ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಕಟಾವು ಸಮೀಕ್ಷೆ ಕೈಗೊಳ್ಳದಿದ್ದರೆ ಶಿಸ್ತು ಕ್ರಮ

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ: ಸಭೆ
Last Updated 7 ಜನವರಿ 2019, 15:27 IST
ಅಕ್ಷರ ಗಾತ್ರ

ಕೊಪ್ಪಳ: ಬೆಳೆ ಕಟಾವುಯಡಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಕೈಗೊಳ್ಳದಿದ್ದಲ್ಲಿ ಮತ್ತು ನಷ್ಟಗೊಳಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಜಿಲ್ಲೆಯ ಪಿಡಿಒ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ಕಟಾವು ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಅನುಕೂಲಕ್ಕಾಗಿ 'ಬೆಳೆ ದರ್ಶಕ ಆ್ಯಪ್' ಇದೆ. ಇದರ ಉದ್ದೇಶವನ್ನು ಮೊದಲಿಗೆ ರೈತರಿಗೆ ತಿಳಿಸಬೇಕು. ಬೆಳೆ ನಷ್ಟ, ಕಟಾವು ಇತ್ಯಾದಿ ಕುರಿತು ಕೆಲ ಅಧಿಕಾರಿಗಳು ಅಂದಾಜು ಪಟ್ಟಿಯನ್ನು ನೀಡುತ್ತಿದ್ದಾರೆ. ಬೆಳೆ ನಷ್ಟವಾಗಿದ್ದಲ್ಲಿ ಸರ್ವೆ ಮಾಡಿ ಪಟ್ಟಿ ತಯಾರಿಸಬೇಕು. ಯಾವುದೇ ಸಮಸ್ಯೆಗಳೊಂದಿಗೆ ರೈತರು ಕರೆ ಮಾಡಿದಾಗ ಅದಕ್ಕೆ ಶೀಘ್ರ ಸ್ಪಂದಿಸಬೇಕು ಎಂದು ಸೂಚಿಸಿದರು.

ಈ ಕುರಿತು ಕೃಷಿ ಇಲಾಖೆ ಮತ್ತು ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ರೈತರ ಕರೆಗಳಿಗೆ ಸ್ಪಂದಿಸದಿರುವವರ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿ. ನಿರ್ಲಕ್ಷ್ಯತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಳೆ ಕಟಾವು ನಮೂನೆ-1 ರಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು. ಮೂಲ ಕಾರ್ಯಕರ್ತರು ಕಡ್ಡಾಯವಾಗಿ ಬೆಳೆ ಕಟಾವಿನ ಸಮೀಕ್ಷೆಗೆ ಹೋಗಬೇಕು ಎಂದು ಸೂಚಿಸಿದರು.

ಸಮೀಕ್ಷೆಗೆ ನಿಗದಿ ಪಡಿಸಿದ ಬೆಳೆಗಳ ಮೇಲೆ ಸಮೀಕ್ಷೆ ಮಾಡಬೇಕು. ಯಾವುದೇ ಬದಲಾವಣೆ ಮಾಡುವಂತಿಲ್ಲ. ಬೆಳೆ ಕಟಾವಿನ ಸಮೀಕ್ಷೆ ಕುರಿತು ಕಂಪನಿಯವರಿಗೆ ಕಡ್ಡಾಯವಾಗಿ ತಿಳಿಸುವುದು ಮೂಲ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಮ್ಯಾನುವಲ್‍ಗೆ ಅವಕಾಶ ಇರುವುದಿಲ್ಲ. ಇಳುವರಿ ದಾಖಲಾತಿ ಮಾಡುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.

ಹೊಲದಲ್ಲಿ ಯಾವುದೇ ಕಾರಣಕ್ಕೂ ಬೆಳೆ ನಷ್ಟಗೊಳಿಸುವಂತಿಲ್ಲ. ಒಂದು ವೇಳೆ ಹಂಚಿಕೆಯಾದ ವಿಮಾ ಘಟಕದಲ್ಲಿ ಬಿತ್ತನೆ ಯಾಗಿರದೇ ಇದ್ದಲ್ಲಿ, ಸಂಬಂಧಿಸಿದ ತಾಲೂಕಿನ ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ನಿರ್ದೇಶಕರಿಂದ ದೃಢೀಕರಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ರೈತರ ಜೊತೆ ಸಂಪರ್ಕವಿರಿಸಿಕೊಂಡು ನಿಗದಿತ ಅವಧಿಯೊಳಗೆ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಮಾತನಾಡಿ,ಬೆಳೆ ಸಮೀಕ್ಷೆ, ನಷ್ಟ ಪರಿಹಾರ ನೀಡುವ ಪ್ರಕ್ರಿಯೆಗಳಲ್ಲಿ ತಡವಾದರೆ ರೈತರಿಗೆ ತುಂಬಾ ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫಸಲ್ ಭಿಮಾ ಯೋಜನೆಯಡಿ ವಿಶ್ವಾಸ ಕಡಿಮೆಯಾಗುತ್ತಿದೆ. ಇದಕ್ಕೆಯಾರು ಹೊಣೆ ಎಂದು ಪ್ರಶ್ನಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿಬೆಳೆ ಕಟಾವು ಕುರಿತು ವಿವರಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ ಶೇಖ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT