ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಬೆಳೆ: ಗುಣಮಟ್ಟ ಕಾಪಾಡಿ

ಹನುಮಸಾಗರ: ಅನ್ನದಾತರಿಗೆ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಸಲಹೆ
Last Updated 22 ನವೆಂಬರ್ 2020, 16:47 IST
ಅಕ್ಷರ ಗಾತ್ರ

ಹನುಮಸಾಗರ: ಬಿತ್ತನೆ ಅವಧಿಯಲ್ಲಿ ಹಾಗೂ ಬಿತ್ತನೆಯ ನಂತರ ಚೆನ್ನಾಗಿ ಮಳೆಯಾದ್ದರಿಂದ ಈ ಬಾರಿ ಕಡಲೆ ಬೆಳೆ ಉತ್ತಮವಾಗಿದೆ.

‘ವಾತಾವರಣ ಬೆಳೆಗೆ ಪೂರಕವಾಗಿದೆ. ರಾತ್ರಿ ಚಳಿ ಹಾಗೂ ಹಗಲು ಬಿಸಿಲಿರುವುದರಿಂದ ರೋಗ ಹಾಗೂ ಕೀಡೆಗಳ ಹಾವಳಿ ಕಡಿಮೆ ಇದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ತಿಳಿಸಿದರು.

ಹನುಮಸಾಗರ, ಹೂಲಗೇರಿ, ಹನುಮನಾಳ, ಅಡವಿಭಾವಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಮೊದಲು ಬಿತ್ತನೆಯಾದ ಬೆಳೆ ಈಗ ಹೂವು ಬಿಡುವ ಹಂತದಲ್ಲಿದ್ದರೆ, ನಂತರದಲ್ಲಿ ಬಿತ್ತನೆ ಮಾಡಿದ ಬೆಳೆ ಆರೋಗ್ಯಕರವಾಗಿದೆ. ಬೆಳೆ ನೋಡಿಕೊಂಡು ಸುಮ್ಮನಿರದೆ ಬೆಳೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ರೈತರು ಕೂಡಲೇ ಉಪಶಮನ ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದರು.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಹಿಂಗಾರು ಬಿತ್ತನೆಯಾದ ಕಡಲೆ, ಗೋಧಿ, ಕುಸಬಿ ಸೇರಿದಂತೆ ಕೆಲವು ಬೆಳೆಗಳು ಉತ್ತಮವಾಗಿವೆ. ಈ ಭಾಗದಲ್ಲಿ ಸುಮಾರು 800 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಶೇ 30 ರಷ್ಟು ಕಡಲೆ ಬಿತ್ತನೆ ವಿಸ್ತೀರ್ಣ ಹೆಚ್ಚಾಗಿದೆ. ಬೆಳವಣಿಗೆ ಪ್ರಥಮ ಹಂತದಲ್ಲಿದ್ದು, ಅದರ ನಿರ್ವಹಣೆ ಪ್ರಮುಖವಾಗಿದೆ ಎಂದರು.

ಕಡಲೆ ಬೆಳೆ ಹೂವಾಡುವ ಪ್ರಾರಂಭಿಕ ಹಂತದಲ್ಲಿ ಶೇ.2ರಷ್ಟು ಯೂರಿಯಾ ದ್ರಾವಣ ಸಿಂಪಡಣೆ ಮಾಡಬೇಕು. (ಅಂದರೆ ಪ್ರತಿ ಲೀಟರ್ ನೀರಿಗೆ 20 ಗ್ರಾಂ ಯೂರಿಯಾ ಬೆರಸಬೇಕು). ಪ್ರತಿ ಎಕರೆಗೆ 150 ರಿಂದ 300 ಲೀಟರ್ ನೀರು ಸಿಂಪಡಣೆ ಅವಶ್ಯ. ಲಘು ಪೋಷಕಾಂಶಗಳಾದ ಇಡಿಟಿಎ ರೂಪದ ಶೇ.0.5 ಸತುವಿನ ಸಲ್ಫೇಟ್ ಮತ್ತು ಶೇ.0.5 ಕಬ್ಬಿಣದ ಸಲ್ಫೇಟ್, ಶೇ 0.2 ಬೋರಾಕ್ಸ್ ಹಾಗೂ ಶೇ 0.1 ಅಮೋನಿಯಂ ಮಾಲಿಬ್ಡೇಟ್‍ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಣೆ ಕೈಗೊಳ್ಳಬೇಕು ಎಂದರು.

ಕಡಲೆ ಬಿತ್ತಿದ 35 ದಿನಗಳ ನಂತರ 20 ಪಿಪಿಎಂ ನ್ಯಾಫ್ಯಾಲಿಕ್ ಆಸಿಟಿಕ್ ಅಸಿಡ್ ಸಿಂಪಡಿಸಬೇಕು. ಹಾಗೂ 1.0 ಮಿಲೀ ನೈಟ್ರೋಬೆಂಜೀನ್ ಸಸ್ಯವರ್ಧಕಗಳನ್ನು ಸಿಂಪಡಣೆ ಮಾಡುವುದರಿಂದ ಹೂವು ಉದುರುವುದು ಕಡಿಮೆಯಾಗಿ, ಕಾಯಿಗಳ ಸಂಖೈ ಹೆಚ್ಚುವುದಲ್ಲದೆ, ಗುಣಮಟ್ಟದ ಫಸಲು ಬರುವುದು. ಅಲ್ಲದೆ ಬೆಳೆಯ ಕುಡಿ ಚಿವುಟುವುದು ಅವಶ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT