ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಕಾರ್ಡ್ ಬದಲಿಸಿ ವಂಚನೆ

ಸಹಾಯದ ಸೋಗಿನಲ್ಲಿ ಹಣ ಎಗರಿಸುತ್ತಿದ್ದ ವ್ಯಕ್ತಿ ಬಂಧನ
Last Updated 5 ಡಿಸೆಂಬರ್ 2021, 5:05 IST
ಅಕ್ಷರ ಗಾತ್ರ

ಕುಷ್ಟಗಿ: ಸಹಾಯ ಮಾಡುವ ಸೋಗಿನಲ್ಲಿ ಗ್ರಾಹಕರೊಬ್ಬರ ಎಟಿಎಂ ಕಾರ್ಡ್ ಮತ್ತು ಪಿನ್‌ ಸಂಖ್ಯೆ ಕದ್ದು ಹಣ ಎಗರಿಸಿದ್ದ ವ್ಯಕ್ತಿಯನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಾಲ್ಲೂಕಿನ ಕಂದಕೂರು ಗ್ರಾಮದ ಮಂಜುನಾಥ ಸಂಗನಾಳ ಎಂದು ಗುರುತಿಸಲಾಗಿದೆ. ಈ ಕುರಿತು ಯಲಬುರ್ಗಾ ತಾಲ್ಲೂಕು ಹಿರೇವಂಕಲಕುಂಟಾ ಗ್ರಾಮದ ವೀರಣ್ಣ ಬಂಗಾರಿ ಎಂಬುವವರು ಈ ಹಿಂದೆ ನೀಡಿದ್ದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಶುಕ್ರವಾರ ಇಲ್ಲಿಯ ಎಸ್‌ಬಿಐ ಶಾಖೆ ಎಟಿಎಂ ಕೇಂದ್ರದ ಬಳಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನೇಕ ದೂರುದಾರರ ಎಟಿಎಂ ಕಾರ್ಡ್‌ಗಳನ್ನು ಕದ್ದು ಹಣ ಡ್ರಾ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಆರೋಪಿ ಬಳಿ ಇದ್ದ ₹1 ಲಕ್ಷ ನಗದು ಹಾಗೂ ಬೇರೆಯವರ ಹೆಸರಿನಲ್ಲಿದ್ದ ಸಾಕಷ್ಟು ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಗಿದ್ದು ಇಷ್ಟು: ಕಳೆದ ನವೆಂಬರ್ 23 ರಂದು ಹಣ ಪಡೆಯಲು ಮಾರುತಿ ವೃತ್ತದಲ್ಲಿರುವ ಎಸ್‌ಬಿಐ ಎಟಿಎಂಗೆ ಬಂದಿದ್ದ ದೂರುದಾರ ವೀರಣ್ಣ ಬಂಗಾರಿ ಅವರು ಆರೋಪಿ ಮಂಜುನಾಥನ ಸಹಾಯ ಕೇಳಿದ್ದಾರೆ. ಈ ಸಮಯದಲ್ಲಿ ಹಣ ಡ್ರಾ ಮಾಡುವಾಗ ಗೌಪ್ಯವಾಗಿ ಪಿನ್‌ ಸಂಖ್ಯೆ ತಿಳಿದುಕೊಂಡಿದ್ದ ಆರೋಪಿಯು ತಮಗೆ ಬೇರೆ ಕಾರ್ಡ್ ನೀಡಿ ಹೋಗಿದ್ದ. ನಂತರ ಬೇರೆ ಎಟಿಎಂ ಮೂಲಕ ₹10 ಸಾವಿರ ಹಣ ಪಡೆದಿದ್ದ ಎಂದು ವೀರಣ್ಣ ದೂರಿನಲ್ಲಿ ವಿವರಿಸಿದ್ದರು.

ಎಟಿಎಂಗೆ ಹಣ ಪಡೆಯಲು ಬರುತ್ತಿದ್ದ ಅನಕ್ಷರಸ್ಥರು, ಅಮಾಯಕರು, ಹಳ್ಳಿಯ ಜನರನ್ನೇ ತನ್ನ ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿ ಕಳೆದ ಒಂದು ವರ್ಷದ ಅವಧಿಯಲ್ಲಿ ಈ ರೀತಿ ಅನೇಕ ಜನರಿಗೆ ಮೋಸ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್‌ಪಿ ರುದ್ರೇಶ್ ಉಜ್ಜನಕೊಪ್ಪ ತಿಳಿಸಿದರು.

ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ, ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT