ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧ ತಾಲ್ಲೂಕುಗಳ ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ

Last Updated 23 ನವೆಂಬರ್ 2021, 7:14 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರು ಸೋಮವಾರ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ತಾಲ್ಲೂಕಿನ ಅಗಳಕೇರಾ ಗ್ರಾಮದಲ್ಲಿ ಹಾನಿಗೊಳಗಾದ ಭತ್ತದ ಬೆಳೆ ವೀಕ್ಷಿಸಿ ಬಳಿಕ ಮಾತನಾಡಿ,‘ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಹಾನಿ ಸಂಭವಿಸಿದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ, ರೈತರಿಗೆ ಸಾಂತ್ವನ ಹೇಳುತ್ತಿದ್ದೇವೆ’ ಎಂದರು.

ಅಕಾಲಿಕ ಮಳೆಯಿಂದ ಭತ್ತ, ದ್ರಾಕ್ಷಿ, ಶೇಂಗಾ, ತೊಗರಿ, ಮೆಕ್ಕೆಜೋಳ, ಈರುಳ್ಳಿ ಹಾಗೂ ಪ್ರಮುಖ ಬೆಳೆಗಳು ಹಾನಿಗೊಳಗಾಗಿದ್ದು, ಈ ಬೆಳೆಗಳ ಕುರಿತು ಸಮೀಕ್ಷೆ ನಡೆಸಿ, ತಕ್ಷಣ ಸರ್ಕಾರಕ್ಕೆ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಳೆಯಿಂದಾಗಿ ನ. 21 ರವರೆಗೆ ಸಾಕಷ್ಟು ಬೆಳೆ ನಾಶ ಹಾಗೂ ಹಲವು ಕಡೆ ಮನೆಗಳಿಗೂ ಸಹ ಹಾನಿ ಉಂಟಾಗಿದೆ. ಮಳೆಯಿಂದ ನಷ್ಟವುಂಟಾದ ಮನೆಗಳನ್ನು ಎ, ಬಿ ಹಾಗೂ ಸಿ ಕೆಟಗೇರಿಯಲ್ಲಿ ಸರ್ವೇ ನಡೆಸುವಂತೆ ತಿಳಿಸಿದ್ದು, ಇದರಿಂದ ಮನೆಗಳು ನಷ್ಟವಾದ ಪ್ರಮಾಣದನ್ವಯ ಪರಿಹಾರ ನೀಡಲು ಅನುಕೂಲವಾಗುತ್ತದೆ. ಪ್ರಾಥಮಿಕ ಸರ್ವೇಯನ್ವಯ ಜಿಲ್ಲೆಯಲ್ಲಿ 18,855 ಹೆಕ್ಟರ್ ಭತ್ತದ ಬೆಳೆ ನಷ್ಟವಾಗಿರುವ ಕುರಿತು ವರದಿಯಿದ್ದು, ಇನ್ನು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ 64,0351 ಕ್ಕೂ ಅಧಿಕ ರೈತರು ವಿಮಾ ಹಣ ಪಾವತಿಸಿದ್ದು, ವಿಮಾ ಪರಿಹಾರ ಮೊತ್ತವನ್ನು ರೈತರಿಗೆ ನೀಡಲು ಆಯಾ ಇನ್ಯುರೆನ್ಸ್‌ ಕಂಪನಿಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಲು ನ. 30 ರೊಳಗಾಗಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್ ಗಳಡಿ ತಕ್ಷಣ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಸರ್ಕಾರದ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

‘ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಿ’

ಕಾರಟಗಿ: ‘ಅಕಾಲಿಕ ಮಳೆಗೆ ಭತ್ತ ಸಹಿತ ವಿವಿಧ ಬೆಳೆಗಳು ನೆಲಕಚ್ಚಿ, ಅಪಾರ ಹಾನಿ ಸಂಭವಿಸಿದೆ. ಅಧಿಕಾರಿಗಳಿಗೆ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ನಷ್ಟಕ್ಕೊಳಗಾದ ರೈತರಿಗೆ ಶೀಘ್ರವೇ ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ತಿಳಿಸಿದರು.

ತಾಲ್ಲೂಕಿನ ಬರಗೂರು, ಕುಂಟೋಜಿ ಸಹಿತ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿ ವೀಕ್ಷಿಸಿ, ಬಳಿಕ ಮಾತನಾಡಿ,‘ಜಿಲ್ಲೆಯ ಬಹುತೇಕ ಕಡೆ ಅಕಾಲಿಕ ಮಳೆಯ ಹೊಡೆತಕ್ಕೆ
ಬೆಳೆಗಳು ಹಾನಿಗೊಳಗಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರ್ಕಾರ ರೈತರ ಪರವಾಗಿದೆ’ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್, ಕೃಷಿ ಇಲಾಖೆ ಅಧಿಕಾರಿ ಸಂತೋಷ ಪಟ್ಟದಕಲ್ಲು, ಕಾರಟಗಿ ತಹಶೀಲ್ದಾರ್ ಎಸ್.‌ರವಿ ಅಂಗಡಿ, ಉಪ ತಹಶೀಲ್ದಾರ್ ಪ್ರಕಾಶ್ ನಾಯಕ, ರೈತ ಮುಖಂಡರು ಇದ್ದರು.

‘ಹೆಕ್ಟೇರ್‌ಗೆ ₹50 ಸಾವಿರ‌ ಪರಿಹಾರ ನೀಡಿ’: ‘ಮಳೆಗೆ ತಾಲ್ಲೂಕಿನಾದ್ಯಂತ ಅಪಾರ ಬೆಳೆ ನಷ್ಟವಾಗಿದೆ. ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ಕಿಸಾನ್ ಜಾಗೃತಿ ವಿಕಾಸ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರನ್ನು ಒತ್ತಾಯಿಸಿದರು.

‘ತ್ವರಿತವಾಗಿ ಮಾಹಿತಿ ಸಂಗ್ರಹಿಸಿ’

ಯಲಬುರ್ಗಾ: ‘ತಾಲ್ಲೂಕಿನಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೆ ಒಳಗಾಗಿರುವ ಬೆಳೆ ಹಾಗೂ ಮನೆಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿ ನಂತರ ಮಾತನಾಡಿದ ಅವರು,‘ಮನೆಗಳು ಎಷ್ಟೇ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಅದನ್ನು ಪರಿಗಣಿಸಿ ನಷ್ಟದ ಅಂದಾಜು ಮಾಡಿ ಅವುಗಳಿಗೂ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದರು.

ಭತ್ತ, ಈರುಳ್ಳಿ, ದ್ರಾಕ್ಷಿ, ಮೆಕ್ಕೆಜೋಳ ಹಾಗೂ ಇನ್ನಿತರ ಬೆಳೆಗಳಿಗೆ ಆಗಿರುವ ನಷ್ಟದ ಕುರಿತು ತ್ವರಿತವಾಗಿ ಮಾಹಿತಿ ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್, ಕೃಷಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ತಹಶೀಲ್ದಾರ್ ಶ್ರೀಶೈಲ ತಳವಾರ, ತಾ.ಪಂ. ಇಒ ಸೋಮಶೇಖರ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರ, ತೋಟಗಾರಿಕೆ ಇಲಾಖೆ ಲಿಂಗಣ್ಣನವರ ಸೇರಿ ಅನೇಕರು ಇದ್ದರು.

‘ಸಹಕಾರ ನೀಡಿ’

ಗಂಗಾವತಿ: ‘ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆ ಹಾಗೂ ಮನೆಗಳ ಸಮೀಕ್ಷೆ ಮಾಡಿಸಿ, ಕೂಡಲೇ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ತಿಳಿಸಿದರು.

