ಬಸಾಪೂರ (ಯಲಬುರ್ಗಾ): ‘ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಹೋದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗ ಬೇಕಾಗುತ್ತದೆ. ಕೊರೊನಾದಿಂದ ಬಳಲಬೇಕಾಗುತ್ತದೆ’ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.
ತಾಲ್ಲೂಕಿನ ಬಸಾಪೂರ ಗ್ರಾಮದಲ್ಲಿ ಬುಧವಾರ ನಡೆದ ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಲಸಿಕೆ ನೀಡುವುದು ಜನರ ಆರೋಗ್ಯ ರಕ್ಷಣೆಗಾಗಿ ಹೊರತು ಅವರಿಗೆ ತೊಂದರೆ ಕೊಡುವುದಕ್ಕಾಗಿ ಅಲ್ಲ. ಲಸಿಕಾ ಶಿಬಿರದ ಪ್ರಯೋಜನೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ವಿವಿಧ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದಿರುತ್ತಾರೆ. ಅಲ್ಲಿ ಹೋಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿ,‘ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು’ ಎಂದು ಹೇಳಿದರು.
ಬಂಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ, ಅಂಗನವಾಡಿ ಮೇಲ್ವಿಚಾರಕಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
‘ಲಸಿಕೆ: ಜಾಗೃತಿ ಅಗತ್ಯ’
ಮಿಯಾಪೂರ (ಹನುಮಸಾಗರ): ‘ಸರ್ಕಾರ ಉಚಿತವಾಗಿ ಮನೆ ಬಾಗಿಲಿಗೆ ಬಂದು ಕೋವಿಡ್ ಲಸಿಕೆ ನೀಡುತ್ತಿದ್ದು, ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಇತರರಿಗೆ ಜಾಗೃತಿ ಮೂಡಿಸಬೇಕು’ ಎಂದು ಮುಖಂಡ ದೊಡ್ಡ ಬಸವರಾಜ್ ತಲೆಮಟ್ಟಿ ಹೇಳಿದರು.
ಸಮೀಪದ ಮಿಯಾಪೂರ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಕೋವಿಡ್ ಲಸಿಕಾ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಲಸಿಕೆ ಪಡೆದಾಗ ಮಾತ್ರ ಕೋವಿಡ್‌ನಿಂದ ದೂರ ಇರಲು ಸಾಧ್ಯವಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಮನೆಗಳಲ್ಲಿ ಮಾಹಿತಿ ನೀಡಿ ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವೆಂಕಟೇಶ ನಾಯಕ, ರಾಜೇಶ ಜೋಗಿನ, ಪ್ರಮುಖರಾದ ಚನ್ನಬಸವರಾಜ ಮಿಯಾಪುರ, ಸಾವಿತ್ರಿ ಹಿರೇಮಠ ಹಾಗೂ ಶಿಲ್ಪಾ ಹಿರೇಮಠ ಇದ್ದರು.
‘ವದಂತಿಗೆ ಕಿವಿಗೊಡಬೇಡಿ’
ಮುಧೋಳ (ಯಲಬುರ್ಗಾ): ‘ಕೋವಿಡ್ ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡದೆ, ಎಲ್ಲರೂ ಲಸಿಕೆ ಪಡೆಯಬೇಕು’ ಎಂದು ಮುಧೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫಕೀರಪ್ಪ ಕಟ್ಟಿಮನಿ ಹೇಳಿದರು.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಕುರಿತು ಜಾಗೃತಿ ಮೂಡಿಸಿ ಮಾತನಾಡಿದ ಅವರು,‘ದೇಶದಲ್ಲಿ ಕೋಟ್ಯಂತರ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾರಿಗೂ ಏನೂ ಆಗಿಲ್ಲ. ಅವರೆಲ್ಲರೂ ಆರೋಗ್ಯದಿಂದ ಇದ್ದಾರೆ. ಅನಗತ್ಯವಾಗಿ ಭಯಪಡದೇ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದಾಗ ಲಸಿಕೆ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.