ವಿನೋಬ ನಗರ ಹಾಗೂ ಕೆ.ಎಚ್.ವೆಂಕಟೇಶ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.