ತಾಲ್ಲೂಕಿನ ಹನುಮಹಳ್ಳಿ, ಚಿಕ್ಕರಾಂಪುರ, ರಾಂಪುರ ಹಾಗೂ ಮಲ್ಲಾಪುರ ಗ್ರಾಮಗಳಲ್ಲಿ ಬೆಳೆಹಾನಿ ಪರಿಶೀಲಿಸಿ ಮಾತನಾಡಿದರು.

ಈಗಾಗಲೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ, ಕೃಷಿ, ತೋಟಗಾರಿಕೆ ಸೇರಿ ಇತರ ಎಲ್ಲ ಇಲಾಖೆಗಳ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಯಲ್ಲಿ ನಿರತರಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಮೊದಲ ಹಂತದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು 2757 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ. ಎರಡನೇ ಹಂತದ ಬೆಳೆ ಹಾನಿ ಸಮೀಕ್ಷೆ ನಡೆಸುವ ಗ್ರಾಮ ಲೆಕ್ಕಾಧಿಕಾರಿಗಳು, ಹಾನಿಯಾದ ಯಾವ ಬೆಳೆಯನ್ನು ತಪ್ಪಿಸುವಂತಿಲ್ಲ ಎಂದು ಎಚ್ಚರಿಸಿದರು.

ಬೆಳೆ ಹಾನಿ ಸಮೀಕ್ಷೆ ವೇಳೆಯಲ್ಲಿ ರೈತರು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಜತೆಗೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೋರಿದರು. ಕೆಲ ರೈತರು ಬೆಳೆ ವಿಮೆ ಪಾವತಿ ಮಾಡಲಾಗಿದ್ದು, ಈ ಕುರಿತು ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಸರ್ಕಾರದ ಎನ್‌ಡಿಆರ್‌ಎಫ್‌ ನಿಯಮದಡಿ ಒಂದು ಹೆಕ್ಟೇರ್ ಭತ್ತಕ್ಕೆ ₹13,500, ತೊಗರಿಗೆ ₹6,800, ನವಣೆಗೆ ₹6,800, ಮೆಕ್ಕೆಜೋಳ ₹6,800, ದಾಳಿಂಬೆ, ದ್ರಾಕ್ಷಿ ಬೆಳೆಗೆ ₹18,000, ಮೆಣಸಿನಕಾಯಿ ಬೆಳೆಗೆ ₹13,500 ಪರಿಹಾರ ನೀಡಲಾಗುತ್ತದೆ ಎಂದರು.

ಅದರಂತೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿದ್ದು, ಎ ಗ್ರೇಡ್ ಪ್ರಮಾಣದಲ್ಲಿ ಮನೆ ಹಾನಿಯಾದರೆ ₹5 ಲಕ್ಷ, ಬಿ ಗ್ರೇಡ್ ಮನೆ ಹಾನಿಗೆ ₹1 ಲಕ್ಷ, ಸಿ ಗ್ರೇಡ್ ಮನೆ ಹಾನಿಗೆ ₹50 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕು ಆಡಳಿತದ ಅಧಿಕಾರಿಗಳು ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಹಾನಿ ಕುರಿತು ಮಾಹಿತಿ, ಪಡೆದು, ಅತಿ ಶೀಘ್ರವಾಗಿ ವರದಿ ಸಲ್ಲಿಸಬೇಕು. ಈ ತಿಂಗಳ ಕೊನೆಯ ದಿನಾಂಕದ ಒಳಗಾಗಿ ವರದಿ ಸಲ್ಲಿಸಿದರೆ, ಡಿಸೆಂಬರ್ 1 ರಿಂದ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ ಸಿಇಒ ಫೌಜೀಯಾ ತರುನ್ನುಮ್, ತಹಶೀಲ್ದಾರ್ ಯು.ನಾಗರಾಜ, ತಾ‌.ಪಂ. ಇಒ ಡಾ.ಡಿ.ಮೋಹನ್, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಸಿಡಿಪಿಒ ಗಂಗಪ್ಪ, ಬಿಇಒ ಸೋಮಶೇಖರಗೌಡ, ಆನೆಗೊಂದಿ ಪಿಡಿಒ ಕೃಷ್ಣಪ್ಪ, ಸಾಣಪುರ ಪಿಡಿಒ ಬಸವರಾಜಗೌಡ, ಗ್ರಾಮಲೆಕ್ಕಿಗ ಅಮರೇಶ, ಕಂದಾಯ ಇಲಾಖೆಯ ಮಂಜುನಾಥ ಹಾಗೂ ರೈತರು ಇದ್ದರು.

ಕಳೆದ ಬಾರಿ ಇದೆ ತರಹ ಬೆಳೆ ಹಾನಿಯಾಗಿತ್ತು. ಆಗ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಒಬ್ಬರಿಗೆ ಬಂದ್ರೆ, ಇನ್ನೊಬ್ಬರಿಗೆ ಬಂದಿರಲ್ಲ ಎಂದು ರೈತರು ಆರೋಪಿಸಿದರು.

‘ಯಲಬುರ್ಗಾ: 194 ಹೆಕ್ಟೇರ್‌ ಬೆಳೆ ಹಾನಿ’

ಯಲಬುರ್ಗಾ: ‘ಅಕಾಲಿಕ ಮಳೆಯಿಂದ ತಾಲ್ಲೂಕಿನಲ್ಲಿ 70 ಕ್ಕೂ ಅಧಿಕ ಮನೆಗಳು ಕುಸಿದಿವೆ. ನೂರಾರು ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿವೆ. ಹಿರೇವಂಕಲಕುಂಟಾ ವ್ಯಾಪ್ತಿಯಲ್ಲಿಯೇ ಹೆಚ್ಚು ನಷ್ಟವಾಗಿದೆ’ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.

ಕಲ್ಲಭಾವಿ ಹಾಗೂ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮತ್ತು ಬೆಳೆ ಹಾನಿಯ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿ ನಂತರ ಮಾತನಾಡಿದ ಅವರು,‘ನ.21 ರ ಅಂತ್ಯದವರೆಗೆ ಸಿಕ್ಕ ಅಂಕಿ ಅಂಶಗಳ ಪ್ರಕಾರ 67 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ ಹಿರೇವಂಕಲಕುಂಟಾ ಪ್ರದೇಶದಲ್ಲಿಯೇ 50 ಮನೆಗಳಿವೆ’ ಎಂದರು.

ಯಲಬುರ್ಗಾ ವ್ಯಾಪ್ತಿಯ ತೋಟಗಾರಿಕೆ ಬೆಳೆ 68 ಹೆಕ್ಟೇರ್ ಹಾಗೂ 23 ಹೆಕ್ಟೇರ್‌ನಷ್ಟು ಇತರ ಬೆಳೆಗಳು ನಾಶವಾಗಿವೆ. ಅದೇ ರೀತಿ ಹಿರೇವಂಕಲಕುಂಟಾ ಪ್ರದೇಶದಲ್ಲಿ 91 ಹೆಕ್ಟೇರ್ ತೋಟಗಾರಿಕೆ, 12 ಹೆಕ್ಟೇರ್ ಇತರ ಬೆಳೆಗಳು ನಾಶವಾಗಿವೆ. ಸದ್ಯಕ್ಕೆ ಒಟ್ಟಾರೆ 194 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರ ಒಟ್ಟು ಮೌಲ್ಯ ₹63.28 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಮೀಕ್ಷಾ ಕಾರ್ಯ ಮುಂದುವರಿದಿದ್ದು, ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಸಮಗ್ರ ವರದಿ ತಯಾರಿಸಲು ತಿಳಿಸಲಾಗಿದೆ. ಇದರಿಂದ ಇನ್ನೂ ನಷ್ಟದ ಪ್ರಮಾಣದ ಮಾಹಿತಿ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಮತ್ತೊಂದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು. ಗಣ್ಯರಾದ ಶಿವಪ್ಪ ವಾದಿ, ಜಗನ್ನಾಥ ಶೆಟ್ಟರ ತರಲಕಟ್ಟಿ ಸೇರಿ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT