ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನವದುರ್ಗೆಯರ ಪೂಜೆಗೆ ಜಿಲ್ಲೆ ಸಜ್ಜು

ಸರಳ, ಸಂಭ್ರಮ, ಭಕ್ತಿಯ ಆಚರಣೆಗೆ ಸಿದ್ಧತೆ: ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ
Last Updated 7 ಅಕ್ಟೋಬರ್ 2021, 7:27 IST
ಅಕ್ಷರ ಗಾತ್ರ

ಕೊಪ್ಪಳ: ನಾಡಿನ ದೊಡ್ಡ ಹಬ್ಬ ದಸರಾವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲು ಜಿಲ್ಲೆ ಸಜ್ಜಾಗಿದೆ.

ಬುಧವಾರ ಮಹಾಲಯ ಅಮಾವಾಸ್ಯೆಯೊಂದಿಗೆ ಆರಂಭವಾದ ಈ ಹಬ್ಬ, ಘಟಸ್ಥಾಪನೆ ಮೂಲಕ ಒಂಭತ್ತು ದಿನಗಳ ಕಾಲ ಎಲ್ಲ ದೇವತೆಗಳ ದೇವಸ್ಥಾನದಲ್ಲಿ ದೇವಿ ಪುರಾಣ ಪ್ರವಚನ, ವಿಶೇಷ ಪೂಜೆ ನಡೆಯಲಿದೆ.

ಜಿಲ್ಲೆಯ ಪ್ರಸಿದ್ಧ ಶಕ್ತಿಪೀಠಗಳಾದ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ಆನೆಗೊಂದಿ ಮ್ಯಾಗೋಟಿ ದುರ್ಗಾ, ಹೇಮಗುಡ್ಡದ ದುರ್ಗಾದೇವಿ ದೇವಾಲಯದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಸರಳ ಆಚರಣೆ ಮಾಡಲಾಗುತ್ತಿದೆ. ಮೈಸೂರು ದಸಾರಕ್ಕೆ ಸ್ಫೂರ್ತಿಯಾದ ಇಲ್ಲಿಯ ದಸರಾ ಜಂಬೂಸವಾರಿ ಮುಂದೆ ವಿಜಯನಗರ ಕಾಲದಲ್ಲಿ ದೇಶ, ವಿದೇಶಿಗರ ಗಮನ ಸೆಳೆದಿತ್ತು.

ನಂತರ ಮೈಸೂರಿನ ಮೂಲಕ ಸರ್ಕಾರಿ ದಸರಾ ಜನರ ದಸರಾವಾಗಿ ಮಾರ್ಪಾಡಾಗಿದೆ. ಹಬ್ಬದ ಎಲ್ಲ ಧಾರ್ಮಿಕ ವಿಧಿವಿಧಾನಗಳು ನಡೆಸಲು ಹಾಗೂ ಜನರ ದರ್ಶನಕ್ಕೆ ಅವಕಾಶವಿದೆ. ಆದರೆ ಸಾಂಸ್ಕೃತಿಕ, ಜಂಬೂಸವಾರಿ ಕಾರ್ಯಕ್ರಮ ಬಹುತೇಕ ನಡೆಯುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ. ಎಲ್ಲ ಗ್ರಾಮೀಣ ಭಾಗದಲ್ಲಿ ಇರುವ ಗ್ರಾಮದೇವತೆಗಳು ಹೆಣ್ಣುದೇವರೇ ಆಗಿರುವುದರಿಂದ ನವರಾತ್ರಿಯಲ್ಲಿ ಅಗ್ರಪೂಜೆ ಸಲ್ಲುವುದು ಸಂಪ್ರದಾಯವಾಗಿದೆ. ಗವಿಮಠದಲ್ಲಿರುವ ಅನ್ನಪೂರ್ಣೆಗೂ ದಸರೆಯಂದು ವಿಶೇಷ ಪೂಜೆ ನಡೆಯುತ್ತದೆ. ನಗರ ಸೇರಿದಂತೆ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧಗೊಳ್ಳುತ್ತಿವೆ. ಬನಶಂಕರಿ, ತಿರುಪತಿ, ದ್ಯಾಮವ್ವ, ದುರ್ಗವ್ವ, ಅಂಭಾಭವಾನಿ ದೇವಸ್ಥಾನಗಳಲ್ಲಿ ನವರಾತ್ರಿ ವೈಭವ ಮೇಳೈಸುತ್ತಿದೆ. ನಿತ್ಯ ಆರತಿ, ಅಭಿಷೇಕ, ನೈವೇದ್ಯದ ಜತೆಗೆ ಧಾರ್ಮಿಕ ಆಚರಣೆಗಳು ನೆರೆವೇರಲಿವೆ. ಆಸ್ತಿಕ ಭಕ್ತರು 9 ದಿನಗಳ ಕಾಲ ಕಠಿಣ ಮಡಿಯ ಜತೆಗೆ ಉಪವಾಸ ವ್ರತ ಆಚರಿಸಿ ಕೃತಾರ್ಥರಾಗುತ್ತಾರೆ. ಹಬ್ಬಕ್ಕೆ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಿದ್ದು ಕೊಪ್ಪಳ ಮತ್ತು ಗಂಗಾವತಿ ಮಾರುಕಟ್ಟೆಯಲ್ಲಿ ತರೇವಾರಿ ಸಾವಿರಾರು ಕ್ವಿಂಟಲ್‌ ಹೂವುಗಳ ವ್ಯಾಪಾರ ನಿತ್ಯ ನಡೆಯುತ್ತದೆ. ಚೆಂಡು ಮತ್ತು ಮಲ್ಲಿಗೆ, ಸಂಪಿಗೆ ಹೂವುಗಳಿಗೆ ವಿಶೇಷ ಬೇಡಿಕೆ ಇದ್ದು, ವ್ಯಾಪಕವಾಗಿ ಮಾರುಕಟ್ಟೆಗೆ ಬರುತ್ತಿದೆ. ಲಾಕ್‌ಡೌನ್‌ನಿಂದ ಸ್ವಲ್ಪ ನಿರಾಳವಾಗಿರುವ ಜನ ಹಬ್ಬದ ಸಂಭ್ರಮಕ್ಕೆ ತಯಾರಿ ನಡೆಸಿದ್ದಾರೆ. ಮನೆಗಳಲ್ಲಿ ಘಟಸ್ಥಾಪನೆ ಜೊತೆಗೆ ದೇವಿ ಮೂರ್ತಿ ಪ್ರತಿಷ್ಠಾಪನೆ, ಭಾವಚಿತ್ರಕ್ಕೆ ಪೂಜೆ, ಹೋಮ, ಹವನ, ದೇವಿ ಪುರಾಣ ಪಠಣ ನಡೆಯಲಿದೆ. ಆಯುಧಪೂಜೆಯ ದಿನದಂದು ವಿವಿಧ ವಾಹನ, ಎತ್ತುಗಳು, ಚಕ್ಕಡಿ, ಆಯುಧಗಳ ಪೂಜೆ ನಡೆಯಲಿದೆ. ಹೊಸ ವಾಹನಗಳ ಖರೀದಿಗೂ ಜನರು ಉತ್ಸಾಹ ತೋರಿಸುತ್ತಿದ್ದು, ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT