ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಪಂಥೀಯ ಚಳವಳಿ ವೈಫಲ್ಯದಿಂದ ಬಿಜೆಪಿ ಬಲಿಷ್ಠ

‘ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು’ ವಿಚಾರಗೋಷ್ಠಿಯಲ್ಲಿ ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಹೇಳಿಕೆ
Last Updated 18 ನವೆಂಬರ್ 2019, 10:04 IST
ಅಕ್ಷರ ಗಾತ್ರ

ಗಂಗಾವತಿ: ‘ದೇಶ ಸೇರಿದಂತೆ ಕರ್ನಾಟಕ ರಾಜ್ಯದಲ್ಲೂ ಎಡ ಪಂಥೀಯ ಚಳವಳಿಯ ವಿಫಲತೆಯಿಂದ ದೇಶದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಮತ್ತೆ ನಮ್ಮ ಎಡ ಮತ್ತು ಪ್ರಗತಿಪರ ಚಿಂತನೆಯ ನೆಲೆ ಗಟ್ಟಿಯಾಗಬೇಕು’ ಎಂದು ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು.

ನಗರದ ಐಎಂಎ ಭವನದಲ್ಲಿ ಭಾನುವಾರ ‘ನಾವು ನಮ್ಮಲ್ಲಿ’ ಸಂಘಟನೆ ವತಿಯಿಂದ ನಡೆದ ‘ದೇಶಪ್ರೇಮದ ಆಯಾಮಗಳು’ ಕಾರ್ಯಕ್ರಮದಲ್ಲಿ ‘ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು’ ಕುರಿತು ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆರ್‌ಎಸ್‍ಎಸ್ ಮತ್ತದರ ಪರಿ ವಾರದ ಸಂಘಟನೆಗಳು ನಡೆಸುವ ಶಾಖಾ ಪದ್ಧತಿಯಂತೆ ನಮ್ಮ ಎಡಪಂಥೀಯ ಸಂಘಟನೆಗಳು ಸೈದ್ಧಾಂತಿಕ ನೆಲೆ ಕಂಡುಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಧಾರ್ಮಿಕ ಭಾವನೆ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೂರ್ತಿ ಭಗ್ನದ ವಿಷಯವನ್ನು ಸಾಮಾನ್ಯ ಜನರ ಭಾವನೆಯಲ್ಲಿ ಭಿತ್ತಿ ಅಧಿಕಾರ ಪಡೆಯುವ ಕೆಲಸ ಪರಿವಾರದ ಸಂಘಟನೆಗಳು ಮಾಡುತ್ತಿವೆ’ ಎಂದರು.

‘ಇದರ ನಡುವೆ ದೇಶದಲ್ಲಿ ನಮ್ಮ ಎಡಪಂಥೀಯ ರಾಜಕೀಯ ಶಕ್ತಿ ಕುಂದಿದೆ. ಬಿಜೆಪಿ, ಕಾಂಗ್ರೆಸ್ ಮುಕ್ತ ಮಾತ್ರ ಮಾಡುತ್ತಿಲ್ಲ. ತನ್ನೆಲ್ಲ ವಿರೋಧಿ ಸಿದ್ಧಾಂತ ಮತ್ತು ವಿಚಾರವನ್ನೆ ಮುಕ್ತ ಮಾಡುವ ಅಜೆಂಡಾ ಇಟ್ಟುಕೊಂಡಿದೆ. ಅನವಶ್ಯಕ ವಿಚಾರಗಳಿಗೆ ವಿರೋಧಿಸಿ ಬಿಜೆಪಿ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವ ಬದಲು ನಾವು, ಜನ ಸಾಮಾನ್ಯರ ಮೂಲಕ ಸಂಘಟನೆ ಬಲಪಡಿಸಬೇಕು’ ಎಂದು ಹೇಳಿದರು.

ಚಿಂತಕಿ ನಯನಾ ಮೋಟಮ್ಮ ಮಾತನಾಡಿ, ‘ಒಂದೊಂದು ಪಕ್ಷಗಳಿಗೆ ಒಂದೊಂದು ಸಿದ್ಧಾಂತವಿದೆ. ಅದೇ ರೀತಿ ಬಿಜೆಪಿ ಒಂದು ಸಿದ್ಧಾಂತವನ್ನು ಹೊಂದಿದೆ. ನಮ್ಮ ಮೂಲ ಆಶಯದಂತೆ ನಾವು ಸಂಘಟನೆಯಾಗಬೇಕೆ ಹೊರತು ಬಿಜೆಪಿ ಅನುಕರಣೆ ಸರಿಯಲ್ಲ. ಕಾಲಚಕ್ರ ಉರುಳುತ್ತಿರುತ್ತದೆ. ನಮ್ಮ ಬಲ ಹೆಚ್ಚಿಕೊಂಡಾಗ ಮುಂದೊಂದು ದಿನ ದೇಶದಲ್ಲಿ ನಮ್ಮ ವಿಚಾರದ ಮೂಲಕ ರಾಜಕೀಯ ಶಕ್ತಿ ಹೆಚ್ಚಾಗುತ್ತದೆ. ಈ ವಿಶ್ವಾಸದೊಂದಿಗೆ ನಾವು ಸಂಘಟಿತ ರಾಗೋಣ’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ತುಂಬಾ ಕುಗ್ಗಿದೆ. ಪಂಚಾಯಿತಿ ರಾಜ್ ಚುನಾವಣೆ ಮಹಿಳೆಯರಿಗೆ ಆರೋಗ್ಯಕರ ಆಗಿದ್ದರೆ ಲೋಕಸಭಾ, ವಿಧಾನಸಭೆ ಚುನಾವಣೆಯಲ್ಲಿ ಅಂಕಿ-ಅಂಶಗಳು ಅಷ್ಟು ಪ್ರೋತ್ಸಾಹ ಕೊಡುತ್ತಿಲ್ಲ. ಮಹಿಳೆಯರು ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುತ್ತಿರುವುದರಿಂದ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯುತ್ತಿದ್ದಾರೆ. ಮೀಸಲಾತಿ ಬರಲೇಬೇಕು. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ರಕ್ಷಣಾ ಖಾತೆ ನೀಡಿದ್ದಾರೆ. ಆದರೆ ಮಹಿಳೆಯರ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, ಬಹುಮತದಿಂದ ಮಹಿಳೆಯರಿಗೆ ಮೀಸಲಾತಿಯನ್ನು ಲೋಕಸಭಾದಲ್ಲಿ ಕಲ್ಪಿಸಬೇಕು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸ್ಮರಣೆ ಮಾಡುವುದು ಅವಶ್ಯ ಇದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಪ್ರತಿಪಾದಿಸಿದರು.‌

ತಾಲ್ಲೂಕು ಪಂಚಾಯಿತಿ ಸದಸ್ಯ ಲಿಂಗರಾಜ ಹಟ್ಟಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಎಡಪಕ್ಷಗಳು ಸೈದ್ದಾಂತಿಕ ಕಾರ್ಯಕರ್ತರ ಪಡೆಯನ್ನು ಬೆಳೆಸುವಲ್ಲಿ ವಿಫಲವಾಗಿವೆ. ಕೆಳಹಂತದಲ್ಲಿ ಕಾರ್ಯಕರ್ತರ ಪಡೆಯನ್ನು ಸೃಷ್ಟಿಸುವಲ್ಲಿ ಬಿಜೆಪಿ ಯಶಸ್ವಿಯಾದ ಪರಿಣಾಮ ಅದು ಅಧಿಕಾರಕ್ಕೆ ಬಂದಿದೆ’ ಎಂದರು.

ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಮಾಲತಿ ಪಟ್ಟಣಶೆಟ್ಟಿ, ಸಿ.ಎಚ್.ನಾರಿನಾಳ್‌, ಡಾ.ಜಾಜಿ ದೇವೇಂದ್ರಪ್ಪ, ರಮೇಶ್‌ ಗಬ್ಬೂರ್, ಶಿವಕುಮಾರ್‌ ಮಾಲಿಪಾಟೀಲ್‌, ಅಕ್ಷದ ಹುಂಚದಕಟ್ಟೆ ಸೇರಿದಂತೆ ಅನೇಕ ಸಾಹಿತಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT